ಆದಿಕಾಂಡ 3
3
ಮನುಷ್ಯನ ಪತನ
1ಯೆಹೋವ ದೇವರು ಸೃಷ್ಟಿಸಿದ ಅಡವಿಯ ಎಲ್ಲಾ ಕಾಡುಮೃಗಗಳಿಗಿಂತ ಸರ್ಪವು ಬಹು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಗೆ, “ನೀವು ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ?” ಎಂದು ಕೇಳಿತು.
2ಆಗ ಸ್ತ್ರೀಯು ಸರ್ಪಕ್ಕೆ, “ತೋಟದ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು. 3ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಹಣ್ಣಿನ ವಿಷಯವಾಗಿ, ‘ನೀವು ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸತ್ತು ಹೋಗುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದಳು.
4ಸರ್ಪವು ಸ್ತ್ರೀಗೆ, “ನೀವು ನಿಶ್ಚಯವಾಗಿ ಸಾಯುವುದಿಲ್ಲ. 5ನೀವು ಇದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯುವುವು, ನೀವು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿತವರಾಗಿ ದೇವರ ಹಾಗೆ ಇರುವಿರಿ. ಇದು ದೇವರಿಗೆ ತಿಳಿದಿದೆ,” ಎಂದು ಹೇಳಿತು.
6ಆಗ ಸ್ತ್ರೀಯು, ಆ ಮರದ ಹಣ್ಣು ಆಹಾರಕ್ಕೆ ಒಳ್ಳೆಯದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು, ಆ ಹಣ್ಣನ್ನು ತೆಗೆದುಕೊಂಡು ತಿಂದಳು. ತನ್ನ ಸಂಗಡ ಇದ್ದ ಗಂಡನಿಗೂ ಕೊಟ್ಟಳು, ಅವನೂ ತಿಂದನು. 7ಆಗ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು, ಅವರು ಅಂಜೂರದ ಎಲೆಗಳನ್ನು ತೆಗೆದುಕೊಂಡು ತಮಗೆ ತಾವೇ ಉಡುಪುಗಳನ್ನು ಮಾಡಿಕೊಂಡರು.
8ತರುವಾಯ ಯೆಹೋವ ದೇವರು, ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ, ಆ ಸ್ತ್ರೀ ಪುರುಷರು ಅವರ ಸಪ್ಪಳವನ್ನು ಕೇಳಿ, ಅವರಿಗೆ ಕಾಣಿಸಿಕೊಳ್ಳಬಾರದೆಂದು ತೋಟದ ಮರಗಳ ಮಧ್ಯದಲ್ಲಿ ಅಡಗಿಕೊಂಡರು. 9ಆಗ ಯೆಹೋವ ದೇವರು ಮನುಷ್ಯನನ್ನು ಕರೆದು ಅವನಿಗೆ, “ನೀನು ಎಲ್ಲಿದ್ದೀ?” ಎಂದರು.
10ಅದಕ್ಕೆ ಅವನು, “ನಿನ್ನ ಶಬ್ದವನ್ನು ನಾನು ತೋಟದಲ್ಲಿ ಕೇಳಿದೆ. ನಾನು ಬೆತ್ತಲೆಯಾಗಿರುವುದರಿಂದ ಭಯಪಟ್ಟು ಅಡಗಿಕೊಂಡೆನು,” ಎಂದನು.
11ಅದಕ್ಕೆ ದೇವರು, “ನೀನು ಬೆತ್ತಲೆಯಾಗಿದ್ದೀ ಎಂದು ನಿನಗೆ ತಿಳಿಸಿದವರು ಯಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದೀಯೋ?” ಎಂದು ಕೇಳಿದರು.
12ಅದಕ್ಕೆ ಮನುಷ್ಯನು, “ನೀನು ನನ್ನ ಸಂಗಡ ಇರಿಸಿದ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು. ನಾನು ತಿಂದೆನು,” ಎಂದು ಹೇಳಿದನು.
13ಯೆಹೋವ ದೇವರು ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು,
ಅದಕ್ಕೆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು. ನಾನು ತಿಂದೆನು,” ಎಂದು ಉತ್ತರಕೊಟ್ಟಳು.
14ಆಗ ಯೆಹೋವ ದೇವರು ಸರ್ಪಕ್ಕೆ ಹೀಗೆ ಹೇಳಿದರು, “ನೀನು ಇದನ್ನು ಮಾಡಿದ ಕಾರಣ,
“ಎಲ್ಲಾ ಪಶುಗಳಲ್ಲಿಯೂ
ಎಲ್ಲಾ ಕಾಡುಮೃಗಗಳಲ್ಲಿಯೂ ನೀನು ಬಹು ಶಾಪಗ್ರಸ್ತನಾದೆ.
ಇಂದಿನಿಂದ ನಿನ್ನ ಜೀವನ ಪೂರ್ತಿ
ಹೊಟ್ಟೆಯಿಂದ ಹರಿದಾಡಿ,
ಮಣ್ಣನ್ನು ತಿನ್ನುವೆ.
15ನಾನು ನಿನಗೂ ಸ್ತ್ರೀಗೂ
ನಿಮ್ಮ ಸಂತಾನಕ್ಕೂ ಆಕೆಯ ಸಂತಾನಕ್ಕೂ
ವೈರತ್ವವನ್ನು ಇಡುವೆನು.
ಆತನು ನಿನ್ನ ತಲೆಯನ್ನು ಜಜ್ಜುವನು
ಮತ್ತು ನೀನು ಆತನ ಹಿಮ್ಮಡಿಯನ್ನು ಕಚ್ಚುವಿ.”
16ಬಳಿಕ ದೇವರು ಸ್ತ್ರೀಗೆ ಹೀಗೆ ಹೇಳಿದರು,
“ನಾನು ನಿನ್ನ ಗರ್ಭ ವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು.
ನೀನು ನೋವಿನಿಂದ ಮಕ್ಕಳನ್ನು ಹೆರುವಿ.
ನಿನ್ನ ಗಂಡನ ಮೇಲೆ ನಿನ್ನ ಬಯಕೆ ಇರುವುದು.
ಅವನು ನಿನ್ನನ್ನು ಆಳುವನು.”
17ಅನಂತರ ದೇವರು ಆದಾಮನಿಗೆ ಹೀಗೆ ಹೇಳಿದರು, “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನಿನ್ನ ಹೆಂಡತಿಯ ಮಾತು ಕೇಳಿ ತಿಂದ ಕಾರಣ,
“ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು.
ನಿನ್ನ ಜೀವಮಾನವೆಲ್ಲಾ ಕಷ್ಟಪಟ್ಟು ದುಡಿದು,
ಅದರ ಹುಟ್ಟುವಳಿಯನ್ನು ಉಣ್ಣುವೆ.
18ಭೂಮಿಯಲ್ಲಿ ಮುಳ್ಳುಗಿಡಗಳೂ ಕಳ್ಳಿಗಳೂ ಬೆಳೆಯುವುವು.
ನೀನು ಹೊಲದ ಬೆಳೆಯನ್ನು ಉಣ್ಣುವೆ.
19ನೀನು ಪುನಃ ಮಣ್ಣಿಗೆ ಸೇರುವ ತನಕ,
ಬೆವರಿಡುತ್ತಾ ಆಹಾರವನ್ನು ಉಣ್ಣುವೆ.
ನೀನು ಮಣ್ಣಿನಿಂದ ತೆಗೆದವನಾಗಿರುವುದರಿಂದ ನೀನು ಮಣ್ಣೇ.
ನೀನು ಪುನಃ ಮಣ್ಣಿಗೆ ಸೇರತಕ್ಕವನು.”
20ಆದಾಮನು#3:20 ಅಥವಾ ಮನುಷ್ಯ ತನ್ನ ಹೆಂಡತಿಯ ಹೆಸರನ್ನು ಹವ್ವ#3:20 ಹವ್ವ ಬಹುಶಃ ಇದರ ಅರ್ಥ ಬದುಕುವುದು ಎಂದು ಕರೆದನು. ಏಕೆಂದರೆ ಆಕೆಯೇ ಬದುಕಿದವರಿಗೆಲ್ಲಾ ತಾಯಿಯಾಗಿದ್ದಾಳೆ.
21ಯೆಹೋವ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದರು. 22ಯೆಹೋವ ದೇವರು, “ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿದು, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು,” ಎಂದರು. 23ಆದ್ದರಿಂದ ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡುವುದಕ್ಕೆ ಯೆಹೋವ ದೇವರು ಏದೆನ್ ತೋಟದೊಳಗಿಂದ ಅವನನ್ನು ಹೊರಗೆ ಕಳುಹಿಸಿಬಿಟ್ಟರು. 24ಹೀಗೆ ಅವರು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷದ ದಾರಿಯನ್ನು ಕಾಯುವುದಕ್ಕೆ ಏದೆನ್ ತೋಟದ ಪೂರ್ವದಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಖಡ್ಗವನ್ನೂ ಇರಿಸಿದರು.
Pilihan Saat Ini:
ಆದಿಕಾಂಡ 3: KSB
Sorotan
Berbagi
Salin
Ingin menyimpan sorotan di semua perangkat Anda? Daftar atau masuk
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.