BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve
"ಇಂದಿನ ವಾಕ್ಯಭಾಗವು ಯೇಸುವಿನ ಸೇವೆಯ ನಿಯೋಗದ ಬಗ್ಗೆ ಆಘಾತಕಾರಿಯಾದ ಪ್ರಕಟಣೆಯನ್ನು ತಿಳಿಯಪಡಿಸುತ್ತವೆ. ಯೇಸು ತಾನು ನಿಜವಾಗಿಯೂ ಮೆಸ್ಸೀಯನು (ಕ್ರಿಸ್ತ) ಎಂದು ಹೇಳುತ್ತಾನೆ, ಆದರೆ ಅದಾದ ನಂತರ ಆತನು ಹಿಂದೆ ರಾಜರು ಆಳ್ವಿಕೆ ಮಾಡಿರುವ ರೀತಿಯಲ್ಲಿ ಇಸ್ರಾಯೇಲಿನ ಮೇಲೆ ತಾನು ಆಳ್ವಿಕೆ ಮಾಡುವುದಿಲ್ಲವೆಂಬುದನ್ನು ದೃಢವಾಗಿ ಹೇಳುತ್ತಾನೆ. ಆತನು ಯೆಶಾಯ 53 ನೇ ಅಧ್ಯಾಯದಲ್ಲಿ ವರ್ಣಿಸಿರುವ ಶ್ರಮೆಸಂಕಟವನ್ನು ಅನುಭವಿಸುವ ಸೇವಕನಾಗುವ ಮೂಲಕ ಆಳುವನು. ಆತನು ತನ್ನ ಸಿಂಹಾಸನವನ್ನು ಏರಲು ಸಾಯುತ್ತಾನೆ. ಲೂಕನು ಮುಂದಿನ ಕಥೆಯಲ್ಲಿ ತಲೆಕೆಳಗಾಗಿ ಮಾಡುವ ರಾಜ್ಯದ ಕಲ್ಪನೆಯನ್ನು ವಿವರಿಸುತ್ತಾನೆ.
ಈ ಕಥೆಯಲ್ಲಿ, ಯೇಸು ತನ್ನ ಕೆಲವು ಮಂದಿ ಶಿಷ್ಯರನ್ನು ಬೆಟ್ಟದ ಮೇಲಕ್ಕೆ ಕರೆದುಕೊಂಡು ಹೋದನು, ಅಲ್ಲಿ ದೇವರ ಮಹಿಮಾನ್ವಿತ ಸಾನ್ನಿಧ್ಯವು ಪ್ರಕಾಶಮಾನವಾದ ಮೋಡದಂತೆ ಕಾಣಿಸಿಕೊಂಡಿತು, ಯೇಸು ಇದ್ದಕ್ಕಿದ್ದಂತೆ ರೂಪಾಂತರಗೊಂಡನು. ಬೆಟ್ಟದ ಮೇಲೆ ದೇವರ ಮಹಿಮೆಯನ್ನು ಅನುಭವಿಸಿದ್ದಂಥ ಇಬ್ಬರು ಪ್ರಾಚೀನ ಪ್ರವಾದಿಗಳಾದ ಮೋಶೆಯೂ ಎಲೀಯನೂ ಅಲ್ಲಿ ಪ್ರತ್ಯಕ್ಷರಾದರು. ದೇವರು ಮೋಡದೊಳಗಿಂದ, "ಈತನು ನನ್ನ ಮಗನು. ಆತನ ಮಾತುಗಳನ್ನು ಕೇಳಿರಿ" ಎಂದು ಹೇಳಿದನು. ಇದು ಒಂದು ಅದ್ಭುತಕರವಾದ ದೃಶ್ಯ! ಯೇಸುವು, ಎಲೀಯನು, ಮತ್ತು ಮೋಶೆಯು ಯೇಸು ನಿರ್ಗಮನ ಅಥವಾ ವಿಮೋಚನೆಯ ಬಗ್ಗೆ ಮಾತನಾಡಿದರು ಎಂದು ಲೂಕನು ಹೇಳುತ್ತಾನೆ. ಯೆರೂಸಲೇಮಿನಲ್ಲಿ ಯೇಸು ಮಾಡಲಿಕ್ಕಿರುವಂಥ ಕಾರ್ಯವನ್ನು ಐಗುಪ್ತದಿಂದ ಹೊರಟು ಬಂದ ಇಸ್ರಾಯೇಲರ ವಿಮೋಚನೆಯೊಂದಿಗೆ ಹೋಲಿಸುವುದಕ್ಕಾಗುವಂತೆ ಲೂಕನು ಎಕ್ಸೋಡೋಸ್ (ಗ್ರೀಕರು ಸಾವನ್ನು ವಿವರಿಸಲು ಬಳಸುತ್ತಿದ್ದ ಪದ) ಎಂಬ ಗ್ರೀಕ್ ಪದವನ್ನು ಬಳಸಿದ್ದಾನೆ.ಲೂಕನು ಇದರ ಮೂಲಕ ಯೇಸುವೇ ಸರ್ವಶ್ರೇಷ್ಠ ಪ್ರವಾದಿ ಎಂದು ನಮಗೆ ತೋರಿಸುತ್ತಿದ್ದಾನೆ. ಆತನು ಹೊಸ ಮೋಶೆಯಾಗಿದ್ದಾನೆ, ಆತನು ತನ್ನ ನಿರ್ಗಮನದ ಅಥವಾ ವಿಮೋಚನೆಯ (ಮರಣ) ಮೂಲಕ ಇಸ್ರಾಯೇಲ್ಯರನ್ನು ಪಾಪ ಮತ್ತು ದುಷ್ಟತನದ ಪ್ರಭುತ್ವದಿಂದಲೂ ಅದರ ಸಕಲ ರೀತಿಗಳಿಂದ ಬಿಡಿಸುತ್ತಾನೆ.
ಬೆರಗನ್ನುಂಟು ಮಾಡುವ ಈ ಪ್ರಕಟಣೆಯೊಂದಿಗೆ, ಗಲಿಲಾಯದಲ್ಲಿನ ಯೇಸುವಿನ ಸೇವೆಯು ಮುಕ್ತಾಯವಾಗುತ್ತದೆ, ಯೇಸು ರಾಜಧಾನಿಯತ್ತ ಹೋಗುವ ಆತನ ಸುದೀರ್ಘ ಪ್ರಯಾಣದ ಕುರಿತಾದ ಕಥೆಯನ್ನು ಲೂಕನು ಪ್ರಾರಂಭಿಸುತ್ತಾನೆ, ಅಲ್ಲಿ ಯೇಸು ಇಸ್ರಾಯೇಲಿನ ನಿಜವಾದ ರಾಜನಾಗಿ ಸಿಂಹಾಸನವನ್ನೇರಲು ಸಾಯುವನು.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ಯೆಶಾಯ 53 ರಲ್ಲಿರುವ ಪ್ರವಾದಿಯವರ ಮಾತುಗಳನ್ನು ಇಸ್ರಾಯೇಲಿನ ಸಿಂಹಾಸನವನ್ನು ಹೇಗೆ ಏರುತ್ತೇನೆ ಎಂಬುದರ ಕುರಿತು ಯೇಸು ಆಡಿದ ಮಾತುಗಳೊಂದಿಗೆ ಹೋಲಿಸಿ ನೋಡಿರಿ (9:20-25). ನೀವು ಅದರಲ್ಲಿ ಏನನ್ನು ಗಮನಿಸಿದ್ದೀರಿ?
•ಪ್ರಕಾಶಮಾನವಾದ ಮೋಡದೊಳಗಿಂದ ದೇವರು ನುಡಿದ ಮಾತುಗಳನ್ನು (9:35) ಧರ್ಮೋಪದೇಶಕಾಂಡ 18:15-19 ರಲ್ಲಿರುವ ದೇವರ ಮಾತುಗಳಿಗೆ ಹೋಲಿಸಿ ನೋಡಿರಿ.ನೀವು ಅದರಲ್ಲಿ ಏನನ್ನು ಗಮನಿಸಿದ್ದೀರಿ?
•ಈ ಲೋಕದ ರಾಜ್ಯಗಳಲ್ಲಿರುವವರು ತಮ್ಮ ಆತ್ಮಗಳು ಉಳಿಸಿಕೊಳ್ಳಲಾಗದದ್ದನ್ನು ಪಡೆಯಲು ಸಂಕಷ್ಟವನ್ನು ಅನುಭವಿಸುವುದನ್ನು ದೂರವಿಡಲು ಬಯಸುತ್ತಾರೆ. ಆದರೆ ಯೇಸು ತನ್ನ ರಾಜ್ಯದ ಜನರು ತನ್ನ ಜೀವದ ನುಡಿಗಳನ್ನು ಕೈಕೊಂಡು ನಡೆಯುವುದಕ್ಕಾಗಿ ಸ್ವಇಚ್ಛೆಯಿಂದ ಸಂಕಷ್ಟವನ್ನು ಅನುಭವಿಸಲು ಸಿದ್ಧರಿರುತ್ತಾರೆ ಮತ್ತು ಇದಕ್ಕಿಂತ ಹೆಚ್ಚು ಪ್ರಯೋಜನಕಾರಿಯಾದದ್ದು ಮತ್ತೊಂದಿಲ್ಲ ಎಂದು ಹೇಳಿದನು! ತಲೆಕೆಳಗಾಗಿ ಮಾಡುವಯೇಸುವಿನ ರಾಜ್ಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ನೀವು ಯೇಸುವನ್ನು ಹಿಂಬಾಲಿಸುವಾಗ ಮತ್ತು ಆತನ ಮಾತಿಗೆ ಕಿವಿಗೊಟ್ಟು ನಡೆಯುವಾಗ, ಸ್ವಾಭಿಮಾನದ ಕಡಗಣನೆ (9:46-50), ಸಾರ್ವಜನಿಕ ಮನ್ನಣೆ (9: 51-56), ಸುಖಸೌಕರ್ಯ ಮತ್ತು ಆತ್ಮಿಯ ಸಂಬಂಧ (9:57-60) ಎಂಬ ವಿಷಯಗಳಲ್ಲಿ ಸಂಕಷ್ಟವನ್ನು ತಾಳಿಕೊಳ್ಳುವುದನ್ನು ನೀವು ಹೇಗೆ ಕಲಿತುಕೊಂಡಿದ್ದೀರಿ?
• ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ದೇವರ ಅದ್ಭುತಕರವಾದ ಯೋಜನೆಯ ಕುರಿತು ಆಶ್ಚರ್ಯವನ್ನು ವ್ಯಕ್ತಪಡಿಸಿರಿ, ನೀವು ಯಾವುದರಲ್ಲಿ ಒದ್ದಾಡುತ್ತಿದ್ದೀರಿ ಎಂಬುದರ ಬಗ್ಗೆ ಪ್ರಾಮಾಣಿಕವಾಗಿ ತಿಳಿಸಿರಿ ಮತ್ತು ಸಂಕಷ್ಟಗಳಲ್ಲಿಯೂ ಆತನನ್ನು ಹಿಂಬಾಲಿಸಲು ಆತನ ಸಹಾಯವನ್ನು ಬಯಸಿರಿ."
Om denne planen
ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More