ಆದಿಕಾಂಡ 33

33
ಯಕೋಬ - ಏಸಾವರ ಭೇಟಿ
1ಯಕೋಬನು ಕಣ್ಣೆತ್ತಿ ನೋಡಿದಾಗ ಏಸಾವನು ನಾನೂರು ಮಂದಿ ಜನರ ಸಮೇತ ಬರುತ್ತಿದ್ದನು. ಕೂಡಲೆ ಅವನು ಲೇಯಳಿಗೂ ರಾಖೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿದನು. 2ಅವರನ್ನು ಬೇರೆ ಬೇರೆ ಮಾಡಿ ಮುಂದುಗಡೆಯಲ್ಲಿ ದಾಸಿಯರನ್ನೂ ಅವರ ಮಕ್ಕಳನ್ನೂ, ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ, ಕಡೆಯಲ್ಲಿ ರಾಖೇಲಳನ್ನೂ ಜೋಸೆಫನನ್ನೂ ನಿಲ್ಲಿಸಿದನು. 3ತಾನೇ ಅವರ ಮುಂದಾಗಿ ನಡೆದನು. ತನ್ನ ಅಣ್ಣನನ್ನು ಸಮೀಪಿಸುತ್ತಿರುವಾಗ ಏಳು ಸಾರಿ ನೆಲದ ತನಕ ಬಗ್ಗಿ ನಮಸ್ಕರಿಸಿದನು. 4ಆದರೆ ಏಸಾವನು ಅವನನ್ನು ಎದುರುಗೊಳ್ಳಲು ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. 5ಅವರಿಬ್ಬರ ಕಣ್ಣಲ್ಲೂ ನೀರು ಹರಿಯಿತು. ಬಳಿಕ ಏಸಾವನು ಕಣ್ಣೆತ್ತಿ ಆ ಮಹಿಳೆಯರನ್ನೂ ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ವಿಚಾರಿಸಿದನು.
ಯಕೋಬನು, “ದೇವರು ನಿಮ್ಮ ದಾಸನಾದ ನನಗೆ ಅನುಗ್ರಹಿಸಿದ ಮಕ್ಕಳು ಇವರೇ” ಎಂದು ಹೇಳಿದನು. 6ಆಗ ಅವನ ದಾಸಿಯರಿಬ್ಬರೂ ತಮ್ಮ ಮಕ್ಕಳನ್ನು ಕರೆದುಕೊಂಡು ಹತ್ತಿರಕ್ಕೆ ಬಂದು ನಮಸ್ಕಾರ ಮಾಡಿದರು. 7ಆಮೇಲೆ ಲೇಯಳು ತನ್ನ ಮಕ್ಕಳೊಡನೆ ಬಂದು ಅಡ್ಡಬಿದ್ದಳು; ಕಡೆಯಲ್ಲಿ ಜೋಸೆಫನೂ ರಾಖೇಲಳೂ ಬಂದು ಎರಗಿದರು.
8ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪರಿವಾರ ಏತಕ್ಕೆ?” ಎಂದು ಕೇಳಿದನು. ಯಕೋಬನು, “ಒಡೆಯನ ದಯೆ ನನಗೆ ದೊರಕಲೆಂದು ನಾನು ತಮಗೆ ಅದನ್ನು ಕಳಿಸಿಕೊಟ್ಟೆ,” ಎಂದನು.
9ಏಸಾವನು, “ತಮ್ಮಾ, ನನಗೆ ಬೇಕಾದಷ್ಟು ಆಸ್ತಿಯುಂಟು; ನಿನ್ನದು ನಿನಗೇ ಇರಲಿ,” ಎಂದನು.
10ಅದಕ್ಕೆ ಯಕೋಬನು, “ಇಲ್ಲ, ಹಾಗೆನ್ನಬಾರದು. ನಿಮಗೆ ನನ್ನ ಮೇಲೆ ದಯೆಯಿರುವುದು ನಿಜವಾಗಿದ್ದಲ್ಲಿ ನಾನು ಸಮರ್ಪಿಸುವ ಕಾಣಿಕೆಯನ್ನು ಅಂಗೀಕರಿಸಲೇಬೇಕು. ನಿಮ್ಮನ್ನು ನೋಡಿದ್ದು ದೇವರನ್ನು ನೋಡಿದ ಹಾಗಾಯಿತು. ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದೇ ಸಾಕು. 11ದೇವರ ಕೃಪೆಯಿಂದ ನನಗೆ ಬೇಕಾದುದೆಲ್ಲ ಇದೆ; ಆದಕಾರಣ ನಾನು ಸಮರ್ಪಿಸುವ ಕಾಣಿಕೆಯನ್ನು ತಾವು ದಯವಿಟ್ಟು ಅಂಗೀಕರಿಸಬೇಕು,” ಎಂದು ಹೇಳಿ ಒತ್ತಾಯಪಡಿಸಿದ್ದರಿಂದ ಏಸಾವನು ಆ ಕಾಣಿಕೆಯನ್ನು ತೆಗೆದುಕೊಂಡನು.
12ತರುವಾಯ ಏಸಾವನು, “ಗುಡಾರಗಳನ್ನು ಬಿಟ್ಟು ಮುಂದಕ್ಕೆ ಪ್ರಯಾಣ ಬೆಳೆಸೋಣ; ನಾನೂ ನಿನ್ನ ಸಂಗಡ ಬರುತ್ತೇನೆ,” ಎಂದನು. 13ಅದಕ್ಕೆ ಯಕೋಬನು, “ನನ್ನೊಡೆಯರಾದ ನಿಮಗೆ ತಿಳಿದಿರುವಂತೆ ನನ್ನ ಮಕ್ಕಳು ಎಳೆಯ ಪ್ರಾಯದವರು; ಈದಿರುವ ದನಕುರಿಗಳೂ ನನಗಿವೆ; ಒಂದೇ ದಿನ ಹೆಚ್ಚಾಗಿ ದಾರಿ ನಡೆಸಿದೆನಾದರೆ ಆಡುಕುರಿಗಳೆಲ್ಲವೂ ಸತ್ತುಹೋದಾವು. 14ತಾವು ದಯವಿಟ್ಟು ದಾಸನಿಗಿಂತಲು ಮುಂಚೆ ಹೊರಡಬಹುದು, ನಾನು ನನ್ನ ಮುಂದಿರುವ ಆಡುಕುರಿಗಳ ಹಾಗೂ ಮಕ್ಕಳ ನಡಿಗೆಗೆ ತಕ್ಕ ಹಾಗೆ ಮೆಲ್ಲಮೆಲ್ಲನೆ ನಡೆದು ನನ್ನೊಡೆಯರ ನಾಡಾದ ಎದೋಮಿಗೆ#33:14 ಅಥವಾ: ಸೇಯೀರಿಗೆ. ಬರುತ್ತೇನೆ,” ಎಂದನು
15ಏಸಾವನು, “ಹಾಗಾದರೆ, ನನ್ನ ಆಳುಗಳಲ್ಲಿ ಕೆಲವರನ್ನು ನಿನ್ನ ಸಂಗಡ ಬಿಟ್ಟುಹೋಗುತ್ತೇನೆ,” ಎಂದನು. ಯಕೋಬನು, “ಏತಕ್ಕೆ, ಬೇಡಿ, ನನ್ನೊಡೆಯರ ದಯೆ ನನ್ನ ಮೇಲಿದ್ದರೆ ಸಾಕು,” ಎಂದು ಹೇಳಿದನು. 16ಏಸಾವನು ಆ ದಿನವೇ ಎದೋಮ್ ನಾಡಿಗೆ ಹೊರಟುಹೋದನು. 17ಇತ್ತ ಯಕೋಬನು ಪ್ರಯಾಣ ಬೆಳೆಸುತ್ತಾ ಸುಕ್ಕೋತಿಗೆ ಬಂದನು. ಅಲ್ಲಿ ತನಗೋಸ್ಕರ ಮನೆಯನ್ನೂ ಮಂದೆಗಳಿಗೋಸ್ಕರ ಕೊಟ್ಟಿಗೆಗಳನ್ನೂ ಕಟ್ಟಿಸಿದನು. ಈ ಕಾರಣ ಆ ಸ್ಥಳಕ್ಕೆ ‘ಸುಕ್ಕೋತ್’#33:17 ಎಂದರೆ - ಚಪ್ಪರಗಳು. ಎಂದು ಹೆಸರಾಯಿತು.
18ಯಕೋಬನು ಮೆಸಪೊಟೇಮಿಯಾದಿಂದ ಹಿಂದಿರುಗಿ ಬಂದು ಕಾನಾನ್ ನಾಡಿನ ಶೆಕೆಮ್ ಪಟ್ಟಣಕ್ಕೆ ಸುರಕ್ಷಿತವಾಗಿ ಸೇರಿದನು. ಆ ಪಟ್ಟಣದ ಮುಂದೆಯೇ ತನ್ನ ಗುಡಾರಗಳನ್ನು ಹಾಕಿಸಿಕೊಂಡನು. 19ಗುಡಾರ ಹಾಕಿಸಿದ ಭೂಮಿಯನ್ನು, ಶೆಕೆಮಿನ ತಂದೆಯಾದ ಹಮೋರನ ಮಕ್ಕಳಿಗೆ ನೂರು ವರಹಗಳನ್ನು ಕೊಟ್ಟು ಅವರಿಂದ ಕೊಂಡುಕೊಂಡನು. 20ಅಲ್ಲೇ ಒಂದು ಬಲಿಪೀಠವನ್ನು ಕಟ್ಟಿಸಿ ಅದಕ್ಕೆ 'ಏಲ್ - ಏಲೋಹೆ - ಇಸ್ರಯೇಲ್’#33:20 ಎಂದರೆ : ‘ಇಸ್ರಯೇಲಿನ ದೇವರು’ ಎಂದು ಅರ್ಥ. ಎಂದು ಹೆಸರಿಟ್ಟನು.

المحددات الحالية:

ಆದಿಕಾಂಡ 33: KANCLBSI

تمييز النص

شارك

نسخ

None

هل تريد حفظ أبرز أعمالك على جميع أجهزتك؟ قم بالتسجيل أو تسجيل الدخول