ತರುವಾಯ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹಿಂತಿರುಗಿ ಹೋಗು. ನಾನು ಫರೋಹನ ಮತ್ತು ಅವನ ಪರಿವಾರದವರ ಹೃದಯಗಳನ್ನು ಕಠಿಣಗೊಳಿಸಿದ್ದೇನೆ. ಏಕೆಂದರೆ ನಾನು ಈ ಮಹತ್ಕಾರ್ಯಗಳನ್ನು ಅವರ ಮುಂದೆ ನಡೆಸುವುದಕ್ಕೆ ಇದು ಕಾರಣವಾಯಿತು. ಇಸ್ರಾಯೇಲರು ತಮ್ಮ ಮಕ್ಕಳಿಗೂ, ಮೊಮ್ಮಕ್ಕಳಿಗೂ ನಾನು ಐಗುಪ್ತ್ಯರ ನಡುವೆ ನಡೆಸಿರುವ ಈ ಮಹತ್ಕಾರ್ಯಗಳನ್ನು ವಿವರಿಸಿ ಯೆಹೋವನು ಐಗುಪ್ತ್ಯರನ್ನು ತನಗೆ ಇಷ್ಟಬಂದ ಹಾಗೆ ಶಿಕ್ಷಿಸಿದನು ಎಂಬುದಾಗಿ ತಿಳಿಸಬೇಕು. ಹೀಗೆ ನಾನು ಫರೋಹನ ಹೃದಯವನ್ನು, ಅವನ ಪರಿವಾರದವರ ಹೃದಯಗಳನ್ನೂ ಕಠಿಣಮಾಡಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳಿಂದ ನೀವು ನನ್ನನ್ನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದನು.