ಆದಿಕಾಂಡ 9

9
ನೋಹನ ಜೊತೆ ಯೆಹೋವ ದೇವರ ಒಡಂಬಡಿಕೆ
1ದೇವರು ನೋಹನನ್ನೂ, ಅವನ ಪುತ್ರರನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿ, ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ. 2ಭೂಮಿಯ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಸಮುದ್ರದ ಎಲ್ಲಾ ಮೀನುಗಳ ಮೇಲೆಯೂ ನಿಮ್ಮ ಭಯ ಬೆದರಿಕೆಯು ಇರುವುದು. ನಿಮ್ಮ ಕೈಗೆ ಅವು ಕೊಡಲಾಗಿವೆ. 3ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ. ಹಸಿರು ಪಲ್ಯಗಳ ಹಾಗೆಯೇ, ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ.
4“ಆದರೆ ಮಾಂಸವನ್ನು ಅದರ ಜೀವವಾಗಿರುವ ರಕ್ತದೊಂದಿಗೆ ನೀವು ತಿನ್ನಬಾರದು. 5ನಿಮ್ಮ ರಕ್ತ ಸುರಿಸಿ, ಪ್ರಾಣ ತೆಗೆಯುವವರಿಗೆ, ಮುಯ್ಯಿತೀರಿಸುವೆನು, ಮೃಗವಾಗಿದ್ದರೆ ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಇನ್ನೊಬ್ಬ ಮನುಷ್ಯನಾದುದರಿಂದ ಹತಿಸಿದವನಿಗೂ ಮುಯ್ಯಿತೀರಿಸುವೆನು.
6“ಯಾರಾದರೂ ಮನುಷ್ಯರ ರಕ್ತವನ್ನು ಸುರಿಸುತ್ತಾರೋ,
ಅವರ ರಕ್ತವನ್ನು ಮನುಷ್ಯರೇ ಸುರಿಸುವರು.
ಏಕೆಂದರೆ ದೇವರು ತಮ್ಮ ಸ್ವರೂಪದಲ್ಲಿಯೇ
ಮನುಷ್ಯರನ್ನು ಸೃಷ್ಟಿಸಿದರು.
7ಆದ್ದರಿಂದ ನೀವು ಬಹುಸಂತಾನವಾಗಿ ಹೆಚ್ಚಿರಿ. ಸಂಖ್ಯೆಯಲ್ಲಿಯೂ ಅಧಿಕವಾಗಿ ಭೂಮಿಯಲ್ಲಿ ಹೆಚ್ಚಿರಿ,” ಎಂದು ಹೇಳಿದರು.
8ಇದಲ್ಲದೆ ದೇವರು ನೋಹನಿಗೂ ಅವನ ಸಂಗಡ ಇದ್ದ ಅವನ ಪುತ್ರರಿಗೂ ಹೇಳಿದ್ದೇನೆಂದರೆ, 9“ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡವೂ ನಿಮ್ಮ ತರುವಾಯ ನಿಮ್ಮ ಸಂತತಿಯವರ ಸಂಗಡವೂ 10ನಿಮ್ಮ ಜೊತೆ ನಾವೆಯೊಳಗಿಂದ ಹೊರಗೆ ಬಂದ ಎಲ್ಲಾ ಜೀವಿಗಳ ಸಹಿತ ಅಂದರೆ ಪಕ್ಷಿಗಳು, ಪಶುಗಳು, ಕಾಡುಮೃಗಗಳು ಮತ್ತು ಭೂಮಿಯ ಎಲ್ಲಾ ಜೀವಿಗಳೊಂದಿಗೆ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ 11ಜಲಪ್ರಳಯದಿಂದ ಇನ್ನು ಮೇಲೆ ಎಲ್ಲಾ ಜೀವಿಗಳು ನಾಶವಾಗುವುದಿಲ್ಲ. ಭೂಮಿಯನ್ನು ಹಾಳು ಮಾಡುವುದಕ್ಕೆ ಇನ್ನು ಮುಂದೆ ಇಂಥ ಪ್ರಳಯವು ಇರುವುದಿಲ್ಲ ಎಂದು ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ.”
12ದೇವರು ಮತ್ತೆ ಹೇಳಿದ್ದೇನೆಂದರೆ, “ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳವರೆಗೆ ನಾನು ಮಾಡುವ ಒಡಂಬಡಿಕೆಗೆ ಗುರುತು ಇದೆ: 13ನನ್ನ ಮಳೆಬಿಲ್ಲನ್ನು ಮೇಘಗಳಲ್ಲಿ ಇಟ್ಟಿದ್ದೇನೆ, ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವುದು. 14ನಾನು ಭೂಮಿಯ ಮೇಲೆ ಮೇಘಗಳನ್ನು ಬರಮಾಡುವಾಗ, ಆ ಮಳೆಬಿಲ್ಲು ಮೇಘಗಳಲ್ಲಿ ಕಂಡುಬರುವುದು. 15ಆಗ ನಾನು ನನಗೂ ನಿಮಗೂ ಪ್ರತಿಯೊಂದು ಜೀವಿಗಳಿಗೂ ಮಧ್ಯೆಯಿರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಎಲ್ಲಾ ಜೀವಿಗಳನ್ನು ನಾಶಮಾಡುವ ಪ್ರಳಯವಾಗುವುದೇ ಇಲ್ಲ. 16ಆ ಮಳೆಬಿಲ್ಲು ಮೇಘಗಳಲ್ಲಿರುವಾಗ, ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ಇರುವ ನಿತ್ಯವಾದ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವ ಹಾಗೆ, ನಾನು ಅದನ್ನು ನೋಡುವೆನು.”
17ನಂತರ ದೇವರು ನೋಹನಿಗೆ, “ಈ ಮಳೆಬಿಲ್ಲು ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಮಧ್ಯದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತಾಗಿದೆ,” ಎಂದು ಹೇಳಿದರು.
ನೋಹನ ಪುತ್ರರು
18ನಾವೆಯೊಳಗಿಂದ ಹೊರಬಂದ ನೋಹನ ಪುತ್ರರು ಯಾರೆಂದರೆ ಶೇಮ್, ಹಾಮ್, ಯೆಫೆತ್. ಹಾಮನು ಕಾನಾನನ ತಂದೆಯು. 19ಈ ಮೂವರು ನೋಹನ ಮಕ್ಕಳು; ಭೂಮಿಯ ಮೇಲೆ ಚೆದರಿದ ಎಲ್ಲ ಜನರು ಇವರಿಂದಲೇ ಉತ್ಪತ್ತಿಯಾದರು.
20ನೋಹನು ವ್ಯವಸಾಯಗಾರನಾಗಿದ್ದನು. ಅವನು ಒಂದು ದ್ರಾಕ್ಷಿತೋಟವನ್ನು ಪ್ರಾರಂಭಿಸಿದನು. 21ಅವನು ಅದರಿಂದ ಸ್ವಲ್ಪ ದ್ರಾಕ್ಷಾರಸವನ್ನು ಕುಡಿದು ಅಮಲೇರಿ, ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಮಲಗಿದ್ದನು. 22ಕಾನಾನನ ತಂದೆ ಹಾಮನು, ತನ್ನ ತಂದೆಯ ಬೆತ್ತಲೆತನವನ್ನು ನೋಡಿ, ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿದನು. 23ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತೆಗೆದುಕೊಂಡು, ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು, ಹಿಂಭಾಗವಾಗಿ ಹೋಗಿ, ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಮ್ಮುಖವಾಗಿದ್ದುದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ.
24ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚೆತ್ತು, ತನ್ನ ಕಿರಿಯ ಮಗನು ತನಗೆ ಮಾಡಿದ್ದನ್ನು ತಿಳಿದನು. 25ನಂತರ ಅವನು ಹೀಗೆಂದನು,
“ಕಾನಾನನು ಶಾಪಗ್ರಸ್ತನಾಗಲಿ,
ಅವನು ತನ್ನ ಸಹೋದರರಿಗೆ ದಾಸಾನುದಾಸನಾಗಿರಲಿ.”
26ನೋಹನು ಮತ್ತೆ ಹೇಳಿದ್ದು,
“ಶೇಮನ ದೇವರಾದ ಯೆಹೋವ ಸ್ತುತಿಹೊಂದಲಿ.
ಕಾನಾನನು ಶೇಮನಿಗೆ ದಾಸನಾಗಿರಲಿ.
27ಯೆಫೆತನ ಮೇರೆಗಳನ್ನು ದೇವರು ವಿಸ್ತರಿಸಲಿ.
ಯೆಫೆತನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ,
ಕಾನಾನನು ಯೆಫೆತನಿಗೆ ದಾಸನಾಗಿರಲಿ.”
28ಪ್ರಳಯವಾದ ಮೇಲೆ ನೋಹನು ಮುನ್ನೂರ ಐವತ್ತು ವರ್ಷ ಬದುಕಿದನು. 29ನೋಹ ಒಟ್ಟು ಒಂಬೈನೂರ ಐವತ್ತು ವರ್ಷ ಜೀವಿಸಿ, ಸತ್ತನು.

Sorotan

Berbagi

Salin

None

Ingin menyimpan sorotan di semua perangkat Anda? Daftar atau masuk