1 ಪೇತ್ರನು 5
5
ಸಭೆಯ ಹಿರಿಯರಿಗೂ ಸಭೆಯವರೆಲ್ಲರಿಗೂ ಪ್ರಬೋಧನೆ
1ಸಭೆಯ ಹಿರಿಯರೇ, ಜೊತೆಹಿರಿಯವನಾದ ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ಕಂಡವನೂ ಇನ್ನು ಮುಂದೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ಪಾಲುಗಾರನೂ ಆಗಿದ್ದು ನಿಮ್ಮನ್ನು ಎಚ್ಚರಿಸಿ ಹೇಳುವದೇನಂದರೆ - 2ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆಮಾಡಿರಿ. 3ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನ ಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ. 4ಹಿರೀ ಕುರುಬನು ಪ್ರತ್ಯಕ್ಷನಾಗುವಾಗ ನೀವು ದೇವಪ್ರಭಾವವೆಂಬ ಎಂದಿಗೂ ಬಾಡದ ಜಯಮಾಲೆಯನ್ನು ಹೊಂದುವಿರಿ. 5ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ.
ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ. 6ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. 7ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ. 8ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. 9ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ. 10ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯಪ್ರಭಾವಕ್ಕೆ ಕರೆದ ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು. 11ಆತನಿಗೆ ಆಧಿಪತ್ಯವು ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.
ಕಡೇ ಮಾತುಗಳು
12ನಿಮ್ಮನ್ನು ಎಚ್ಚರಿಸುವದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವದಕ್ಕೂ ನಾನು ಸಂಕ್ಷೇಪವಾಗಿ ಬರೆದು ನಂಬಿಗಸ್ತನಾದ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಕೈಯಲ್ಲಿ ಇದನ್ನು ಕಳುಹಿಸಿದ್ದೇನೆ. ಈ ನಿಜವಾದ ಕೃಪೆಯಲ್ಲಿ ನಿಲ್ಲಿರಿ. 13ದೇವರು ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬೆಲಿನಲ್ಲಿರುವ ಸಭೆಯು ನಿಮಗೆ ವಂದನೆ ಹೇಳುತ್ತದೆ. 14ನನ್ನ ಮಗನಾದ ಮಾರ್ಕನು ಸಹ ವಂದನೆ ಹೇಳುತ್ತಾನೆ.
ಪ್ರೀತಿಯಿಂದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
ಕ್ರಿಸ್ತನಲ್ಲಿರುವ ನಿಮ್ಮೆಲ್ಲರಿಗೆ ಶಾಂತಿಯಿರಲಿ.
Currently Selected:
1 ಪೇತ್ರನು 5: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.