ಲೂಕ 13
13
ಪಶ್ಚಾತ್ತಾಪಪಡಿರಿ ಇಲ್ಲವಾದರೆ ನಾಶವಾಗುವಿರಿ
1ಅದೇ ಸಮಯದಲ್ಲಿ ಕೆಲವರು ಯೇಸುವಿನ ಹತ್ತಿರದಲ್ಲಿದ್ದು, ಪಿಲಾತನು ಗಲಿಲಾಯದವರ ರಕ್ತವನ್ನು ಅವರು ಕೊಟ್ಟ ಬಲಿಗಳ ಸಂಗಡ ಬೆರಸಿದನೆಂದು ಆತನಿಗೆ ತಿಳಿಸಿದರು. 2ಅದಕ್ಕೆ ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ಭಾವಿಸುತ್ತೀರೋ? 3ಹಾಗೆ ಭಾವಿಸಕೂಡದೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ. 4ಇಲ್ಲವೆ ಸಿಲೊವಾಮಿನಲ್ಲಿ ಗೋಪುರ ಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಕೆಟ್ಟವರೆಂದು ನೀವು ಭಾವಿಸುತ್ತೀರೋ? 5ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ” ಎಂದು ಹೇಳಿದನು.
ಫಲ ಕೊಡದ ಅಂಜೂರಮರದ ಸಾಮ್ಯ
6ಆ ಮೇಲೆ ಯೇಸು ಒಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, “ಒಬ್ಬನು ತನ್ನ ದ್ರಾಕ್ಷಿಯ ತೋಟದಲ್ಲಿ ಒಂದು ಅಂಜೂರದ ಗಿಡವನ್ನು ನೆಡಿಸಿದನು. ಸ್ವಲ್ಪಕಾಲದ ನಂತರ ಅವನು ಆ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದನು. ಸಿಕ್ಕಲಿಲ್ಲ. 7ಬಳಿಕ ಅವನು ತೋಟಗಾರನಿಗೆ, ‘ನೋಡು, ನಾನು ಮೂರು ವರ್ಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು. ಇದರಿಂದ ಭೂಮಿಯು ಯಾಕೆ ವ್ಯರ್ಥವಾಗಬೇಕು’ ಎಂದು ಹೇಳಿದನು. 8ಅದಕ್ಕೆ ಆ ತೋಟಗಾರನು, ‘ಯಜಮಾನನೇ ಈ ವರ್ಷವೂ ಇದನ್ನು ಬಿಡು, ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ. 9ಮುಂದೆ ಅದರಲ್ಲಿ ಹಣ್ಣು ಬಿಟ್ಟರೆ ಸರಿ, ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು’” ಎಂದು ಉತ್ತರ ಕೊಟ್ಟನು.
ಯೇಸು ಸಬ್ಬತ್ ದಿನದಲ್ಲಿ ಗೂನಿಯಾದ ಸ್ತ್ರೀಯನ್ನು ಸ್ವಸ್ಥಮಾಡಿದ್ದು
10ಒಂದು ಸಬ್ಬತ್ ದಿನದಲ್ಲಿ ಯೇಸು ಒಂದು ಸಭಾಮಂದಿರದೊಳಗೆ ಉಪದೇಶಮಾಡುತ್ತಾ ಇದ್ದನು. 11ಅಲ್ಲಿ ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ಬಾಧಿತಳಾಗಿ ಬೆನ್ನು ಬಗ್ಗಿ ಹೋಗಿ ಗೂನಿಯಾಗಿದ್ದು ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾರದೆ ಇದ್ದ ಒಬ್ಬ ಹೆಂಗಸು ಇದ್ದಳು. 12ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ, “ನಿನ್ನ ರೋಗವು ಬಿಡುಗಡೆಯಾಯಿತು” ಎಂದು ಹೇಳಿ 13ಆಕೆಯ ಮೇಲೆ ತನ್ನ ಕೈಗಳನ್ನಿಟ್ಟನು. ಇಟ್ಟಕೂಡಲೆ ಆಕೆ ನೆಟ್ಟಗಾದಳು, ದೇವರನ್ನು ಕೊಂಡಾಡಿದಳು. 14ಆದರೆ ಆ ಸಭಾಮಂದಿರದ ಅಧಿಕಾರಿಯು ನಡೆದ ಸಂಗತಿಯನ್ನು ನೋಡಿ, ಸಬ್ಬತ್ ದಿನದಲ್ಲಿ ಯೇಸು ಸ್ವಸ್ಥ ಮಾಡಿದನಲ್ಲಾ ಎಂದು ಸಿಟ್ಟುಗೊಂಡು ಜನರಿಗೆ, “ಕೆಲಸ ಮಾಡುವುದಕ್ಕೆ ಆರು ದಿನಗಳು ಅವೆಯಷ್ಟೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಬೇಡ” ಎಂದು ಹೇಳಿದನು. 15ಆ ಮಾತನ್ನು ಕೇಳಿ ಕರ್ತನು ಅವನಿಗೆ, “ಕಪಟಿಗಳೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ ಕತ್ತೆಯನ್ನಾಗಲಿ ಗೋದಲಿಯಿಂದ ಬಿಚ್ಚಿ ನೀರು ಕುಡಿಸುವುದಕ್ಕಾಗಿ ಹಿಡಿದುಕೊಂಡು ಹೋಗುತ್ತಾನಲ್ಲವೇ. 16ಹಾಗಾದರೆ ಹದಿನೆಂಟು ವರ್ಷಗಳ ತನಕ ಸೈತಾನನು ಕಟ್ಟಿ ಹಾಕಿದ್ದವಳೂ ಅಬ್ರಹಾಮನ ವಂಶದವಳೂ ಆಗಿರುವ ಈಕೆಯನ್ನು ಸಬ್ಬತ್ ದಿನದಲ್ಲಿ ಈ ಬಂಧನದಿಂದ ಬಿಡಿಸಬಾರದೋ?” ಎಂದು ಕೇಳಿದನು. 17ಈ ಮಾತುಗಳನ್ನು ಆತನು ಹೇಳುತ್ತಿರಲಾಗಿ ಆತನ ವಿರೋಧಿಗಳೆಲ್ಲರೂ ಅವಮಾನಿತರಾದರು. ಗುಂಪು ಕೂಡಿದ್ದ ಜನರೆಲ್ಲರೂ ಆತನಿಂದಾಗುತ್ತಿದ್ದ ಎಲ್ಲಾ ಮಹತ್ತಾದ ಕಾರ್ಯಗಳಿಗೆ ಸಂತೋಷಪಟ್ಟರು.
ಸಾಸಿವೆಕಾಳಿನ ಹಾಗೂ ಹುಳಿಹಿಟ್ಟಿನ ಸಾಮ್ಯ
ಮತ್ತಾ 13:31-33; ಮಾರ್ಕ 4:30-32
18ತರುವಾಯ ಯೇಸು ಕೇಳಿದ್ದೇನಂದರೆ, “ದೇವರ ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ? 19ಅದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಹಾಕಿದನು. ಅದು ಬೆಳೆದು ಮರವಾಯಿತು. ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿದವು” ಅಂದನು.
20ಆತನು ಇನ್ನೂ ಹೇಳಿದ್ದೇನಂದರೆ, “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ? 21ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತೆಗೆದು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು” ಅಂದನು.
ಇಕ್ಕಟ್ಟಾದ ಬಾಗಿಲು
ಮತ್ತಾ 7:13,14,21-23
22ಯೇಸು ಊರೂರಿಗೂ ಗ್ರಾಮ ಗ್ರಾಮಕ್ಕೂ ಹೋಗಿ ಉಪದೇಶ ಮಾಡುತ್ತಾ ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿದ್ದನು. 23ಆಗ ಒಬ್ಬನು, “ಕರ್ತನೇ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ?” ಎಂದು ಕೇಳಲು, 24ಆತನು ಅವರಿಗೆ, “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗುವುದಕ್ಕೆ ಪ್ರಯಾಸಪಡಿರಿ. ಏಕೆಂದರೆ ಬಹು ಜನರು ಒಳಗೆ ಹೋಗುವುದಕ್ಕೆ ನೋಡುವರು. ಆದರೆ ಅವರಿಂದಾಗುವುದಿಲ್ಲ ಎಂದು ನಿಮಗೆ ಹೇಳುತ್ತೇನೆ. 25ಮನೆ ಯಜಮಾನನು ಎದ್ದು ಬಾಗಿಲು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಿ, ‘ಕರ್ತನೇ ನಮಗೆ ಬಾಗಿಲು ತೆರೆಯಿರಿ’ ಎಂದು ಬಾಗಿಲು ಬಡಿಯುವುದಕ್ಕೆ ತೊಡಗುವಾಗ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ’ ಅಂದಾನು 26ಅದಕ್ಕೆ ನೀವು, ‘ನಿನ್ನ ಸಂಗಡ ನಾವು ಊಟ ಮಾಡಿದೆವು, ಕುಡಿದೆವು, ನಮ್ಮ ಬೀದಿಗಳಲ್ಲಿ ನೀನು ಉಪದೇಶ ಮಾಡಿದ್ದಿ’ ಎಂದು ಹೇಳುವುದಕ್ಕೆ ತೊಡಗುವಿರಿ. 27ಆದರೆ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ. ಅಧರ್ಮಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟು ಹೋಗಿರಿ’ ಎಂದು ನಿಮಗೆ ಹೇಳುತ್ತೇನೆ ಅನ್ನುವನು. 28ಅಬ್ರಹಾಮ, ಇಸಾಕ, ಯಾಕೋಬರು ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನೂ ನೀವು ನೋಡುವಿರಿ. ಆದರೆ ನಿಮ್ಮನ್ನು ಮಾತ್ರ ಹೊರಗೆ ಹಾಕಲಾಗುವುದು ಅಲ್ಲಿ ನಿಮಗೆ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಉಂಟಾಗುವವು. 29ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದಲೂ ಜನರು ಬಂದು ದೇವರ ರಾಜ್ಯದಲ್ಲಿ ಔತಣಕ್ಕೆ ಕುಳಿತುಕೊಳ್ಳುವರು. 30ಇಗೋ ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು. ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು” ಅಂದನು.
ಯೇಸು ಯೆರೂಸಲೇಮಿನ ವಿಷಯದಲ್ಲಿ ದುಃಖಪಟ್ಟಿದ್ದು
ಮತ್ತಾ 23:37-39
31ಅದೇ ಗಳಿಗೆಯಲ್ಲಿ ಕೆಲವು ಮಂದಿ ಫರಿಸಾಯರು ಹತ್ತಿರ ಬಂದು ಯೇಸುವಿಗೆ, “ನೀನು ಇಲ್ಲಿಂದ ಹೊರಟು ಹೋಗು, ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ” ಎಂದು ಹೇಳಲು, 32ಆತನು ಅವರಿಗೆ, “ನೀವು ಹೋಗಿ ‘ಇಗೋ, ನಾನು ಈಹೊತ್ತು ನಾಳೆ ದೆವ್ವಗಳನ್ನು ಬಿಡಿಸುತ್ತಾ ರೋಗಿಗಳನ್ನು ವಾಸಿಮಾಡುತ್ತಾ ಇದ್ದು, ಮೂರನೆಯ ದಿನದಲ್ಲಿ ಸಿದ್ಧಿಗೆ ಬರುತ್ತೇನೆ’ ಎಂದು ಆ ನರಿಗೆ ಹೇಳಿರಿ. 33ಹೇಗೂ ನಾನು ಈ ಹೊತ್ತು ನಾಳೆ ನಾಡಿದ್ದು ಸಂಚಾರ ಮಾಡಬೇಕು. ಪ್ರವಾದಿಯಾದವನು ಯೆರೂಸಲೇಮಿನಲ್ಲಿಯೇ ಹೊರತು ಬೇರೆ ಪಟ್ಟಣದಲ್ಲಿ ಕೊಲ್ಲಲ್ಪಡಕೂಡದಷ್ಟೆ. 34ಯೆರೂಸಲೇಮೇ, ಯೆರೂಸಲೇಮೇ ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿ ಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಸೇರಿಸಿಕೊಳ್ಳುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು! 35ನೋಡಿರಿ, ನಿಮ್ಮ ಮನೆಯು ಪಾಳುಬೀಳುವುದು. ‘ಕರ್ತನ ಹೆಸರಿನಲ್ಲಿ ಬರುವವನು ಧನ್ಯನು’ ಎಂದು ನೀವು ಹೇಳುವ ವರೆಗೂ ನೀವು ನನ್ನನ್ನು ನೋಡುವುದೇ ಇಲ್ಲ” ಎಂದು ನಿಮಗೆ ಹೇಳುತ್ತೇನೆ.
Currently Selected:
ಲೂಕ 13: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.