ನೆಹೆ 13
13
ನೆಹೆಮೀಯನು ಸಾಧಿಸಿದ ಇತರ ಧಾರ್ಮಿಕ ಸುಧಾರಣೆಗಳು
1ಅಂದು ಜನರ ಮುಂದೆ ಮೋಶೆಯ ಧರ್ಮನಿಯಮಗಳ ಪಾರಾಯಣವು ನಡೆಯುತ್ತಿರಲಾಗಿ, ಅದರಲ್ಲಿ ಅಮ್ಮೋನಿಯರಾಗಲಿ ಹಾಗು ಮೋವಾಬ್ಯರಾಗಲಿ ದೇವರ ಸಭೆಯಲ್ಲಿ ಎಂದಿಗೂ ಪ್ರವೇಶಮಾಡಬಾರದು. 2ಯಾಕೆಂದರೆ ಅವರು ಇಸ್ರಾಯೇಲರನ್ನು ಅನ್ನಪಾನಗಳೊಡನೆ ಎದುರುಗೊಳ್ಳಲಿಲ್ಲ, ಅವರನ್ನು ಶಪಿಸುವುದಕ್ಕಾಗಿ ಬಿಳಾಮನಿಗೆ ಹಣವನ್ನು ಕೊಟ್ಟು ಅವನನ್ನು ಕರೆಯಿಸಿದರು. ನಮ್ಮ ದೇವರಾದರೋ ಅವನಿಂದ ಶಾಪವನ್ನಲ್ಲ, ಆಶೀರ್ವಾದವನ್ನೇ ಹೇಳಿಸಿದನು ಎಂಬ ಮಾತು ಬರೆದಿರುವುದಾಗಿ ಕಂಡು ಬಂದಿತು. 3ಇಸ್ರಾಯೇಲರು ಈ ಧರ್ಮವಿಧಿಯನ್ನು ಕೇಳಿದೊಡನೆ ಎಲ್ಲಾ ಮಿಶ್ರಜಾತಿಯವರನ್ನು ತಮ್ಮ ಮಧ್ಯದಿಂದ ಬೇರ್ಪಡಿಸಿದರು.
4ಇದಕ್ಕಿಂತ ಮೊದಲು ಯಾಜಕನಾದ ಎಲ್ಯಾಷೀಬನು ನಮ್ಮ ದೇವಾಲಯದ ಕೊಠಡಿಗಳ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟಿದ್ದನು. ಇವನು ಟೋಬೀಯನ ಸಂಬಂಧಿಕನಾಗಿದ್ದನು. 5ನೈವೇದ್ಯದ್ರವ್ಯ, ಧೂಪ, ಪಾತ್ರೆ ಇವುಗಳನ್ನೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ, ದಶಮಾಂಶವನ್ನೂ, ಲೇವಿಯರಿಗೆ, ಗಾಯಕರಿಗೆ, ದ್ವಾರಪಾಲಕರಿಗೆ ಸಲ್ಲತಕ್ಕ ಪದಾರ್ಥಗಳನ್ನೂ, ಯಾಜಕರಿಗೋಸ್ಕರ ಪ್ರತ್ಯೇಕಿಸತಕ್ಕ ಪದಾರ್ಥಗಳನ್ನೂ, ಇಡುವುದಕ್ಕಾಗಿ ಉಪಯೋಗಿಸುತ್ತಿದ್ದ ಕೊಠಡಿಯನ್ನು ಟೋಬೀಯನಿಗೋಸ್ಕರ ಸಿದ್ಧಮಾಡಿಸಿ ಕೊಟ್ಟಿದ್ದನು. 6ಬಾಬಿಲೋನಿನ ಅರಸನಾದ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅರಸನ ಬಳಿಗೆ ಹೋಗಿದ್ದೆನು. ಇದೆಲ್ಲಾ ನಡೆಯುವಾಗ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ. ಕಾಲಾಂತರದಲ್ಲಿ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು, 7ಹಿಂತಿರುಗಿ ಯೆರೂಸಲೇಮಿಗೆ ಬಂದೆನು. ಎಲ್ಯಾಷೀಬನು ಟೋಬೀಯನಿಗೋಸ್ಕರ ದೇವಾಲಯದ ಪ್ರಾಕಾರದೊಳಗೆ ಕೊಠಡಿಯನ್ನು ಸಿದ್ಧಮಾಡಿಕೊಟ್ಟಿದ್ದನ್ನು ನೋಡಿ, 8ಈ ದುಷ್ಕೃತ್ಯದ ದೆಸೆಯಿಂದ ಬಹಳವಾಗಿ ನೊಂದುಕೊಂಡು, ಟೋಬೀಯನ ಮನೆಯ ಸಾಮಾನುಗಳನ್ನು ಆ ಕೊಠಡಿಯಿಂದ ಹೊರಗೆ ಹಾಕಿಸಿದೆನು. 9ಕೊಠಡಿಯನ್ನು ಶುದ್ಧಮಾಡುವುದಕ್ಕಾಗಿ ಅಪ್ಪಣೆಕೊಟ್ಟು ಅದು ಶುದ್ಧವಾದ ಮೇಲೆ ದೇವಾಲಯದ ಪಾತ್ರೆ, ನೈವೇದ್ಯದ್ರವ್ಯ, ಧೂಪ ಇವುಗಳನ್ನು ಪುನಃ ಆ ಕೊಠಡಿಯಲ್ಲಿ ಇಡಿಸಿದೆನು.
10ಇದಲ್ಲದೆ, ಲೇವಿಯರಿಗೆ ಸಲ್ಲತಕ್ಕ ಭಾಗಗಳು ಅವರಿಗೆ ಸಿಕ್ಕಲಿಲ್ಲವೆಂದೂ, ಆರಾಧನೆ ನಡೆಸತಕ್ಕ ಲೇವಿಯರೂ, ಗಾಯಕರೂ ತಮ್ಮ ತಮ್ಮ ಭೂಸ್ವಾಸ್ಥ್ಯಗಳಿಗೆ ಹಿಂತಿರುಗಿ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು. 11ಇದರ ದೆಸೆಯಿಂದ ನಾನು ಅಧಿಕಾರಿಗಳನ್ನು ಗದರಿಸಿ, “ದೇವಾಲಯವನ್ನು ಅಲಕ್ಷ್ಯ ಮಾಡಿದ್ದೇಕೆ?” ಎಂದು ಕೇಳಿದ್ದಲ್ಲದೆ ಬಿಟ್ಟು ಹೋದವರನ್ನು ಪುನಃ ಕರೆಯಿಸಿ ಅವರನ್ನು ಅವರವರ ಉದ್ಯೋಗಗಳಲ್ಲಿ ಇರಿಸಿದೆನು. 12ಆಗ ಎಲ್ಲಾ ಯೆಹೂದ್ಯರು ತಮ್ಮ ತಮ್ಮ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಲ್ಲಿ ದಶಮಾಂಶವನ್ನು ತಂದು ಭಂಡಾರಗಳಲ್ಲಿ ಹಾಕಿದರು. 13ನಂತರ ಉಗ್ರಾಣಗಳ ಮೇಲ್ವಿಚಾರಣೆಗಾಗಿ ನೋಡುವುದಕ್ಕೋಸ್ಕರ ಯಾಜಕನಾದ ಶೆಲೆಮ್ಯ, ಲೇಖಕನಾದ ಚಾದೋಕ್, ಲೇವಿಯ ಕುಲದವನಾದ ಪೆದಾಯ ಇವರನ್ನೂ, ಇವರ ಸಹಾಯಕ್ಕಾಗಿ ಜಕ್ಕೂರನ ಮಗನೂ, ಮತ್ತನ್ಯನ ಮೊಮ್ಮಗನೂ ಆದ ಹಾನಾನನನ್ನೂ ನೇಮಿಸಿದೆನು. ಇವರೆಲ್ಲರೂ ನಂಬಿಗಸ್ತರೆಂದು ಹೆಸರುಗೊಂಡವರಾಗಿದ್ದರು. ತಮ್ಮ ಸಹೋದರರಿಗೆ ಸಿಕ್ಕತಕ್ಕದ್ದನ್ನು ಹಂಚಿಕೊಡುವುದು ಇವರ ಕರ್ತವ್ಯವಾಗಿತ್ತು. 14ನನ್ನ ದೇವರೇ, ಇದನ್ನು ನನ್ನ ಹಿತಕ್ಕಾಗಿ ನೆನಪುಮಾಡಿಕೋ. ನಾನು ನನ್ನ ದೇವರ ಆಲಯದ ಮತ್ತು ಅದರ ಸೇವೆಯ ಸಂಬಂಧವಾಗಿ ಮಾಡಿದ ಭಕ್ತಿಕಾರ್ಯಗಳನ್ನು ನಿನ್ನ ಪುಸ್ತಕದಿಂದ ಆಳಿಸಿಬಿಡಬೇಡ.
15ಆ ಕಾಲದಲ್ಲಿ ಯೆಹೂದದಲ್ಲಿ ಕೆಲವರು ಸಬ್ಬತ್ ದಿನದಲ್ಲಿ ತೊಟ್ಟಿಯೊಳಗೆ ದ್ರಾಕ್ಷಿ ತುಳಿಯುವುದನ್ನೂ, ಕಣದ ಕಾಳನ್ನು ಕೂಡಿಸಿ, ಆ ಕಾಳುಗಳನ್ನೂ, ದ್ರಾಕ್ಷಾರಸ, ದ್ರಾಕ್ಷಿ, ಅಂಜೂರದ ಹಣ್ಣು ಈ ಮುಂತಾದವುಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಆ ದಿನದಲ್ಲೇ ಯೆರೂಸಲೇಮಿಗೆ ತರುವುದನ್ನೂ ಕಂಡೆನು. ಅವರು ಆ ಆಹಾರ ಪದಾರ್ಥಗಳನ್ನು ಮಾರುವುದಕ್ಕೆ ಬಂದಾಗ ನಾನು ಅವರನ್ನು ವಿರೋಧಿಸಿದೆನು. 16ಇದಲ್ಲದೆ ದೇಶದಲ್ಲಿ ವಾಸಿಸುತ್ತಿದ್ದ ತೂರ್ಯರು ಮೀನು ಮುಂತಾದ ಸರಕುಗಳನ್ನು ತಂದು ಯೆಹೂದ್ಯರಿಗೆ ಸಬ್ಬತ್ ದಿನದಲ್ಲಿ ಯೆರೂಸಲೇಮಿನಲ್ಲೇ ಮಾರುತ್ತಿದ್ದರು. 17ಆಗ ನಾನು ಯೆಹೂದದ ಶ್ರೀಮಂತರಿಗೆ, “ನೀವು ಮಾಡುವುದು ಎಂಥ ದುಷ್ಕೃತ್ಯ, ನೀವು ಸಬ್ಬತ್ ದಿನವನ್ನು ಅಶುದ್ಧ ಮಾಡುತ್ತಿದ್ದೀರಿ. 18ನಿಮ್ಮ ಪೂರ್ವಿಕರು ಹೀಗೆ ಮಾಡಿದರೋ? ನಮ್ಮ ದೇವರು ಈ ಎಲ್ಲಾ ಕೇಡನ್ನು ನಮ್ಮ ಮೇಲೆಯೂ, ನಮ್ಮ ಪಟ್ಟಣದ ಮೇಲೆಯೂ ಬರಮಾಡಿದ್ದನಲ್ಲವೇ? ಹೀಗಿರಲಾಗಿ ನೀವೂ ಸಬ್ಬತ್ ದಿನವನ್ನು ಅಶುದ್ಧಮಾಡಿ ಇಸ್ರಾಯೇಲರ ಮೇಲೆ ದೈವಕೋಪವನ್ನು ಹೆಚ್ಚಿಸುತ್ತೀರಿ” ಎಂದು ಹೇಳಿ ಅವರನ್ನು ಗದರಿಸಿದೆನು. 19ಇದಲ್ಲದೆ, ಸಬ್ಬತ್ ದಿನ ಪ್ರಾರಂಭವಾಗುವುದಕ್ಕಿಂತ ಮೊದಲು ಯೆರೂಸಲೇಮಿನ ಬಾಗಿಲುಗಳನ್ನು ಕತ್ತಲಾಗುವುದಕ್ಕೆ ಮೊದಲೇ ಮುಚ್ಚಿಸಿ, ಸಬ್ಬತ್ ದಿನವು ಮುಗಿಯುವವರೆಗೂ ಅವುಗಳನ್ನು ತೆರೆಯಬಾರದೆಂದು ಆಜ್ಞಾಪಿಸಿ, ಯಾವ ಹೊರೆಯೂ ಒಳಗೆ ಬಾರದಂತೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಿಲುಗಳ ಬಳಿಯಲ್ಲಿ ಕಾವಲಿರಿಸಿದೆನು. 20ಇದರಿಂದ ವರ್ತಕರೂ, ಎಲ್ಲಾ ತರದ ದಿನನಿತ್ಯ ಬಳಕೆಯ ವಸ್ತುಗಳನ್ನು ಮಾರುವುದಕ್ಕೆ ಬಂದವರೂ, ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ಇಳಿದುಕೊಂಡರು. 21ಕೊನೆಗೆ ನಾನು ಅವರಿಗೆ, “ನೀವು ಗೋಡೆಯ ಹೊರಗೇಕೆ ಇಳಿದುಕೊಂಡಿದ್ದೀರಿ? ನೀವು ಪುನಃ ಹೀಗೆ ಮಾಡಿದರೆ ನಿಮ್ಮನ್ನು ಸೆರೆಹಿಡಿಸುವೆನು” ಎಂದು ಗದರಿಸಲು, ಅವರು ಅಂದಿನಿಂದ ಸಬ್ಬತ್ ದಿನದಲ್ಲಿ ಪುನಃ ಬರಲೇ ಇಲ್ಲ. 22ಆ ಮೇಲೆ ನಾನು ಲೇವಿಯರಿಗೆ, “ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಆಚರಿಸುವ ಹಾಗೆ ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ಬಂದು ಬಾಗಿಲುಗಳನ್ನು ಕಾಯಬೇಕು” ಎಂದು ಆಜ್ಞಾಪಿಸಿದೆನು. ನನ್ನ ದೇವರೇ, ಇದನ್ನೂ ನನ್ನ ಹಿತಕ್ಕಾಗಿ ನೆನಪುಮಾಡಿಕೊಂಡು, ನಿನ್ನ ಮಹಾಕೃಪೆಗೆ ಅನುಸಾರವಾಗಿ ನನ್ನನ್ನು ಕನಿಕರಿಸು. 23ಅದೇ ಕಾಲದಲ್ಲಿ ನಾನು ಅಷ್ಡೋದ್, ಅಮ್ಮೋನಿಯ, ಮೋವಾಬ್ ಸ್ತ್ರೀಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕುರಿತು ವಿಚಾರಣೆ ಮಾಡಿದೆನು. 24ಅವರ ಮಕ್ಕಳಲ್ಲಿ ಅರ್ಧ ಮಂದಿ ಯೂದಾಯ ಭಾಷೆಯಲ್ಲಿ ಮಾತನಾಡದೆ, ಅಷ್ಡೋದ್ಯ ಭಾಷೆಯನ್ನಾಡುತ್ತಾರೆಂದು ತಿಳಿದು ನಾನು ಕೋಪಗೊಂಡೆನು. 25ಅವರನ್ನು ಶಪಿಸಿ, ಅವರಲ್ಲಿ, ಕೆಲವರನ್ನು ಹೊಡೆದು ಅವರ ಕೂದಲುಗಳನ್ನು ಕಿತ್ತು, 26ಇಂತಹ ಸ್ತ್ರೀಯರ ದೆಸೆಯಿಂದ ಇಸ್ರಾಯೇಲ್ ರಾಜನಾದ ಸೊಲೊಮೋನನು ದೋಷಿಯಾದನಲ್ಲವೇ? ಅನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನು ಇರಲಿಲ್ಲ. ಅವನು ತನ್ನ ದೇವರಿಗೆ ಪ್ರಿಯನಾಗಿದ್ದನು. ಆದ್ದರಿಂದ ದೇವರು ಅವನನ್ನು ಎಲ್ಲಾ ಇಸ್ರಾಯೇಲರ ಮೇಲೆ ಅರಸನನ್ನಾಗಿ ನೇಮಿಸಿದನು. ಆದರೂ ಅನ್ಯದೇಶದ ಸ್ತ್ರೀಯರು ಅವನನ್ನು ಪಾಪದಲ್ಲಿ ಬೀಳಿಸಿಬಿಟ್ಟರು. 27ಹೀಗಿರಲಾಗಿ ನೀವೂ ಅನ್ಯಸ್ತ್ರೀಯರನ್ನು ಮದುವೆಮಾಡಿಕೊಂಡು ಅದೇ ಘೋರವಾದ ದುಷ್ಟತ್ವವನ್ನು ಮಾಡಿ ದೇವರಿಗೆ ದ್ರೋಹಿಗಳಾಗುವುದನ್ನು ನಾವು ಒಪ್ಪಿಕೊಳ್ಳಬೇಕೋ? ಎಂದು ಅವರನ್ನು ಗದರಿಸಿ “ಅವರ ಮಕ್ಕಳಿಗೆ ಹೆಣ್ಣನ್ನು ಕೊಡಬಾರದು, ನಿಮಗಾಗಲಿ ನಿಮ್ಮ ಮಕ್ಕಳಿಗಾಗಲಿ ಅವರಿಂದ ತರಲೂಬಾರದು” ಎಂಬ ಧರ್ಮವಿಧಿಯನ್ನು ಕೈಕೊಳ್ಳುವುದಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದೆನು.
28ಮಹಾಯಾಜಕನಾದ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲೊಬ್ಬನು ಹೊರೋನ್ಯನಾದ ಸನ್ಬಲ್ಲಟನಿಗೆ ಅಳಿಯನಾಗಿದ್ದರಿಂದ ಅವನನ್ನು ನನ್ನ ಸನ್ನಿಧಿಯಿಂದ ಓಡಿಸಿಬಿಟ್ಟೆನು. 29ನನ್ನ ದೇವರೇ, ಅವರು ಯಾಜಕತ್ವವನ್ನೂ, ಯಾಜಕರ ಮತ್ತು ಲೇವಿಯರ ಪ್ರತಿಜ್ಞೆಯನ್ನೂ ಹೊಲೆಮಾಡಿದ್ದಾರಲ್ಲಾ. ಅವರ ಕೃತ್ಯಗಳನ್ನೂ ನೆನಪುಮಾಡಿಕೋ. 30ನಾನು ಈ ಪ್ರಕಾರ ಅನ್ಯವಾದದ್ದನ್ನೆಲ್ಲಾ ತೆಗೆಯಿಸಿ ಅವರನ್ನು ಶುದ್ಧಪಡಿಸಿದೆನಲ್ಲದೆ, ಯಾಜಕರಲ್ಲಿಯೂ, ಲೇವಿಯರಲ್ಲಿಯೂ ಪ್ರತಿಯೊಬ್ಬನಿಗಿರುವ ಕೆಲಸದ ವಿಷಯವಾಗಿಯೂ ಕ್ರಮಗಳನ್ನು ಏರ್ಪಡಿಸಿದೆನು. 31ನಿಯಮಿತ ಕಾಲಗಳನ್ನು, ಸಲ್ಲತಕ್ಕ ಕಟ್ಟಿಗೆ ದಾನದ ಮತ್ತು ಪ್ರಥಮ ಫಲದ ವಿಷಯವಾಗಿಯೂ ಕ್ರಮಗಳನ್ನು ಏರ್ಪಡಿಸಿದೆನು. ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು ನೆನಪುಮಾಡಿಕೋ.
Currently Selected:
ನೆಹೆ 13: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.