ಆದಿ 9

9
ನೋಹನೊಡನೆ ಒಡಂಬಡಿಕೆ
1ದೇವರು ನೋಹನನ್ನೂ, ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ. 2ಭೂಮಿಯ ಮೇಲಿರುವ ಎಲ್ಲಾ ಮೃಗಗಳೂ, ಆಕಾಶದ ಎಲ್ಲಾ ಪಕ್ಷಿಗಳೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ, ಸಮುದ್ರದ ಮೀನುಗಳೂ ನಿಮಗೆ ಹೆದರುವವು. ನಾನು ಅವುಗಳನ್ನೆಲ್ಲಾ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ. 3ಭೂಮಿಯ ಮೇಲೆ ಚಲಿಸುವ ಎಲ್ಲಾ ಕ್ರಿಮಿಕೀಟಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಹಸಿರುಪಲ್ಯಗಳನ್ನು ನಿಮಗೆ ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ.
4ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತದೊಂದಿಗೆ ನೀವು ತಿನ್ನಬಾರದು. ಏಕೆಂದರೆ ರಕ್ತದಲ್ಲಿ ಜೀವ ಇದೆ. 5ಇದಲ್ಲದೆ ನಿಮ್ಮ ರಕ್ತ ಸುರಿಸಿ ಜೀವ ತೆಗೆಯುವವನಿಗೆ ಮುಯ್ಯಿತೀರಿಸುವೆನು. ಮೃಗವಾಗಿದ್ದರೆ, ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿ ತೀರಿಸುವೆನು. ನರಹತ್ಯವು ಸಹೋದರ ಹತ್ಯವಲ್ಲವೇ?
6ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.
7ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯ ಮೇಲೆ ನಿಮಗೆ ಬಹುಸಂತಾನವಾಗಲಿ” ಎಂದು ಹೇಳಿದನು.
8ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ, 9“ಕೇಳಿರಿ ನಾನು ನಿಮ್ಮೊಂದಿಗೂ, ನಿಮ್ಮ ತರುವಾಯ ನಿಮ್ಮ ಸಂತತಿಯವರೊಂದಿಗೂ, ಒಡಂಬಡಿಕೆ ಮಾಡಿಕೊಳ್ಳುವೆನು. 10ನಿಮ್ಮೊಂದಿಗೆ ನಾವೆಯಿಂದ ಹೊರಟು ಬಂದ ಪಶು ಪಕ್ಷಿ, ಮೃಗ, ಸಕಲ ಭೂಜಂತುಗಳೊಂದಿಗೂ ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ. 11ಆ ಒಡಂಬಡಿಕೆ ಯಾವುದೆಂದರೆ, ಇನ್ನು ಮೇಲೆ ಯಾವ ಪ್ರಾಣಿಗಳೂ ಜಲಪ್ರಳಯದಿಂದ ನಾಶವಾಗುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಜಲಪ್ರಳಯವು ಬರುವುದೇ ಇಲ್ಲ” ಎಂದು ಹೇಳಿದನು.
12ದೇವರು ಪುನಃ ಹೇಳಿದ್ದೇನಂದರೆ, “ನಾನು ನಿಮ್ಮನ್ನೂ ನಿಮ್ಮ ಸಂಗಡ ಇರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಲ್ಲಿಯೂ ಮಾಡುವ ಈ ಒಡಂಬಡಿಕೆಗೆ ಮೇಘಗಳಲ್ಲಿ ನಾನು ಇಟ್ಟಿರುವ ಈ ಕಾಮನಬಿಲ್ಲೇ ಗುರುತಾಗಿರುವುದು. 13ನನಗೂ ಭೂಜೀವಿಗಳಿಗೂ ಮಾಡಿಕೊಂಡ ಒಡಂಬಡಿಕೆಗೆ ಇದೇ ಗುರುತಾಗಿರಲಿ. 14ನಾನು ಭೂಲೋಕದ ಮೇಲೆ ಮೇಘಗಳನ್ನು ಕವಿಸುವಾಗ ಆ ಕಾಮನಬಿಲ್ಲು ಮೇಘಗಳಲ್ಲಿ ಕಂಡುಬರುವುದು. 15ಆಗ ನಾನು ನಿಮ್ಮನ್ನೂ, ಎಲ್ಲಾ ಜೀವರಾಶಿಗಳನ್ನೂ ಕುರಿತು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಮುಂದೆ ನೀರು ಹೆಚ್ಚಿ ಎಲ್ಲಾ ಭೂಜೀವಿಗಳನ್ನು ಹಾಳುಮಾಡುವ ಪ್ರಳಯವಾಗುವುದಿಲ್ಲ. 16ಆ ಕಾಮನಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಆದ ಶಾಶ್ವತವಾದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು” ಅಂದನು.
17ಮತ್ತು ದೇವರು ನೋಹನಿಗೆ, “ನನಗೂ ಎಲ್ಲಾ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು” ಎಂದು ಹೇಳಿದನು.
ಶೇಮ್ ಯೆಫೆತರಿಗೆ ಸಿಕ್ಕ ಆಶೀರ್ವಾದ, ಕಾನಾನ್ಯರಿಗೆ ದೊರೆತ ಶಾಪ
18ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಯಾರೆಂದರೆ ಶೇಮ್, ಹಾಮ್, ಯೆಫೆತ್. ಹಾಮನು ಕಾನಾನನ ತಂದೆಯು. 19ಈ ಮೂವರು ನೋಹನ ಮಕ್ಕಳು. ಇವರಿಂದಲೇ ಜನರು ಉತ್ಪತ್ತಿಯಾಗಿ ಭೂಮಿಯಲ್ಲೆಲ್ಲಾ ಹರಡಿಕೊಂಡರು.
20ನೋಹನು ವ್ಯವಸಾಯಗಾರನಾಗಿದ್ದನು; ದ್ರಾಕ್ಷಿ ತೋಟ ಮಾಡುವುದನ್ನು ಮೊದಲು ಪ್ರಾರಂಭಿಸಿದವನು ಇವನೇ. 21ಒಂದು ದಿನ ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು. 22ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವುದನ್ನು ಕಂಡು, ಹೊರಗಿದ್ದ ತನ್ನ ಸಹೋದರರಾದ ಶೇಮ್ ಮತ್ತು ಯೆಫೆತರಿಗೆ ತಿಳಿಸಿದನು. 23ಆಗ ಶೇಮ್ ಮತ್ತು ಯೆಫೆತರು ಕಂಬಳಿಯನ್ನು ತೆಗೆದುಕೊಂಡು ತಮ್ಮಿಬ್ಬರ ಬೆನ್ನಿನ ಮೇಲೆ ಹಾಕಿಕೊಂಡು ಹಿಂಭಾಗವಾಗಿ ನಡೆದು ತಂದೆಗೆ ಹೊದಿಸಿ ಅವನ ಬೆತ್ತಲೆತನವನ್ನು ಮುಚ್ಚಿದರು. ಅವರು ಹಿಮ್ಮುಖರಾಗಿದ್ದುದ್ದರಿಂದ ತಂದೆಯು ಬೆತ್ತಲೆಯಾಗಿದ್ದದ್ದನ್ನು ನೋಡಲಿಲ್ಲ.
24ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚೆತ್ತು ಕಿರಿಯ ಮಗನು ಮಾಡಿದ್ದನ್ನು ತಿಳಿದು, 25“ಕಾನಾನನು
ಶಾಪಗ್ರಸ್ತನಾಗಲಿ.
ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ” ಎಂದನು.
26ಅವನು ಇನ್ನೂ ನುಡಿದದ್ದೇನೆಂದರೆ,
“ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ;
ಕಾನಾನನು ಅವರಿಗೆ ದಾಸನಾಗಿರಲಿ.
27ಯೆಫೆತನ ಮೇರೆಯನ್ನು ದೇವರು ವಿಸ್ತರಿಸಲಿ,
ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ,
ಕಾನಾನನು ಅವರಿಗೆ ದಾಸನಾಗಿರಲಿ” ಎಂದನು.
28ಪ್ರಳಯವಾದ ಮೇಲೆ ನೋಹನು ಮುನ್ನೂರೈವತ್ತು ವರ್ಷ ಬದುಕಿದನು. 29ನೋಹನು ಒಂಭೈನೂರ ಐವತ್ತು ವರ್ಷ ಬದುಕಿ ಸತ್ತನು.

Одоогоор Сонгогдсон:

ಆದಿ 9: IRVKan

Тодруулга

Хуваалцах

Хувилах

None

Тодруулсан зүйлсээ бүх төхөөрөмждөө хадгалмаар байна уу? Бүртгүүлэх эсвэл нэвтэрнэ үү

ಆದಿ 9-д зориулсан видео