ಲೂಕ 5
5
ಯೇಸು ಪ್ರಥಮ ಶಿಷ್ಯರನ್ನು ಆಯ್ಕೆ ಮಾಡಿಕೊಂಡದ್ದು
1ಒಮ್ಮೆ ಯೇಸು ಗೆನೆಜರೇತ್ ಸರೋವರದ ದಡದಲ್ಲಿ ನಿಂತಿದ್ದಾಗ ಜನರು ಗುಂಪಾಗಿ ಬಂದು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಆತನನ್ನು ಸುತ್ತುವರೆದು ನೂಕಾಡುತ್ತಿದ್ದರು. 2ಯೇಸು ಆ ಸರೋವರದ ದಡದಲ್ಲಿದ್ದ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. 3ಆ ದೋಣಿಗಳಲ್ಲಿ, ಸೀಮೋನನ ದೋಣಿಯನ್ನು ಯೇಸು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಆ ಜನರ ಗುಂಪಿಗೆ ಉಪದೇಶಮಾಡಿದನು. 4ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ ಮೀನುಹಿಡಿಯಲು ನಿಮ್ಮ ಬಲೆಗಳನ್ನು ಬೀಸಿರಿ” ಎಂದು ಹೇಳಿದನು. 5ಅದಕ್ಕೆ ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯತ್ನಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಬೀಸುತ್ತೇವೆ” ಅಂದನು. 6ಅವರು ಬಲೆಗಳನ್ನು ಬೀಸಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಬಲೆಗೆ ಸಿಕ್ಕಿಕೊಂಡಿದ್ದರ ಪರಿಣಾಮ ಬಲೆಗಳು ಹರಿದುಹೋಗುವಂತ್ತಿದವು. 7ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸಂಗಡಿಗರನ್ನೂ ಕರೆದು, ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನುಗಳನ್ನು ತುಂಬಿಸಲು, ಅವು ಮುಳುಗುವ ಹಾಗಾದವು. 8ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು, “ಕರ್ತನೇ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗು” ಅಂದನು.
9ಏಕೆಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿಮಿತ್ತ ಆಶ್ಚರ್ಯಪಟ್ಟಿದ್ದರು. 10ಸೀಮೋನನ ಸಂಗಡಿಗರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಹಾಗೆಯೇ ಆಶ್ಚರ್ಯಪಟ್ಟರು. ಯೇಸು ಸೀಮೋನನಿಗೆ, “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವ ಬೆಸ್ತನಾಗಿರುವಿ” ಎಂದು ಹೇಳಿದನು. 11ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಮತ್ತು ಎಲ್ಲವನ್ನು ಬಿಟ್ಟು ಅಂದಿನಿಂದ ಯೇಸುವನ್ನು ಹಿಂಬಾಲಿಸಿದರು.
ಯೇಸು ಕುಷ್ಠರೋಗಿಯನ್ನು ವಾಸಿಮಾಡಿದ್ದು
ಮತ್ತಾ 8:1-4; ಮಾರ್ಕ 1:40-45
12ಆತನು ಒಂದಾನೊಂದು ಊರಿನಲ್ಲಿದ್ದಾಗ ಮೈಯೆಲ್ಲಾ ಕುಷ್ಠರೋಗ ತುಂಬಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಸಾಷ್ಟಾಂಗವೆರಗಿ, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು. 13ಆತನು ಕೈನೀಡಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು, ಶುದ್ಧನಾಗು” ಅಂದನು. ಕೂಡಲೆ ಅವನ ಕುಷ್ಠವು ವಾಸಿಯಾಯಿತು. 14ಆಗ ಆತನು ಅವನಿಗೆ, “ನೀನು ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ಆಜ್ಞಾಪಿಸಿರುವ ಕಾಣಿಕೆಯನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು, ಅದು ಜನರಿಗೆ ಸಾಕ್ಷಿಯಾಗಲಿ” ಎಂದು ಅಪ್ಪಣೆಕೊಟ್ಟನು. 15ಆದರೂ ಆತನ ಸುದ್ದಿಯು ಮತ್ತಷ್ಟು ಹಬ್ಬಿತು, ಮತ್ತು ಜನರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ, ತಮ್ಮ ತಮ್ಮ ರೋಗರುಜಿನಗಳನ್ನು ವಾಸಿಮಾಡಿಸಿಕೊಳ್ಳುವುದಕ್ಕೂ, ಗುಂಪುಗುಂಪಾಗಿ ಬಂದು ಸೇರಿದರು. 16ಆದರೆ ಯೇಸು ಜನರಿಂದ ಪ್ರತ್ಯೇಕಿಸಿಕೊಂಡು ನಿರ್ಜನ ಪ್ರದೇಶಗಳಿಗೆ ಹೋಗಿ ಪ್ರಾರ್ಥನೆಯನ್ನು ಮಾಡುತ್ತಿದ್ದನು.
ಯೇಸು ಪಾರ್ಶ್ವವಾಯು ರೋಗಿಯನ್ನು ಗುಣಪಡಿಸಿದ್ದು
ಮತ್ತಾ 9:1-8; ಮಾರ್ಕ 2:1-12
17ಒಮ್ಮೆ ಆತನು ಉಪದೇಶಮಾಡುತ್ತಿರಲು ಗಲಿಲಾಯ ಮತ್ತು ಯೂದಾಯದ ಎಲ್ಲಾ ಗ್ರಾಮಗಳಿಂದಲೂ ಯೆರೂಸಲೇಮಿನಿಂದಲೂ ಬಂದಿದ್ದ ಫರಿಸಾಯರೂ ಧರ್ಮೋಪದೇಶಕರೂ ಆತನ ಹತ್ತಿರ ಕುಳಿತುಕೊಂಡಿದ್ದರು. ಮತ್ತು ಅವರನ್ನು ಗುಣಮಾಡುವ ದೇವರ ಶಕ್ತಿಯು ಆತನಲ್ಲಿತ್ತು. 18ಹೀಗಿರುವಲ್ಲಿ ಕೆಲವು ಮಂದಿ ಗಂಡಸರು ಒಬ್ಬ ಪಾರ್ಶ್ವವಾಯು ರೋಗಿಯನ್ನು ದೋಲಿಯಲ್ಲಿ ಹೊತ್ತುಕೊಂಡು ಬಂದರು. ಅವನನ್ನು ಒಳಗೆ ತೆಗೆದುಕೊಂಡು ಹೋಗಿ ಆತನ ಮುಂದೆ ಇರಿಸಬೇಕೆಂದು ಪ್ರಯತ್ನಿಸಿದರು. 19ಜನರ ಗುಂಪು ದಟ್ಟವಾಗಿದ್ದ ಕಾರಣ ಅವನನ್ನು ಒಳಗೆ ತೆಗೆದುಕೊಂಡುಹೋಗುವ ಮಾರ್ಗವನ್ನು ಕಾಣದೆ ಮನೆಯ ಮೇಲೆ ಹತ್ತಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯ ಸಹಿತವಾಗಿ ಜನರ ನಡುವೆ ಯೇಸುವಿನ ಮುಂದೆ ಇಳಿಸಿದರು. 20ಯೇಸು ಅವರ ನಂಬಿಕೆಯನ್ನು ನೋಡಿ, “ಸ್ನೇಹಿತನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಅಂದನು.
21ಅದಕ್ಕೆ ಆ ಶಾಸ್ತ್ರಿಗಳೂ ಮತ್ತು ಫರಿಸಾಯರೂ, “ದೇವದೂಷಣೆಯ ಮಾತನಾಡುವ ಇವನು ಎಷ್ಟರವನು? ಪಾಪಗಳನ್ನು ಕ್ಷಮಿಸಲು ದೇವರೊಬ್ಬನಿಂದ ಹೊರತು ಮತ್ತಾರಿಂದಾದೀತು?” ಎಂದು ಅಂದುಕೊಳ್ಳುತ್ತಿದ್ದರು.
22ಆದರೆ ಅವರು ಹಾಗಂದುಕೊಳ್ಳುವುದನ್ನು ಯೇಸುವು ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುವುದೇನು? 23ಯಾವುದು ಸುಲಭ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ? ಎದ್ದು ನಡೆ ಅನ್ನುವುದೋ? 24ಆದರೆ ಪಾಪಗಳನ್ನು ಕ್ಷಮಿಸುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಎಂದು ಹೇಳಿದನು. 25ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ಮನೆಗೆ ಹೋದನು. 26ನೋಡಿದವರೆಲ್ಲರೂ ಬೆರಗಾಗಿ ದೇವರನ್ನು ಕೊಂಡಾಡಿದರು ಮತ್ತು ಅವರು ಭಯ ಹಿಡಿದವರಾಗಿ, “ನಾವು ಈ ಹೊತ್ತು ಅಪೂರ್ವ ಸಂಗತಿಯನ್ನು ಕಂಡೆವು” ಅಂದರು.
ಯೇಸು ಲೇವಿಯನನ್ನು ಕರೆದದ್ದು
ಮತ್ತಾ 9:9-13; ಮಾರ್ಕ 2:13-17
27ಅನಂತರ ಯೇಸು ಹೊರಟು ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಲೇವಿಯೆಂಬ ಒಬ್ಬ ಸುಂಕದವನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು, 28ಅವನು ಎಲ್ಲವನ್ನೂ ಬಿಟ್ಟು ಎದ್ದು ಆತನ ಹಿಂದೆ ಹೋದನು. 29ತರುವಾಯ ಲೇವಿಯು ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿರಲು, ಸುಂಕದವರೂ ಇತರರೂ ಗುಂಪಾಗಿ ಕೂಡಿ ಬಂದು ಅವರ ಸಂಗಡ ಊಟಕ್ಕೆ ಕುಳಿತುಕೊಂಡಿದ್ದರು. 30ಅದನ್ನು ಕಂಡು ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗೊಣಗುಟ್ಟುತ್ತಾ, “ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುವುದೇಕೆ?” ಎಂದು ಕೇಳಿದರು. 31ಅದಕ್ಕೆ ಯೇಸು, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು; 32ನಾನು ನೀತಿವಂತರನ್ನಲ್ಲ, ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಪಾಪಿಗಳನ್ನು ಕರೆಯುವುದಕ್ಕೆ ಬಂದಿದ್ದೇನೆ” ಎಂದು ಅವರಿಗೆ ಉತ್ತರಕೊಟ್ಟನು.
ಉಪವಾಸದ ಕುರಿತಾದ ವಿಚಾರಣೆ
33ಅವರು ಆತನಿಗೆ, “ಯೋಹಾನನ ಶಿಷ್ಯರು ಪದೇಪದೇ ಉಪವಾಸದಿಂದ ವಿಜ್ಞಾಪನೆಗಳನ್ನು ಮಾಡುತ್ತಾ ಇರುತ್ತಾರೆ; ಅದರಂತೆ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಊಟಮಾಡುತ್ತಾರೆ ಕುಡಿಯುತ್ತಾರೆ” ಎಂದು ಹೇಳಲು, 34ಯೇಸು ಅವರಿಗೆ, “ಮದಲಿಂಗನು ಮದುವೆಯ ಅತಿಥಿಗಳ ಸಂಗಡ ಇರುವಲ್ಲಿ ಅವರಿಗೆ ಉಪವಾಸವಿರಿಸುವುದಕ್ಕೆ ನಿಮ್ಮಿಂದಾದೀತೇ? 35ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಳ್ಳಲ್ಪಡುವ ಕಾಲ ಬರುತ್ತದೆ. ಆ ಕಾಲದಲ್ಲೆ ಅವರು ಉಪವಾಸಮಾಡುವರು” ಎಂದು ಉತ್ತರಕೊಟ್ಟನು.
36ಯೇಸು ಅವರಿಗೆ ಒಂದು ಸಾಮ್ಯವನ್ನು ಸಹ ಹೇಳಿದನು, ಅದೇನೆಂದರೆ, “ಯಾರೂ ಹೊಸ ವಸ್ತ್ರದಿಂದ ಒಂದು ತುಂಡನ್ನು ತೆಗೆದುಕೊಂಡು ಹಳೇ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ, ಹಚ್ಚಿದರೆ ಆ ಹೊಸದನ್ನು ಹರಿದು ಕೆಡಿಸಿದ ಹಾಗಾಗುವುದಲ್ಲದೆ, ಹೊಸದರಿಂದ ಹರಿದು ಹಚ್ಚಿದ ತ್ಯಾಪೆಯು ಹಳೆಯ ವಸ್ತ್ರಕ್ಕೆ ಒಪ್ಪುವದೂ ಇಲ್ಲ. 37ಮತ್ತು ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವುದಿಲ್ಲ; ಹಾಗೆ ಇಟ್ಟರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವುದಲ್ಲದೆ ಬುದ್ದಲಿಗಳೂ ಒಡೆದು ಹೋಗುವವು. 38ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು. 39ಇದಲ್ಲದೆ ಹಳೇ ದ್ರಾಕ್ಷಾರಸವನ್ನು ಕುಡಿದವನು ಹೊಸದು ಬೇಕು ಅನ್ನುವುದಿಲ್ಲ, ‘ಹಳೆಯದೇ ಉತ್ತಮ’ ಅನ್ನುವನು.”
Currently Selected:
ಲೂಕ 5: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.