2 ಸಮುವೇಲನು 21
21
ದಾವೀದನ ಚರಿತ್ರೆಯ ಪೂರಣೆ
(21—24)
ಸೌಲನು ಗಿಬ್ಯೋನ್ಯರನ್ನು ಹಿಂಸಿಸಿದ್ದಕ್ಕಾಗಿ ದಾವೀದನು ಪ್ರಾಯಶ್ಚಿತ್ತಕೊಟ್ಟದ್ದು
1ದಾವೀದನ ಕಾಲದಲ್ಲಿ ಮೂರು ವರುಷಗಳವರೆಗೂ ಬಿಡದೆ ಬರವಿತ್ತು. ದಾವೀದನು ಯೆಹೋವನನ್ನು ವಿಚಾರಿಸಲು ಆತನು - ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೆಯೂ ಅವನ ಮನೆಯವರ ಮೇಲೆಯೂ ರಕ್ತಾಪರಾಧವಿರುತ್ತದೆ ಎಂದು ಉತ್ತರಕೊಟ್ಟನು. 2(ಗಿಬ್ಯೋನ್ಯರು ಇಸ್ರಾಯೇಲ್‍ಕುಲಗಳಿಗೆ ಸೇರಿದವರಲ್ಲ; ಸಂಹೃತರಾಗದೆ ಉಳಿದ ಅಮೋರಿಯರಷ್ಟೆ. ಇಸ್ರಾಯೇಲ್ಯರು ತಾವು ಇವರನ್ನು ಕೊಲ್ಲುವದಿಲ್ಲವೆಂದು ಪ್ರಮಾಣ ಮಾಡಿದ್ದರು. ಆದರೂ ಸೌಲನು ಇಸ್ರಾಯೇಲ್ ಮತ್ತು ಯೆಹೂದಕುಲಗಳ ಮೇಲೆ ತನಗಿದ್ದ ಅಭಿಮಾನದ ದೆಸೆಯಿಂದ ಇವರನ್ನೂ ನಿರ್ನಾಮಗೊಳಿಸಬೇಕೆಂದಿದ್ದನು.) 3ಆಗ ಅರಸನಾದ ದಾವೀದನು ಗಿಬ್ಯೋನ್ಯರನ್ನು ಕರೆದು - ನಾನು ನಿಮಗೋಸ್ಕರ ಏನು ಮಾಡಬೇಕೆನ್ನುತ್ತೀರಿ? ನಿಮಗೆ ಪ್ರಾಯಶ್ಚಿತ್ತವಾಗಿ ಯಾವದನ್ನು ಕೊಟ್ಟರೆ ನೀವು ಯೆಹೋವನ ಸ್ವಾಸ್ತ್ಯವನ್ನು ಆಶೀರ್ವದಿಸುವಿರಿ ಎಂದು ಕೇಳಿದನು. 4ಅದಕ್ಕೆ ಅವರು - ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯವು ಬೆಳ್ಳಿಬಂಗಾರದಿಂದ ತೀರಲಾರದು; ಇಸ್ರಾಯೇಲ್ಯರನ್ನು ಕೊಲ್ಲುವ ಅಧಿಕಾರವು ನಮಗಿಲ್ಲ ಎಂದು ಉತ್ತರ ಕೊಡಲು ಅರಸನು ಅವರಿಗೆ - ಏನು ಮಾಡಬೇಕು ಹೇಳಿರಿ, ಮಾಡುತ್ತೇನೆ ಅಂದನು. 5ಅವರು - ನಮ್ಮನ್ನು ಇಸ್ರಾಯೇಲ್‍ಪ್ರಾಂತಗಳಿಂದ ಹೊರಡಿಸುವದಕ್ಕೂ ನಿರ್ನಾಮಗೊಳಿಸುವದಕ್ಕೂ ಪ್ರಯತ್ನಿಸಿದ 6ಆ ಮನುಷ್ಯನ ಮಕ್ಕಳಲ್ಲಿ ಏಳು ಮಂದಿಯನ್ನು ನಮಗೆ ಒಪ್ಪಿಸು. ಯೆಹೋವನಿಂದ ಆರಿಸಲ್ಪಟ್ಟ ಸೌಲನು ವಾಸವಾಗಿದ್ದ ಗಿಬೆಯದಲ್ಲಿ ನಾವು ಅವರನ್ನು ಕೊಂದು ಯೆಹೋವನ ಸನ್ನಿಧಿಯಲ್ಲಿ ನೇತುಹಾಕುವೆವು ಎಂದರು. ಅರಸನು - ಆಗಲಿ, ಒಪ್ಪಿಸುತ್ತೇನೆ ಅಂದನು. 7ದಾವೀದನು ತಾನು ಸೌಲನ ಮಗನಾದ ಯೋನಾತಾನನಿಗೆ ಯೆಹೋವನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನಸಿ ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು. 8ಆದರೆ ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಅರ್ಮೋನೀ, ಮೆಫೀಬೋಶೆತ್ ಎಂಬ ಇಬ್ಬರು ಮಕ್ಕಳನ್ನೂ ಮೆಹೋಲದ ಬರ್ಜಿಲ್ಲೈಯ ಮಗನಾದ ಅದ್ರೀಯೇಲನಿಗೆ ಸೌಲನ ಮಗಳಾದ ಮೇರಬಳಲ್ಲಿ#21.8 ಮೂಲ: ಮೀಕಲಳಲ್ಲಿ; 1 ಸಮು. 18.19 ನೋಡಿರಿ. ಹುಟ್ಟಿದ ಐದು ಮಂದಿ ಮಕ್ಕಳನ್ನೂ ತೆಗೆದುಕೊಂಡು ಅವರನ್ನು ಗಿಬ್ಯೋನ್ಯರಿಗೆ ಒಪ್ಪಿಸಿದನು. 9ಅವರು ಇವರನ್ನು ಕೊಂದು ಗುಡ್ಡದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕಿದರು. ಈ ಏಳು ಮಂದಿಯೂ ಏಕಕಾಲದಲ್ಲಿ ಹತರಾದರು. ಇವರನ್ನು ಕೊಂದಾಗ ಜವೆಗೋದಿ ಸುಗ್ಗಿಯು ಆರಂಭವಾಗಿತ್ತು. 10ಆಗ ಅಯ್ಯಾಹನ ಮಗಳಾದ ರಿಚ್ಪಳು ಒಂದು ಗೋಣಿತಟ್ಟನ್ನು ತೆಗೆದುಕೊಂಡು ಅದನ್ನು ಬಂಡೆಯು ಮೇಲೆ ಹಾಸಿ ಸುಗ್ಗಿಯ ಆರಂಭದಿಂದ ಶವಗಳ ಮೇಲೆ ಮಳೆ ಬೀಳುವ ತನಕ ಅದರ ಮೇಲೆ ಕೂತುಕೊಂಡು ಹಗಲಿನಲ್ಲಿ ಆಕಾಶದ ಪಕ್ಷಿಗಳೂ ಇರುಳಿನಲ್ಲಿ ಕಾಡುಮೃಗಗಳೂ ಅವುಗಳನ್ನು ತಿನ್ನದಂತೆ ಕಾಯುತ್ತಿದ್ದಳು.
11ಅಯ್ಯಾಹನ ಮಗಳೂ ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡಿದ ಈ ಕಾರ್ಯವು ದಾವೀದನಿಗೆ ತಿಳಿಸಲ್ಪಟ್ಟಿತು. 12ಆಗ ಅವನು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವದಕ್ಕೋಸ್ಕರ ಯಾಬೇಷ್‍ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಸೌಲನನ್ನು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವನ ಮತ್ತು ಯೋನಾತಾನನ ಶವಗಳನ್ನು ಬೇತ್ಷೆಯಾನಿನ ಬೀದಿಗಳಲ್ಲಿ ತೂಗಹಾಕಿದ್ದರು. ಯಾಬೇಷ್‍ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು. 13ದಾವೀದನು ಯಾಬೇಷಿನಲ್ಲಿದ್ದ ಸೌಲಯೋನಾತಾನರ ಎಲುಬುಗಳನ್ನೂ ಗಿಬ್ಯೋನಿನಲ್ಲಿ ಹತರಾದ ಆ ಮನುಷ್ಯರ ಎಲುಬುಗಳನ್ನೂ ತೆಗೆದುಕೊಂಡು 14ಅವುಗಳನ್ನೆಲ್ಲಾ ಬೆನ್ಯಾಮೀನ್ ದೇಶದ ಚೇಲಾ ಊರಿನಲ್ಲಿ ಸೌಲನ ತಂದೆಯಾದ ಕೀಷನ ಶ್ಮಶಾನಭೂವಿುಯಲ್ಲಿ ಸಮಾಧಿಮಾಡಿಸಿದನು. ಅರಸನ ಅಪ್ಪಣೆಯಂತೆ ಇದೆಲ್ಲಾ ಆದನಂತರ ದೇಶದ ಮೇಲೆ ದೇವರಿಗಿದ್ದ ಕೋಪವು ಶಾಂತಿಯಾಯಿತು.
ದಾವೀದನ ಭಟರ ಕೆಲವು ಶೂರಕೃತ್ಯಗಳು
15ಒಂದು ಕಾಲದಲ್ಲಿ ಫಿಲಿಷ್ಟಿಯರಿಗೂ ಇಸ್ರಾಯೇಲ್ಯರಿಗೂ ತಿರಿಗಿ ಯುದ್ಧವಾಯಿತು. ದಾವೀದನು ತನ್ನ ಸೈನಿಕರನ್ನು ಕರಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋದಾಗ ಬಹಳವಾಗಿ ದಣಿದಂಥ ಅವನನ್ನು 16ರೆಫಾಯರಲ್ಲೊಬ್ಬನಾದ ಇಷ್ಬೀಬೆನೋಬ್ ಎಂಬವನು ಕೊಲ್ಲುವದಕ್ಕಿದ್ದನು. ಅವನ ಬರ್ಜಿಯ ತಾಮ್ರವು ಮುನ್ನೂರು ರೂಪಾಯಿ ತೂಕದ್ದು; ಅವನು ಸೊಂಟಕ್ಕೆ ಹೊಸ [ಕತ್ತಿಯನ್ನು] ಕಟ್ಟಿಕೊಂಡಿದ್ದನು. 17ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು ಫಿಲಿಷ್ಟಿಯನನ್ನು ಕೊಂದುಹಾಕಿದನು. ಆಗ ಜನರು ದಾವೀದನಿಗೆ - ಇಸ್ರಾಯೇಲ್ಯರ ದೀಪವು ಆರಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು ಎಂದು ಖಂಡಿತವಾಗಿ ಹೇಳಿದರು.
18ಅನಂತರ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.
19ಗೋಬಿನಲ್ಲಿ ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಬೇತ್ಲೆಹೇವಿುನವನಾದ ಯಾರೇ ಯೋರೆಗೀಮ್ ಎಂಬವನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನನ್ನು ಕೊಂದನು. ಆ ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಯಿಗಾರರ ಕುಂಟೆಯಷ್ಟು ಗಾತ್ರವಿತ್ತು.
20ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನು. 21ಅವನು ಇಸ್ರಾಯೇಲ್ಯರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮೆಯಾನನ ಮಗ ಯೋನಾತಾನನು ಅವನನ್ನು ಕೊಂದು ಹಾಕಿದನು.
22ಗತ್ ಊರಿನವರಾದ ಈ ನಾಲ್ಕು ಮಂದಿ ರೆಫಾಯರು ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.
Currently Selected:
2 ಸಮುವೇಲನು 21: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.