ಮಾರ್ಕ 15
15
ಪಿಲಾತನ ಮುಂದೆ ಯೇಸುವಿನ ವಿಚಾರಣೆ
ಮತ್ತಾ 27:12-26; ಲೂಕ 23:1-25; ಯೋಹಾ 18:28-19:16
1ಬೆಳಗಾದ ಕೂಡಲೆ ಮುಖ್ಯಯಾಜಕರೂ, ಹಿರಿಯರೂ, ಶಾಸ್ತ್ರಿಗಳೂ, ಹಿರೀಸಭೆಯ ಸದಸ್ಯರೆಲ್ಲರೂ ಒಟ್ಟುಗೂಡಿ ಆಲೋಚನೆ ಮಾಡಿಕೊಂಡು ಯೇಸುವನ್ನು ಕಟ್ಟಿಸಿ ಕರೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿದರು. 2ಪಿಲಾತನು ಆತನನ್ನು, “ನೀನು ಯೆಹೂದ್ಯರ ಅರಸನೋ” ಎಂದು ಕೇಳಲು ಆತನು, “ನೀನೇ ಹೇಳಿದ್ದೀ” ಎಂದು ಉತ್ತರಕೊಟ್ಟನು. 3ಮುಖ್ಯಯಾಜಕರು ಆತನ ಮೇಲೆ ತುಂಬಾ ದೂರು ಹೇಳುತ್ತಿದ್ದರು.
4ಆಗ ಪಿಲಾತನು ಪುನಃ ಯೇಸುವನ್ನು, “ನೀನು ಏನೂ ಉತ್ತರಕೊಡುವುದಿಲ್ಲವೇ? ಇವರು ನಿನ್ನ ಮೇಲೆ ತುಂಬಾ ದೂರುಗಳನ್ನು ಹೇಳುತ್ತಿದ್ದಾರೆ ನೋಡು” ಎಂದು ಹೇಳಿದನು. 5ಆದರೆ ಯೇಸು ಏನೂ ಉತ್ತರಕೊಡಲಿಲ್ಲ. ಅದನ್ನು ನೋಡಿ ಪಿಲಾತನು ಆಶ್ಚರ್ಯಪಟ್ಟನು.
6ಪ್ರತಿ ಪಸ್ಕಹಬ್ಬದಲ್ಲಿ ಜನರು ಬೇಡಿದ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಅಧಿಕಾರಕ್ಕೆ ಸೇರಿದ ಪದ್ಧತಿಯಾಗಿತ್ತು. 7ಅಲ್ಲಿ ಬರಬ್ಬನೆಂಬುವನೊಬ್ಬನಿದ್ದನು; ಇವನನ್ನು ದಂಗೆಯಲ್ಲಿ ಕೊಲೆ ಮಾಡಿದ ದಂಗೆಗಾರರೊಂದಿಗೆ ಬಂಧಿಸಿದ್ದರು. 8ಜನರು ಪಿಲಾತನ ಬಳಿಗೆ ಹೋಗಿ, ನೀನು ನಮಗೆ ಮಾಡುತ್ತಾ ಬಂದ ಪದ್ಧತಿಯ ಪ್ರಕಾರ ಮಾಡು ಎಂದು ಕೇಳಿಕೊಳ್ಳುತ್ತಿದ್ದರು.
9-10ಮುಖ್ಯಯಾಜಕರು ಅಸೂಯೆಯಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದಾರೆಂದು ಪಿಲಾತನು ಗ್ರಹಿಸಿಕೊಂಡು, “ನಾನು ಯೆಹೂದ್ಯರ ಅರಸನನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತಿರೋ?” ಎಂದು ಅವರನ್ನು ಕೇಳಿದನು. 11ಆದರೆ ಮುಖ್ಯಯಾಜಕರು, ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಬೇಡಿಕೊಳ್ಳಿರಿ ಎಂಬುದಾಗಿ ಜನರನ್ನು ಪ್ರೇರೇಪಿಸಿದರು.
12ಅದಕ್ಕೆ ಪಿಲಾತನು ತಿರುಗಿ ಅವರನ್ನು, “ಹಾಗಾದರೆ ನೀವು ಹೇಳುವ ಯೆಹೂದ್ಯರ ಅರಸನನ್ನು ನಾನೇನು ಮಾಡಲಿ?” ಎಂದು ಕೇಳಿದನು. 13ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಮತ್ತಷ್ಟು ಕೂಗಿಕೊಂಡರು. 14ಪಿಲಾತನು, “ಏಕೆ? ಇವನು ಏನು ಅಪರಾಧ ಮಾಡಿದ್ದಾನೆ?” ಅಂದನು. ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿ ಕೂಗಿಕೊಂಡರು. 15ಅದಕ್ಕೆ ಪಿಲಾತನು ಜನಸಮೂಹವನ್ನು ಮೆಚ್ಚಿಸಬೇಕೆಂದು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ, ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
ಯೇಸುವನ್ನು ಪರಿಹಾಸ್ಯಮಾಡಿದ್ದು
ಮತ್ತಾ 27:27-56; ಲೂಕ 23:26-49; ಯೋಹಾ 19:17-30
16ಸಿಪಾಯಿಗಳು ಆತನನ್ನು ಅಧಿಪತಿಯ ಅರಮನೆಯ ಅಂಗಳದೊಳಗೆ ಕರೆದುಕೊಂಡು ಹೋಗಿ, ತಮ್ಮ ಪಡೆಯನ್ನೆಲ್ಲವನ್ನೂ ಒಟ್ಟಿಗೆ ಸೇರಿಸಿಕೊಂಡರು. 17ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟರು. 18ಅನಂತರ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಆತನಿಗೆ ಅಪಹಾಸ್ಯಮಾಡಿ ವಂದಿಸಿದರು.
19ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು, ಆತನ ಮೇಲೆ ಉಗುಳಿ, ಆತನ ಮುಂದೆ ಮೊಣಕಾಲೂರಿ ನಮಸ್ಕರಿಸಿದರು. 20ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ನಸುಗೆಂಪು ಮೇಲಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಆತನಿಗೆ ತೊಡಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು.
ಯೇಸುವನ್ನು ಶಿಲುಬೆಗೇರಿಸಿದ್ದು
21ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವುದಕ್ಕೆ ಒತ್ತಾಯಪಡಿಸಿದರು. ಅವನು ಯಾರೆಂದರೆ, ಅಲೆಕ್ಸಾಂದ್ರ ಹಾಗೂ ರೂಫ ಎಂಬುವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು. 22ಬಳಿಕ ಆತನನ್ನು ‘ಗೊಲ್ಗೊಥಾ’ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ‘ಗೊಲ್ಗೊಥಾ’ ಅಂದರೆ “ತಲೆಬುರುಡೆಗಳು ಇರುವ ಸ್ಥಳ” ಎಂದರ್ಥ. 23ಅಲ್ಲಿ ಆತನಿಗೆ ರಕ್ತಬೋಳ#15:23 ದೇಹದ ನೋವನ್ನು ಹೊಗಲಾಡಿಸುವ ಒಂದು ದ್ರವ್ಯ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ಅದನ್ನು ಕುಡಿಯಲಿಲ್ಲ. 24ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಲ್ಲಿ ಯಾವುದು ಯಾರಿಗೆ ಸಿಗಬೇಕೆಂದು ಚೀಟು ಹಾಕಿ ಪಾಲುಮಾಡಿಕೊಂಡರು.
25ಆತನನ್ನು ಶಿಲುಬೆಗೆ ಹಾಕುವಾಗ #15:25 ಮೂಲ: ಮೂರು ತಾಸಾಗಿತ್ತು. ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು. 26“ಈತನು ಯೆಹೂದ್ಯರ ಅರಸನು” ಎಂದು ಆತನ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ಶಿಲುಬೆಯ ಮೇಲೆ ಬರೆಯಲಾಗಿತ್ತು. 27ಅದಲ್ಲದೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಆತನ ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು.
28-29 # 15:28-29 28 ನೆಯ ವಚನವು ಕೆಲವು ಮೂಲಪ್ರತಿಗಳಲ್ಲಿ ಇಲ್ಲ. ಯೆಶಾ 53:12; ಲೂಕ 22:37 ಆತನು ಅಧರ್ಮಿಗಳ ಸಂಗಡ ಎಣಿಸಲ್ಪಟ್ಟನು ಎಂಬ ಶಾಸ್ತ್ರವಚನವು ಹೀಗೆ ನೆರವೇರಿತು. ಅಲ್ಲಿ ಹಾದುಹೋಗುವವರು ತಲೆ ಆಲ್ಲಾಡಿಸಿ “ಆಹಾ, ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಪುನಃ ಕಟ್ಟುವವನೇ, 30ಶಿಲುಬೆಯಿಂದ ಇಳಿದು ನಿನ್ನನ್ನು ರಕ್ಷಿಸಿಕೋ” ಎಂದು ಆತನನ್ನು ಅಪಹಾಸ್ಯ ಮಾಡಿದರು. 31ಅದೇ ಮೇರೆಗೆ ಮುಖ್ಯಯಾಜಕರೂ ಶಾಸ್ತ್ರಿಗಳೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. 32ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಇಳಿದು ಬಂದರೆ ನಾವು ನೋಡಿ ನಂಬುತ್ತೇವೆ” ಎಂದು ತಮ್ಮತಮ್ಮೊಳಗೆ ಅಣಕಿಸುತ್ತಾ ಮಾತನಾಡುತ್ತಿದ್ದರು. ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರು ಸಹ ಆತನನ್ನು ನಿಂದಿಸುತ್ತಿದ್ದರು.
ಯೇಸುವಿನ ಮರಣ
33 # 15:33 ಮೂಲ: ಆರು ಗಂಟೆ. ಹನ್ನೆರಡು ಗಂಟೆಯಿಂದ #15:33 ಮೂಲ: ಒಂಭತ್ತು ತಾಸಿನ ತನಕ. ಮೂರು ಗಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. 34ಮೂರು ಗಂಟೆಗೆ ಯೇಸು, #15:34 ಕೀರ್ತ 22:1:“ಎಲೋಹಿ, ಎಲೋಹಿ, ಲಮಾಸಬಕ್ತಾನೀ?” ಅಂದರೆ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿದನು. 35ಹತ್ತಿರ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ನೋಡಿರಿ, ಆತನು ಎಲೀಯನನ್ನು ಕರೆಯುತ್ತಾನೆ” ಅಂದರು.
36ಆಗ ಒಬ್ಬನು ಓಡಿಹೋಗಿ ಸ್ಪಂಜಿನಿಂದ ಹುಳಿ ದ್ರಾಕ್ಷಾರಸವನ್ನು ತುಂಬಿ ಕೋಲಿನ ತುದಿಗೆ ಸಿಕ್ಕಿಸಿ, “ಇವನನ್ನು ಶಿಲುಬೆಯಿಂದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ಏನೋ ಕಾದು ನೋಡೋಣ” ಎಂದು ಹೇಳಿ ಅದನ್ನು ಕುಡಿಯುವುದಕ್ಕೆ ಆತನಿಗೆ ಕೊಟ್ಟನು. 37ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣ ಬಿಟ್ಟನು. 38ಆಗ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು.
39ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರಿಗೆ ನಿಂತು ನೋಡುತ್ತಿದ್ದ ಶತಾಧಿಪತಿಯು, “ನಿಜವಾಗಿ ಈ ಮನುಷ್ಯನು #15:39 ದಾನಿ. 3:25:ದೇವಕುಮಾರನೇ” ಅಂದನು. 40-41ಇದಲ್ಲದೆ ಅಲ್ಲಿ ಸ್ತ್ರೀಯರು ಸಹ ದೂರದಿಂದ ನೋಡುತ್ತಿದ್ದರು. ಅವರಲ್ಲಿ, ಆತನು ಗಲಿಲಾಯದಲ್ಲಿದ್ದಾಗ ಆತನನ್ನು ಹಿಂಬಾಲಿಸಿ ಸೇವೆಮಾಡುತ್ತಿದ್ದವರಾದ #15:40-41 ಲೂಕ 8:2, 3:ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯನ ತಾಯಿಯಾದ ಮರಿಯಳು, #15:40-41 ಮಾರ್ಕ 16:1:ಸಲೋಮೆ ಎಂಬುವರು ಹಾಗೂ ಆತನ ಸಂಗಡ ಯೆರೂಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಇದ್ದರು.
ಯೇಸುವಿನ ದೇಹವನ್ನು ಸಮಾಧಿಯಲ್ಲಿಟ್ಟದ್ದು
ಮತ್ತಾ 27:57-61; ಲೂಕ 23:50-56; ಯೋಹಾ 19:38-42
42ಆಗಲೇ ಸಂಜೆಯಾಗಿತ್ತು; ಮತ್ತು ಆ ದಿನವು ‘ಸಿದ್ಧತೆಯ’ ದಿನ, ಅಂದರೆ ಸಬ್ಬತ್ ದಿನದ ಹಿಂದಿನ ದಿನವಾಗಿತ್ತು. 43ಹೀಗಿರಲಾಗಿ ಅರಿಮಥಾಯದ ಯೋಸೇಫನೆಂಬುವನು ಅಲ್ಲಿಗೆ ಬಂದನು. ಅವನು ಯೆಹೂದ್ಯರ ಹಿರೀಸಭೆಯ ಗೌರವಸ್ಥನಾದ ಸದ್ಯಸನೂ, ದೇವರ ರಾಜ್ಯವನ್ನು ಎದುರುನೋಡುತ್ತಿದ್ದವನು ಆಗಿದ್ದನು. ಅವನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು. 44ಪಿಲಾತನು, ಅವನು ಇಷ್ಟು ಬೇಗ ಸತ್ತು ಹೋದನೋ ಎಂದು ಹೇಳಿ ಆಶ್ಚರ್ಯಪಟ್ಟು ಶತಾಧಿಪತಿಯನ್ನು ಕರೆಸಿ, ಅವನು ಆಗಲೇ ಸತ್ತನೋ ಎಂದು ಅವನನ್ನು ಕೇಳಿದನು.
45ಆತನು ಸತ್ತದ್ದನ್ನು ಶತಾಧಿಪತಿಯಿಂದ ತಿಳಿದುಕೊಂಡು ಅವನ ಪಾರ್ಥಿವ ಶರೀರವನ್ನು ಯೋಸೇಫನಿಗೆ ಕೊಡಿಸಿದನು. 46ಯೋಸೇಫನು ನಾರುಮಡಿಯನ್ನು ಕೊಂಡುತಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು. 47ಮಗ್ದಲದ ಮರಿಯಳೂ ಮತ್ತು ಯೋಸೆಯನ ತಾಯಿ ಮರಿಯಳೂ ಯೇಸುವನ್ನಿಟ್ಟಿದ್ದ ಸ್ಥಳವನ್ನು ನೋಡಿದರು.
Currently Selected:
ಮಾರ್ಕ 15: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.