YouVersion Logo
Search Icon

ಓಬ 1

1
ಎದೋಮಿನ ನಾಶನ
1ಓಬದ್ಯನಿಗಾದ ದೈವದರ್ಶನ. ಕರ್ತನಾದ ಯೆಹೋವನು ಎದೋಮನ್ನು ಕುರಿತು ಹೀಗೆ ನುಡಿಯುತ್ತಾನೆ: ಯೆಹೋವನಿಂದ ಬಂದ ಸಮಾಚಾರವನ್ನು ಕೇಳಿದ್ದೇವೆ. ಆತನು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾನೆ, “ಹೊರಡಿರಿ! ಯುದ್ಧಕ್ಕೆ ಹೊರಟು ಎದೋಮಿನ ಮೇಲೆ ಬೀಳೋಣ” 2ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿ ಮಾಡಿದ್ದೇನೆ. ನೀನು ಬಹಳವಾಗಿ ತಾತ್ಸಾರಕ್ಕೆ ಗುರಿಯಾಗಿರುವಿ.
3ಉನ್ನತ ಸ್ಥಾನದಲ್ಲಿ ಬಂಡೆಯ ಬಿರುಕುಗಳೊಳಗೆ ವಾಸಿಸುತ್ತಾ, ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು? ಎಂದುಕೊಳ್ಳುವ ಜನರೇ, ನಿಮ್ಮ ಹೃದಯದ ಒಣ ಹೆಮ್ಮೆಯು ನಿಮ್ಮನ್ನು ಮೋಸಗೊಳಿಸಿದೆ. 4ನೀನು ಹದ್ದಿನಂತೆ ಮೇಲಕ್ಕೆ ಏರಿದರೂ, ನಿನ್ನ ಗೂಡು ನಕ್ಷತ್ರ ಮಂಡಲದಲ್ಲಿ ನೆಲೆಗೊಂಡಿದ್ದರೂ, ಅಲ್ಲಿಂದ ನಿನ್ನನ್ನು ಇಳಿಸಿಬಿಡುವೆನು. ಇದು ಯೆಹೋವನ ನುಡಿ.
5ಕಳ್ಳರು ನಿನ್ನಲ್ಲಿ ನುಗ್ಗಿದರೆ, ರಾತ್ರಿ ವೇಳೆಯಲ್ಲಿ ಪಂಜುಗಳ್ಳರು ನಿನ್ನ ಮೇಲೆ ಬಿದ್ದರೆ, ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುವರಲ್ಲವೇ? ಆಹಾ! ನೀನು ಎಷ್ಟು ಭಂಗಪಟ್ಟಿದ್ದೀ! ದ್ರಾಕ್ಷಿಯ ಹಣ್ಣನ್ನು ಕೀಳುವವರು ನಿನ್ನ ಕಡೆಗೆ ಬಂದರೆ, ಹಕ್ಕಲನ್ನು ಉಳಿಸುವುದಿಲ್ಲವೋ? 6ಏಸಾವನ ಆಸ್ತಿಯು ಸಂಪೂರ್ಣ ನಾಶವಾಗಿ ಅದರ ನಿಧಿನಿಕ್ಷೇಪಗಳು ಸಂಪೂರ್ಣವಾಗಿ ಸೂರೆಯಾಗಿದ್ದು ಹೇಗೆ?
7ನಿನ್ನ ಮಿತ್ರ ಮಂಡಲಿಯವರೆಲ್ಲರೂ ನಿನ್ನನ್ನು ನಿನ್ನ ಮೇರೆಯ ಆಚೆಗೆ ತಳ್ಳಿಬಿಟ್ಟಿದ್ದಾರೆ, ನಿನ್ನ ಆಪ್ತರು ನಿನ್ನನ್ನು ವಂಚಿಸಿ ಸೋಲಿಸಿದ್ದಾರೆ. ನಿನ್ನ ಅನ್ನ ತಿಂದವರೇ ವಿವೇಕವಿಲ್ಲದೆ ನಿನಗೆ ಉರುಲೊಡ್ಡಿದ್ದಾರೆ. 8ಯೆಹೋವನು ಇಂತೆನ್ನುತ್ತಾನೆ. “ಆ ದಿನದಲ್ಲಿ ನಾನು ಎದೋಮಿನೊಳಗೆ ಜ್ಞಾನಿಗಳನ್ನು ಅಳಿಸದೇ ಬಿಡುವೆನೋ,” ಏಸಾವನ ಪರ್ವತದೊಳಗಿಂದ ವಿವೇಕವನ್ನು ಕಿತ್ತುಹಾಕದೇ ಇರುವೆನೇ? 9ತೇಮಾನ್ ಪಟ್ಟಣವೇ, ನಿನ್ನ ಶೂರರು ಧೈರ್ಯಗೆಟ್ಟು ಎಲ್ಲರೂ ಹತರಾಗಿ ಏಸಾವನ ಪರ್ವತದೊಳಗೆ ನಿರ್ಮೂಲರಾಗುವರು.
ಎದೋಮ್ ಯಾಕೋಬಿಗೆ ಮಾಡಿದ ದ್ರೋಹ
10ನೀನು ನಿನ್ನ ತಮ್ಮನಾದ ಯಾಕೋಬನಿಗೆ ಮಾಡಿದ ಹಿಂಸೆಯ ನಿಮಿತ್ತ ಅವಮಾನವು ನಿನ್ನನ್ನು ಕವಿಯುವುದು. ನಿತ್ಯನಾಶನಕ್ಕೆ ಗುರಿಯಾಗುವಿ. 11ಅನ್ಯರು ನಿನ್ನ ತಮ್ಮನ ಆಸ್ತಿಯನ್ನು ಕೊಳ್ಳೆಹೊಡೆದ ದಿನದಲ್ಲಿ, ಮ್ಲೇಚ್ಛರು ಅವನ ಪುರದ್ವಾರಗಳಲ್ಲಿ ಪ್ರವೇಶಿಸಿ ಯೆರೂಸಲೇಮಿನ ಸೊತ್ತಿಗಾಗಿ ಚೀಟುಹಾಕಿದ ದಿನದಲ್ಲಿ ನೀನು ಅವನಿಗೆ ಸಹಾಯ ಮಾಡದೆ ಸುಮ್ಮನೆ ನಿಂತಿದ್ದೆ. ನೀನೂ ಅವರಂತೆ ನಿನ್ನ ತಮ್ಮನಿಗೆ ಒಬ್ಬ ಶತ್ರುವಿನಂತೆ ಕಂಡುಬಂದಿ.
12ನಿನ್ನ ತಮ್ಮನ ದುರ್ದಿನದಲ್ಲಿ ಅವನ ಅಪಾಯಕಾಲದಲ್ಲಿ ನೀನು ಸುಮ್ಮನೆ ನೋಡುತ್ತಿರಬಾರದಾಗಿತ್ತು. ಯೆಹೂದ್ಯರ ನಾಶನದ ದಿನದಲ್ಲಿ ಹಿಗ್ಗಬಾರದಾಗಿತ್ತು. ಅವರ ಇಕ್ಕಟ್ಟಿನ ವೇಳೆಯಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು. 13ನನ್ನ ಜನರ ವಿಪತ್ಕಾಲದಲ್ಲಿ ಅವರ ಪುರದ್ವಾರದೊಳಗೆ ಪ್ರವೇಶಿಸಬಾರದಾಗಿತ್ತು, ಅವರ ವಿಪತ್ಕಾಲದಲ್ಲಿ ಅವರ ಕೇಡಿಗೆ ನಿನ್ನಂಥವನ ಕಣ್ಣು ಅರಳಬಾರದಾಗಿತ್ತು. ಅವರ ವಿಪತ್ಕಾಲದಲ್ಲಿ ಅವರ ಆಸ್ತಿಯ ಮೇಲೆ ನೀನು ಕೈಹಾಕಬಾರದಾಗಿತ್ತು. 14ನೀನು ಮರಣದಿಂದ ಓಡಿಹೋಗುವವರನ್ನು ಹಿಡಿದು ಕೊಲ್ಲುವುದಕ್ಕೆ ಅವರ ಮಾರ್ಗಗಳಲ್ಲಿ ನಿಂತು ಅವರನ್ನು ಸಂಹರಿಸಿದೆ. ಆ ಇಕ್ಕಟ್ಟಿನ ವೇಳೆಯಲ್ಲಿ ಪ್ರಾಣ ಉಳಿಸಿಕೊಂಡವರನ್ನು ಹಿಡಿದು ಶತ್ರುಗಳಿಗೆ ಒಪ್ಪಿಸಿಕೊಟ್ಟೆ.
15ಯೆಹೋವನ ದಿನವು ಸಮಸ್ತ ಜನಾಂಗಗಳಿಗೆ ಸಮೀಪಿಸಿದೆ. ಎದೋಮೇ, ನೀನು ಮಾಡಿದ್ದೇ ನಿನಗಾಗುವುದು. ನಿನ್ನ ಕೃತ್ಯವೇ ನಿನ್ನ ತಲೆಗೆ ಬರುವುದು.
ಯಾಕೋಬಿನ ಮುಂದಣ ಪ್ರಾಬಲ್ಯ
16ನನ್ನ ಜನರೇ, ನೀವು ನನ್ನ ಪವಿತ್ರಪರ್ವತದಲ್ಲಿ ನನ್ನ ದಂಡನೆಯ ಕಹಿ ಪಾನಮಾಡಿದ್ದಿರಿ. ನಿಮ್ಮ ಸುತ್ತಲಿರುವ ಸಕಲ ಜನಾಂಗಗಳೂ ಹೀಗೆ ನಿತ್ಯವಾಗಿ ಪಾನಮಾಡುವವು. ಹೌದು ಆ ರಾಜ್ಯಗಳು ಹೀಗೆ ಕುಡಿದು ಕಬಳಿಸಿ ಅಸ್ತಿತ್ವದಲ್ಲಿ ಇಲ್ಲದಂತೆ ಆಗುವವು. 17ಆದರೆ ಚೀಯೋನ್ ಪರ್ವತದಲ್ಲಿ ಅನೇಕರು ಉಳಿದಿರುವರು, ಆ ಪರ್ವತವು ಪರಿಶುದ್ಧವಾಗಿರುವುದು; ಯಾಕೋಬನ ವಂಶದವರು ತಮ್ಮ ಸ್ವತ್ತುಗಳನ್ನು ಅನುಭವಿಸುವರು. 18ಯಾಕೋಬನವಂಶ ಅಗ್ನಿಯಾಗಿಯೂ, ಯೋಸೇಫನ ವಂಶ ಜ್ವಾಲೆಯಾಗಿಯೂ, ಇವೆರಡೂ ಸೇರಿ ಕೊಳೆಯಂತೆ ಇರುವ ಏಸಾವನ ವಂಶವನ್ನು ಧಗಧಗನೆ ದಹಿಸಿ ಭಸ್ಮ ಮಾಡುವವು. ಏಸಾವನ ವಂಶದವರಲ್ಲಿ ಯಾರೂ ಉಳಿಯರು, ಇದು ಯೆಹೋವನೇ ನುಡಿದಿದ್ದಾನೆ.
19ಆಗ ದಕ್ಷಿಣ ಪ್ರಾಂತ್ಯದವರು ಏಸಾವಿನ ಪರ್ವತವನ್ನು ಸ್ವಾಧೀನಮಾಡಿಕೊಳ್ಳುವರು, ಇಳಕಲಿನ ಪ್ರದೇಶದವರು ಫಿಲಿಷ್ಟಿಯರನ್ನೂ, ಎಫ್ರಾಯೀಮಿನ ಭೂಮಿಯನ್ನೂ ಮತ್ತು ಸಮಾರ್ಯದ ನೆಲವನ್ನೂ ವಶಮಾಡಿಕೊಳ್ಳುವರು. ಬೆನ್ಯಾಮೀನಿನವರು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವರು.
20ಸೆರೆಹೋಗಿರುವ ಆ ದಂಡಿನ ಇಸ್ರಾಯೇಲರು ಕಾನಾನ್ಯರ ದೇಶವನ್ನು ಚಾರೆಪತಿನವರೆಗೆ ತಮ್ಮದಾಗಿ ಮಾಡಿಕೊಳ್ಳುವರು. ಸೆಫಾರ ದಿನದಲ್ಲಿ ಸೆರೆಯಾಗಿ ಹೋಗಿರುವ ಯೆರೂಸಲೇಮಿನವರು ದಕ್ಷಿಣ ಪ್ರಾಂತ್ಯದ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು. 21ರಕ್ಷಕರು ಚೀಯೋನ್ ಪರ್ವತದಲ್ಲಿ ಎದ್ದು ಏಸಾವನ ಪರ್ವತವನ್ನು ಆಳುವರು. ಆಗ ಆ ರಾಜ್ಯವು ಯೆಹೋವನದಾಗಿರುವುದು.

Currently Selected:

ಓಬ 1: IRVKan

Highlight

Share

Copy

None

Want to have your highlights saved across all your devices? Sign up or sign in