ಲೂಕ 10
10
ಯೇಸು ಎಪ್ಪತ್ತು ಮಂದಿ ಶಿಷ್ಯರನ್ನು ಕಳುಹಿಸಿದ್ದು
ಮತ್ತಾ 9:37,38; 10:7-16; 11:25-27
1ಇದಾದ ಮೇಲೆ ಕರ್ತನು ಇನ್ನೂ ಎಪ್ಪತ್ತು#10:1 ಕೆಲವು ಪ್ರತಿಗಳಲ್ಲಿ ಎಪ್ಪತ್ತೆರಡು ಎಂದು ಬರೆಯಲಾಗಿದೆ. ಮಂದಿಯನ್ನು ತನ್ನ ಶಿಷ್ಯರನ್ನಾಗಿ ನೇಮಿಸಿ, ಅವರನ್ನು ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದು ಊರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು. 2ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ಬೆಳೆಯು ಹೇರಳವಾಗಿದೆ, ಕೊಯ್ಲುಗಾರರು ಕೆಲವರೂ ಮಾತ್ರ ಇದ್ದಾರೆ; ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸಬೇಕೆಂದು ಬೆಳೆಯ ಯಜಮಾನನನ್ನು ಬೇಡಿಕೊಳ್ಳಿರಿ. 3ಹೋಗಿರಿ, ತೋಳಗಳ ನಡುವೆ ಕುರಿಮರಿಗಳಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ. 4ನೋಡಿರಿ, ನೀವು ಹೋಗುವಾಗ ಹಣದ ಚೀಲವನ್ನಾಗಲಿ, ಪ್ರವಾಸದ ಚೀಲವನ್ನಾಗಲಿ, ಕಾಲಿಗೆ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ. 5ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ, ‘ಈ ಮನೆಗೆ ಸಮಾಧಾನವಾಗಲಿ’ ಎಂದು ಮೊದಲು ಹೇಳಿರಿ. 6ಸಮಾಧಾನ ಹೊಂದಲು ಯೋಗ್ಯನು ಆ ಮನೆಯಲ್ಲಿ ಇದ್ದರೆ ನಿಮ್ಮ ಸಮಾಧಾನವು ಅವನ ಮೇಲೆ ನಿಲ್ಲುವುದು, ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವುದು. 7ಆ ಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿರಿ, ಕುಡಿಯಿರಿ. ಆಳು ತನ್ನ ಕೂಲಿಗೆ ಯೋಗ್ಯನಷ್ಟೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿ ಇಳಿದುಕೊಳ್ಳಬೇಡಿರಿ. 8ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಊರಿನ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ. 9ಅಲ್ಲಿರುವ ರೋಗಿಗಳನ್ನು ವಾಸಿಮಾಡಿ ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ’ ಎಂದು ಹೇಳಿರಿ. 10ಆದರೆ ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸ್ವೀಕರಿಸದ್ದಿದ್ದರೆ, ನೀವು ಆ ಊರ ಬೀದಿಗಳಿಗೆ ಬಂದು, 11‘ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮ್ಮ ವಿರುದ್ಧವಾಗಿ ಝಾಡಿಸಿಬಿಡುತ್ತೇವೆ. ಆದಾಗ್ಯೂ ದೇವರ ರಾಜ್ಯವು ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ’ ಎಂಬುದಾಗಿ ಹೇಳಿರಿ. 12ಆ ದಿನದಲ್ಲಿ ಅಂತಹ ಊರಿನ ಗತಿಯು ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಹೇಳುತ್ತೇನೆ. 13ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು, ಬೂದಿಯಲ್ಲಿ ಕುಳಿತುಕೊಂಡು ಪಶ್ಚಾತ್ತಾಪಪಡುತ್ತಿದ್ದರು. 14ಆದರೆ ನ್ಯಾಯವಿಚಾರಣೆಯಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು. 15ಎಲೈ ಕಪೆರ್ನೌಮೇ, ನೀನು ಪರಲೋಕಕ್ಕೆ ಏರಿಸಲ್ಪಡುವಿಯಾ? ಇಲ್ಲ! ಪಾತಾಳಕ್ಕೇ ಇಳಿಯುವಿ. 16ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ, ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುವವನಾಗಿದ್ದಾನೆ, ನನ್ನನ್ನು ತಿರಸ್ಕಾರ ಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ತಿರಸ್ಕಾರ ಮಾಡುವವನಾಗಿದ್ದಾನೆ” ಅಂದನು.
17ತರುವಾಯ ಆ ಎಪ್ಪತ್ತು ಮಂದಿಯು ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು, “ಕರ್ತನೇ, ದೆವ್ವಗಳು ಕೂಡಾ ನಿನ್ನ ಹೆಸರಿನಲ್ಲಿ ನಮಗೆ ಅಧೀನವಾಗುತ್ತವೆ” ಅಂದರು. 18ಯೇಸು ಅವರಿಗೆ, “ಸೈತಾನನು ಮಿಂಚಿನಂತೆ ಆಕಾಶದಿಂದ ಬೀಳುವುದನ್ನು ಕಂಡೆನು. 19ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ. 20ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂದು ಸಂತೋಷಪಡಿರಿ” ಎಂದು ಹೇಳಿದನು.
21ಅದೇ ಗಳಿಗೆಯಲ್ಲಿ ಆತನು ಪವಿತ್ರಾತ್ಮನನಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ, “ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಮತ್ತು ವಿವೇಕಿಗಳಿಗೂ ಈ ವಿಷಯಗಳನ್ನು ಮರೆಮಾಡಿ, ಮಕ್ಕಳಿಗೆ ಪ್ರಕಟಮಾಡಿರುವುದರಿಂದ ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. 22ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ಮಗನು ಎಂಥವನೆಂದು ತಂದೆಯ ಹೊರತು ಮತ್ತಾರೂ ತಿಳಿದಿರುವುದಿಲ್ಲ, ತಂದೆ ಎಂಥವನೆಂದು ಮಗನ ಹೊರತು ಇನ್ನಾರು ತಿಳಿದಿರುವುದಿಲ್ಲ ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಮನಸ್ಸುಳ್ಳವನಾಗಿದ್ದಾನೋ, ಅವನೂ ಆತನನ್ನು ತಿಳಿದವನಾಗಿದ್ದಾನೆ” ಅಂದನು. 23ಆ ಮೇಲೆ ಆತನು ಶಿಷ್ಯರ ಕಡೆಗೆ ತಿರುಗಿಕೊಂಡು ಪ್ರತ್ಯೇಕವಾಗಿ ಹೇಳಿದ್ದೇನೆಂದರೆ, “ನೀವು ನೋಡುತ್ತಿರುವ ಸಂಗತಿಗಳನ್ನು ನೋಡುವವರು ಧನ್ಯರು. 24ಬಹು ಮಂದಿ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ಸಾಧ್ಯವಾಗಲಿಲ್ಲ, ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಾಗಲಿಲ್ಲ ಎಂಬುದಾಗಿ ನಿಮಗೆ ಹೇಳುತ್ತೇನೆ” ಅಂದನು.
ಒಳ್ಳೆಯ ಸಮಾರ್ಯದವನ ಸಾಮ್ಯ
25ಆಗ ಒಬ್ಬ ಧರ್ಮೋಪದೇಶಕನು ಎದ್ದು ಆತನನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕನೇ, ನಾನು ನಿತ್ಯಜೀವವನ್ನು ಹೊಂದಿಕೊಳ್ಳಲು ಏನು ಮಾಡಬೇಕು?” ಎಂದು ಕೇಳಲು, 26ಆತನು ಅವನಿಗೆ, “ಧರ್ಮಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ?” ಎಂದು ಕೇಳಿದನು. 27ಅದಕ್ಕೆ ಅವನು, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.’ ಮತ್ತು ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂದು ಬರೆದದೆ” ಅಂದನು. 28ಆತನು ಅವನಿಗೆ, “ನೀನು ಸರಿಯಾಗಿ ಉತ್ತರಕೊಟ್ಟಿರುವಿ, ಅದರಂತೆ ಮಾಡು, ಮಾಡಿದರೆ ನಿತ್ಯಜೀವಕ್ಕೆ ಬಾಧ್ಯನಾಗುವಿ” ಎಂದು ಹೇಳಿದನು. 29ಆದರೆ ಅವನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳುವುದಕ್ಕೆ ಅಪೇಕ್ಷಿಸಿ, “ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಕೇಳಲು, 30ಯೇಸು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ, “ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನ ಬೆಟ್ಟದ ಪ್ರದೇಶದಿಂದ ಇಳಿದು ಯೆರಿಕೋ ಎಂಬ ಊರಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು, ಹೊಡೆದು, ಅವನನ್ನು ಅರೆಜೀವಮಾಡಿ ಬಿಟ್ಟುಹೋದರು. 31ಆಗ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ಓರೆಯಾಗಿ ಹೋದನು. 32ಅದೇ ರೀತಿಯಲ್ಲಿ ಒಬ್ಬ ಲೇವಿಯು ಆ ಸ್ಥಳಕ್ಕೆ ಬಂದು ಅವನನ್ನು ಕಂಡು ಓರೆಯಾಗಿ ಹೋದನು. 33ಆದರೆ ಒಬ್ಬ ಸಮಾರ್ಯದವನು ಪ್ರಯಾಣಮಾಡುತ್ತಾ ಅವನು ಬಿದಿದ್ದ ಸ್ಥಳಕ್ಕೆ ಬಂದಾಗ ಅವನನ್ನು ಕಂಡು ಕನಿಕರಿಸಿ, 34ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಗಾಯವನು ಕಟ್ಟಿ ತನ್ನ ಸ್ವಂತ ವಾಹನ ಪಶುವಿನ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರೆದುಕೊಂಡು ಹೋಗಿ ಅವನನ್ನು ಆರೈಕೆಮಾಡಿದನು. 35ಮರುದಿನ ಅವನು ಎರಡು ದಿನಾರಿಗಳನ್ನು#10:35 ಒಂದು ದಿನಾರಿ ಅಂದರೆ ಒಂದು ಬೆಳ್ಳಿ ನಾಣ್ಯ. ಅದು ಒಂದು ದಿನದ ಕೂಲಿಗೆ ಸಮವಾಗಿದೆ. ತೆಗೆದು ಛತ್ರದವನಿಗೆ ಕೊಟ್ಟು, ‘ಇವನನ್ನು ಆರೈಕೆಮಾಡು, ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು’ ಅಂದನು. 36ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು?” ಎಂದು ಕೇಳಿದ್ದಕ್ಕೆ, 37ಆ ಧರ್ಮೋಪದೇಶಕನು, “ಅವನಿಗೆ ದಯೆ ತೋರಿಸಿದವನೇ” ಅಂದನು. ಆಗ ಯೇಸು ಅವನಿಗೆ, “ಹೋಗು, ನೀನೂ ಅದರಂತೆ ಮಾಡು” ಎಂದು ಹೇಳಿದನು.
ಮಾರ್ಥ ಮರಿಯಳು ಎಂಬುವರ ಮನೆಯಲ್ಲಿ ಯೇಸು ಇಳುಕೊಂಡದ್ದು
38ಅವರು ಸಂಚಾರಮಾಡುತ್ತಿರುವಾಗ ಆತನು ಒಂದು ಹಳ್ಳಿಗೆ ಬಂದನು. ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಉಳಿಸಿಕೊಂಡಳು. 39ಆಕೆಗೆ ಮರಿಯಳೆಂಬ ಒಬ್ಬ ತಂಗಿ ಇದ್ದಳು. ಈಕೆಯು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು. 40ಆದರೆ ಮಾರ್ಥಳು ಉಪಚಾರ ಸೇವೆಯ ವಿಷಯವಾಗಿ ಬಹಳ ಬೇಸತ್ತು ಯೇಸುವಿನ ಬಳಿಗೆ ಬಂದು, “ಕರ್ತನೇ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು” ಅಂದಳು. 41ಆದರೆ, ಕರ್ತನು ಆಕೆಗೆ, “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. 42ಆದರೆ ಅಗತ್ಯವಾದದ್ದು ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ, ಅದು ಆಕೆಯಿಂದ ತೆಗೆಯಲ್ಪಡುವುದಿಲ್ಲ” ಎಂದು ಉತ್ತರಕೊಟ್ಟನು.
Currently Selected:
ಲೂಕ 10: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.