2 ಕೊರಿಂಥದವರಿಗೆ 1
1
ಒಕ್ಕಣೆ
1ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೂ ಸಹೋದರನಾದ ತಿಮೊಥೆಯನೂ ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಅಖಾಯ ಸೀಮೆಯಲ್ಲೆಲ್ಲಾ ಇರುವ ದೇವಜನರೆಲ್ಲರಿಗೂ ಬರೆಯುವದೇನಂದರೆ - 2ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
ಪೌಲನು ತನಗೆ ಉಂಟಾದ ಆದರಣೆಯಿಂದ ಅನೇಕರಿಗೆ ಉಪಯೋಗ ಉಂಟಾಗುವದೆಂದು ಹೇಳಿದ್ದು
3ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ; ಆತನು ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು 4ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗುತ್ತೇವೆ. 5ಯಾಕಂದರೆ ಕ್ರಿಸ್ತನ ನಿವಿುತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಆದರಣೆಯು ಕೂಡ ಕ್ರಿಸ್ತನ ಮೂಲಕ ಹೇರಳವಾಗಿ ಉಂಟಾಗುತ್ತದೆ. 6ನಮಗೆ ಸಂಕಟಬರುತ್ತದೋ ಅದರಿಂದ ನಿಮಗೆ ಧೈರ್ಯವೂ ರಕ್ಷಣೆಯೂ ಉಂಟಾಗುತ್ತದೆ; ನಮಗೆ ಸಂಕಟ ಪರಿಹಾರವಾಗುತ್ತದೋ ಅದರಿಂದ ನಿಮಗೆ ಆದರಣೆ ಆಗುತ್ತದೆ. ನಾವು ಅನುಭವಿಸುವಂಥ ಬಾಧೆಗಳನ್ನು ನೀವೂ ತಾಳ್ಮೆಯಿಂದ ಸಹಿಸಿಕೊಳ್ಳುವಂತೆ ಅದು ನಿಮ್ಮನ್ನು ಧೈರ್ಯಗೊಳಿಸುತ್ತದೆ. 7ನೀವು ಬಾಧೆಗಳಲ್ಲಿ ನಮ್ಮೊಂದಿಗೆ ಪಾಲುಗಾರರಾಗಿರುವ ಪ್ರಕಾರ ಆದರಣೆಯಲ್ಲಿಯೂ ಪಾಲುಗಾರರಾಗಿದ್ದೀರೆಂದು ನಮಗೆ ತಿಳಿದಿರುವದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.
8ಸಹೋದರರೇ, ಆಸ್ಯ ಸೀಮೆಯಲ್ಲಿ ನಮಗೆ ಸಂಭವಿಸಿದ ಸಂಕಟವನ್ನು ಕುರಿತು ವಿಚಾರಿಸುತ್ತೀರೋ ಅದರಲ್ಲಿ ನಾವು ಬಲವನ್ನು ಮೀರಿದಂಥ ಅತ್ಯಧಿಕವಾದ ಭಾರದಿಂದ ಕುಗ್ಗಿಹೋಗಿ ಜೀವವುಳಿಯುವ ಮಾರ್ಗವನ್ನು ಕಾಣದವರಾದೆವೆಂಬದನ್ನು ನೀವು ತಿಳಿಯಬೇಕೆಂದು ಅಪೇಕ್ಷಿಸುತ್ತೇನೆ. 9ಮರಣವಾಗುತ್ತದೆಂಬ ನಿಶ್ಚಯವು ನಮ್ಮೊಳಗೆ ಉಂಟಾಯಿತು; ನಾವು ನಮ್ಮ ಮೇಲೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಹೀಗಾಯಿತು. 10-11ಆತನು ನಮ್ಮನ್ನು ಎಂಥ ಭಯಂಕರಮರಣದಿಂದ ತಪ್ಪಿಸಿದನು; ಮುಂದೆಯೂ ತಪ್ಪಿಸುವನು. ನೀವು ನಮಗೋಸ್ಕರ ಪ್ರಾರ್ಥನೆ ಮಾಡುವವರಾಗಿ ಸಹಕಾರಿಗಳಾಗಿರುವದರಿಂದ ಆತನು ಇನ್ನು ಮೇಲೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ. ಹೀಗೆ ಅನೇಕರ ವಿಜ್ಞಾಪನೆಗಳಿಂದ ನಮಗೆ ದೊರಕುವ ಉಪಕಾರಕ್ಕಾಗಿ ನಮ್ಮ ನಿವಿುತ್ತ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿ ಉಂಟಾಗುವದು.
12ನಾವು ಕೇವಲ ಮಾನುಷಜ್ಞಾನವನ್ನು ಬಳಸದೆ ದೇವರ ಕೃಪೆಯನ್ನು ಆಶ್ರಯಿಸಿ ಆತನಿಂದಾಗುವ ಪವಿತ್ರತ್ವವೂ ನಿಷ್ಕಪಟತ್ವವೂ ಉಳ್ಳವರಾಗಿ ಈ ಲೋಕದಲ್ಲಿ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ನಡಕೊಂಡೆವೆಂದು ನಮ್ಮ ಮನಸ್ಸು ನಮಗೆ ಸಾಕ್ಷಿ ಹೇಳುತ್ತದೆ; 13ಇದೇ ನಮಗಿರುವ ಉಲ್ಲಾಸ. ನೀವು ನಮ್ಮ ಪತ್ರಿಕೆಗಳಲ್ಲಿ ಓದಿ ಒಪ್ಪಿಕೊಂಡ ಸಂಗತಿಗಳನ್ನೇ ಅಲ್ಲದೆ ಬೇರೆ ಯಾವದನ್ನೂ ನಾವು ನಿಮಗೆ ಬರೆಯಲಿಲ್ಲ. 14ನಾವು ನಿಮಗೆ ಉಲ್ಲಾಸಕಾರಣವಾಗಿದ್ದೇವೆಂಬದನ್ನು ನೀವು ಸ್ವಲ್ಪ ಮಟ್ಟಿಗೆ ಒಪ್ಪಿಕೊಂಡಂತೆಯೇ ಕಡೇ ತನಕ ಒಪ್ಪಿಕೊಳ್ಳುವಿರೆಂದು ನಿರೀಕ್ಷಿಸುತ್ತೇನೆ. ಹಾಗೆಯೇ ನೀವೂ ನಮ್ಮ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯಲ್ಲಿ ನಮಗೆ ಉಲ್ಲಾಸಕಾರಣವಾಗುವಿರಿ ಎಂದು ನಿರೀಕ್ಷಿಸುತ್ತೇನೆ.
ಪೌಲನು ತಾನು ಕೊರಿಂಥ ಪಟ್ಟಣಕ್ಕೆ ಬಾರದಿದ್ದದ್ದಕ್ಕೆ ಕಾರಣವನ್ನು ತಿಳಿಸಿ ಅಲ್ಲಿನ ಸಭೆಯವರು ಬಹಿಷ್ಕಾರ ಹೊಂದಿದವನನ್ನು ತಿರಿಗಿ ಸೇರಿಸಿಕೊಳ್ಳಬೇಕೆಂದು ಬುದ್ಧಿಹೇಳಿದ್ದು
15ನಾನು ಇಂಥ ಭರವಸವುಳ್ಳವನಾಗಿದ್ದು ನಿಮಗೆ ಎರಡು ಸಾರಿ ನಮ್ಮ ಮೂಲಕ ಕೃಪಾವರ ಉಂಟಾಗಬೇಕೆಂದು ಯೋಚಿಸಿದ್ದೆನು. 16ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಆಮೇಲೆ ಮಕೆದೋನ್ಯವನ್ನು ಬಿಟ್ಟು ತಿರಿಗಿ ನಿಮ್ಮ ಬಳಿಗೆ ಬಂದು ನಿವ್ಮಿುಂದ ಯೂದಾಯಕ್ಕೆ ಸಾಗಕಳುಹಿಸಲ್ಪಡಬೇಕೆಂದು ಯೋಚಿಸಿದ್ದೆನು. 17ಇದನ್ನು ಯೋಚಿಸಿದಾಗ ಚಪಲಚಿತ್ತನಾಗಿದ್ದೆನೋ? ನಾನು ಯೋಚಿಸುವದನ್ನು ಕೇವಲ ಮಾನುಷಬುದ್ಧಿಯಿಂದ ಯೋಚಿಸಿ ಹೌದು ಹೌದು ಅಂದ ಮೇಲೆ ಅಲ್ಲ ಅಲ್ಲ ಅನ್ನುವವನಾಗಿದ್ದೇನೋ? 18ನಂಬಿಗಸ್ತನಾಗಿರುವ ದೇವರಾಣೆ, ನಾವು ನಿಮಗೆ ಹೇಳುವ ಮಾತು ಒಂದು ಸಾರಿ ಹೌದೆಂದು ಒಂದು ಸಾರಿ ಅಲ್ಲವೆಂದು ಇರುವದಿಲ್ಲ. 19ನಾವು ಅಂದರೆ ನಾನೂ ಸಿಲ್ವಾನನೂ ತಿಮೊಥೆಯನೂ ನಿಮ್ಮಲ್ಲಿ ಪ್ರಸಿದ್ಧಿಪಡಿಸಿದ ದೇವರ ಮಗನಾದ ಯೇಸು ಕ್ರಿಸ್ತನು ಹೌದೆಂತಲೂ ಅಲ್ಲವೆಂತಲೂ ಎರಡು ಪ್ರಕಾರವಾಗಿರಲಿಲ್ಲ; ಆತನಲ್ಲಿ ಹೌದೆಂಬದೇ ನೆಲೆಗೊಂಡಿದೆ. 20ನಿಶ್ಚಯವಾಗಿ ದೇವರ ವಾಗ್ದಾನಗಳು ಎಷ್ಟಿದ್ದರೂ ಕ್ರಿಸ್ತನಲ್ಲೇ ದೃಢವಾಗುತ್ತವೆ. ಆದಕಾರಣ ದೇವರ ಪ್ರಭಾವವು ಪ್ರಕಾಶವಾಗುವದಕ್ಕೋಸ್ಕರ ಆತನ ಮೂಲಕವಾಗಿ ನಾವು ಆಮೆನ್ ಎಂದು ಹೇಳುತ್ತೇವೆ. 21ನಮ್ಮನ್ನು ಅಭಿಷೇಕಿಸಿ ಕ್ರಿಸ್ತನ#1.21 ಅಥವಾ, ಅಭಿಷಿಕ್ತನ; 1 ಯೋಹಾ. 2.20,27. ಅನ್ಯೋನ್ಯತೆಯಲ್ಲಿ ಸೇರಿಸಿ ನಮ್ಮನ್ನು ನಿಮ್ಮೊಂದಿಗೆ ಸ್ಥಿರಪಡಿಸುವವನು ದೇವರೇ; 22ಆತನು ನಮ್ಮ ಮೇಲೆ ಮುದ್ರೆ ಹಾಕಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಸಂಚಕಾರವಾಗಿ ಅನುಗ್ರಹಿಸಿದ್ದಾನೆ.
23ನಿಮ್ಮ ಮೇಲೆ ಕನಿಕರವಿದ್ದದರಿಂದಲೇ ನಾನು ಕೊರಿಂಥಕ್ಕೆ ಬರಬೇಕೆಂಬ ಅಭಿಪ್ರಾಯವನ್ನು ಬಿಟ್ಟುಬಿಟ್ಟೆನೆಂದು ನನ್ನ ಜೀವದಾಣೆ ಹೇಳುತ್ತೇನೆ; ಅದಕ್ಕೆ ದೇವರೇ ಸಾಕ್ಷಿಯಾಗಿರಲಿ. 24ನಾವು ನಂಬಿಕೆಯ ವಿಷಯದಲ್ಲಿಯೂ ನಿಮ್ಮ ಮೇಲೆ ದೊರೆತನಮಾಡುವವರೆಂದು ನನ್ನ ತಾತ್ಪರ್ಯವಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ; ನಂಬಿಕೆಯ ವಿಷಯದಲ್ಲಿ ದೃಢ ನಿಂತಿದ್ದೀರಿ.
Currently Selected:
2 ಕೊರಿಂಥದವರಿಗೆ 1: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.