Лого на YouVersion
Иконка за търсене

ಆದಿಕಾಂಡ 20

20
ಗೆರಾರಿನ ಅರಸನು ಸಾರಳನ್ನು ಮನೆಯಲ್ಲಿ ಸೇರಿಸಿಕೊಂಡು ತರುವಾಯ ಕಳುಹಿಸಿಬಿಟ್ಟದ್ದು
1ಅಬ್ರಹಾಮನು ಅಲ್ಲಿಂದ ಕಾನಾನ್ ದೇಶದ ದಕ್ಷಿಣ ಸೀಮೆಗೆ ಹೋಗುತ್ತಾ ಹೋಗುತ್ತಾ ಕಾದೇಶಿಗೂ ಶೂರಿಗೂ ನಡುವೆ ವಾಸಮಾಡಿಕೊಂಡು ಕೆಲವು ಕಾಲ ಗೆರಾರಿನಲ್ಲಿ ಇದ್ದನು. 2ಅವನು ತನ್ನ ಹೆಂಡತಿಯಾದ ಸಾರಳನ್ನು ತಂಗಿಯೆಂದು ಹೇಳಿದನಾದ್ದರಿಂದ ಗೆರಾರಿನ ಅರಸನಾದ ಅಬೀಮೆಲೆಕನು ಕರೇಕಳುಹಿಸಿ ಆಕೆಯನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡನು. 3ಆದರೆ ರಾತ್ರಿಯಲ್ಲಿ ದೇವರು ಅಬೀಮೆಲೆಕನ ಕನಸಿನಲ್ಲಿ ಬಂದು - ನೀನು ಆ ಸ್ತ್ರೀಯನ್ನು ಸೇರಿಸಿಕೊಂಡದರಿಂದ ಸಾಯತಕ್ಕವನಾಗಿದ್ದಿ; ಆಕೆ ಮುತ್ತೈದೆ ಅಂದನು. 4ಅಬೀಮೆಲೆಕನು ಆಕೆಯನ್ನು ಕೂಡಲಿಲ್ಲವಾದ್ದರಿಂದ ಅವನು - ಸ್ವಾಮೀ, ನಿರಪರಾಧಿಯಾದ ಜನವನ್ನೂ ನಾಶಮಾಡುವಿಯಾ? 5ಆ ಮನುಷ್ಯನು ಈಕೆ ತನಗೆ ತಂಗಿಯಾಗಬೇಕೆಂದು ತಾನೇ ಹೇಳಲಿಲ್ಲವೇ. ಈಕೆಯೂ ಅವನು ತನಗೆ ಅಣ್ಣನಾಗಬೇಕೆಂದು ಹೇಳಿದಳು. ನಾನು ಯರ್ಥಾರ್ಥಮನಸ್ಸಿನಿಂದಲೂ ಶುದ್ಧಹಸ್ತದಿಂದಲೂ ಇದನ್ನು ಮಾಡಿದೆನು ಅಂದನು. 6ಅದಕ್ಕೆ ದೇವರು - ನೀನು ಇದನ್ನು ಯರ್ಥಾರ್ಥಮನಸ್ಸಿನಿಂದ ಮಾಡಿದೆ ಎಂಬುದನ್ನು ನಾನು ಬಲ್ಲೆ; ಆದಕಾರಣ ನಾನಂತೂ ನೀನು ನನಗೆ ವಿರುದ್ಧವಾಗಿ ಪಾಪಮಾಡದಂತೆ ನಿನ್ನನ್ನು ತಡೆದು ಆಕೆಯನ್ನು ಮುಟ್ಟಗೊಡಿಸಲಿಲ್ಲ. 7ಹೀಗಿರುವಲ್ಲಿ ಆ ಮನುಷ್ಯನ ಹೆಂಡತಿಯನ್ನು ತಿರಿಗಿ ಅವನಿಗೆ ಒಪ್ಪಿಸಿ ಬಿಡು. ಅವನು ಪ್ರವಾದಿ, ನಿನಗೋಸ್ಕರ ನನಗೆ ಪ್ರಾರ್ಥಿಸುವನು, ಮತ್ತು ನೀನು ಬದುಕುವಿ. ಆಕೆಯನ್ನು ಒಪ್ಪಿಸುವದಿಲ್ಲವೆಂದರೆ ನೀನೂ ನಿನ್ನವರೆಲ್ಲರೂ ಸತ್ತೇ ಸಾಯುವಿರೆಂದು ತಿಳಿದುಕೋ ಎಂದು ಕನಸಿನಲ್ಲಿ ಹೇಳಿದನು. 8ಬೆಳಿಗ್ಗೆ ಅಬೀಮೆಲೆಕನು ತನ್ನ ಸೇವಕರೆಲ್ಲರನ್ನು ಕೂಡಿಸಿ ಈ ಸಂಗತಿಗಳನ್ನೆಲ್ಲಾ ತಿಳಿಸಲು ಅವರು ಬಹು ಭಯಪಟ್ಟರು. 9ಆಮೇಲೆ ಅವನು ಅಬ್ರಹಾಮನನ್ನು ಕರಿಸಿ - ನೀನು ನಮಗೆ ಮಾಡಿದ್ದೇನು? ನಾನು ಯಾವ ತಪ್ಪು ಮಾಡಿದ್ದರಿಂದ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಮಹಾಪಾತಕಕ್ಕೆ ಒಳಪಡಿಸಿದಿ? ಮಾಡಬಾರದ ಕಾರ್ಯಗಳನ್ನು ನನಗೆ ಮಾಡಿದೆ ಎಂದು ಹೇಳಿ - 10ನೀನು ಯಾವ ಉದ್ದೇಶದಿಂದ ಈ ಕಾರ್ಯವನ್ನು ಮಾಡಿದೆ ಎಂದು ಅಬ್ರಹಾಮನನ್ನು ಕೇಳಿದನು. 11ಅದಕ್ಕೆ ಅಬ್ರಹಾಮನು - ಈ ಸ್ಥಳದವರು ದೇವರ ಭಯವಿಲ್ಲದವರಾಗಿ ನನ್ನ ಹೆಂಡತಿಯ ನಿವಿುತ್ತ ನನ್ನನ್ನು ಕೊಂದಾರೆಂದು ನೆನಸಿದೆನು. 12ಅದಲ್ಲದೆ ಆಕೆ ನಿಜವಾಗಿ ನನ್ನ ತಂಗಿ ನನ್ನ ತಂದೆಯ ಮಗಳೇ; ಆದರೆ ನನ್ನ ತಾಯಿಯ ಮಗಳಲ್ಲವಾದದರಿಂದ ನನಗೆ ಹೆಂಡತಿಯಾದಳು. 13ನಾನು ದೇವಸಂಕಲ್ಪದಿಂದ ತಂದೆಯ ಮನೆಯನ್ನು ಬಿಟ್ಟು ದೇಶಾಂತರ ಹೋಗುವದಕ್ಕೆ ಹೊರಟಾಗ ನಾನು ಆಕೆಗೆ - ನಾವು ಹೋಗುವ ಎಲ್ಲಾ ಸ್ಥಳಗಳಲ್ಲಿಯೂ ನನಗೆ ನಿನ್ನಿಂದ ಒಂದು ಉಪಕಾರವಾಗಬೇಕು, ಏನಂದರೆ ನೀನು ನನ್ನನ್ನು ಅಣ್ಣನೆಂಬದಾಗಿ ಹೇಳಬೇಕೆಂದು ಬೋಧಿಸಿದೆನು ಅಂದನು. 14ಆಗ ಅಬೀಮೆಲೆಕನು ಅಬ್ರಹಾಮನಿಗೆ ಕುರಿದನಗಳನ್ನೂ ದಾಸದಾಸಿಯರನ್ನೂ ಕೊಟ್ಟು ಅವನ ಹೆಂಡತಿಯಾದ ಸಾರಳನ್ನು ಅವನಿಗೆ ಒಪ್ಪಿಸಿ - 15ಇಗೋ ನನ್ನ ದೇಶವು; ಇದರೊಳಗೆ ನಿನಗೆ ಇಷ್ಟವಿದ್ದ ಕಡೆಯಲ್ಲಿ ವಾಸಮಾಡಬಹುದು ಅಂದನು. 16ಇದಲ್ಲದೆ ಅವನು ಸಾರಳಿಗೆ - ನಿನ್ನ ಅಣ್ಣನಿಗೆ ಸಾವಿರ ರೂಪಾಯಿ ಕೊಟ್ಟಿದ್ದೇನೆ; ನಡೆದದ್ದನ್ನು ನಿನ್ನ ಕಡೆಯವರು ಲಕ್ಷ್ಯಕ್ಕೆ ತೆಗೆದುಕೊಳ್ಳದಂತೆ ಇದು ಪ್ರಾಯಶ್ಚಿತ್ತವಾಗಿರಲಿ; ನೀನು ಮಾನಸ್ಥಳೆಂದು ಇದರಿಂದ ಎಲ್ಲರೂ ತಿಳಿದುಕೊಳ್ಳುವರು ಎಂದು ಹೇಳಿದನು. 17ತರುವಾಯ ಅಬ್ರಹಾಮನು ದೇವರನ್ನು ಬೇಡಿಕೊಳ್ಳಲು ದೇವರು ಅಬೀಮೆಲೆಕನನ್ನೂ ಅವನ ಪತ್ನಿಯನ್ನೂ ದಾಸಿಯರನ್ನೂ ವಾಸಿಮಾಡಿದ್ದರಿಂದ ಅವರಿಗೆ ಮಕ್ಕಳಾದರು. 18ಮುಂಚೆ ಅಬ್ರಹಾಮನ ಹೆಂಡತಿಯಾದ ಸಾರಳ ನಿವಿುತ್ತ ಯೆಹೋವನು ಅಬೀಮೆಲೆಕನ ಮನೆಯಲ್ಲಿದ್ದ ಸ್ತ್ರೀಯರೆಲ್ಲರೂ ಬಂಜೆಯರಾಗುವಂತೆ ಮಾಡಿದ್ದನು.

Избрани в момента:

ಆದಿಕಾಂಡ 20: KANJV-BSI

Маркирай стих

Споделяне

Копиране

None

Искате ли вашите акценти да бъдат запазени на всички ваши устройства? Регистрирайте се или влезте