YouVersion Logo
Search Icon

ಯೋನ 2

2
ಯೋನನ ಪ್ರಾರ್ಥನೆ
1ಯೋನನು ಆ ಮೀನಿನ ಹೊಟ್ಟೆಯೊಳಗೆ ಇದ್ದು ಕೊಂಡು ತನ್ನ ದೇವರಾದ ಯೆಹೋವನಿಗೆ ಹೀಗೆ ಪ್ರಾರ್ಥನೆ ಮಾಡಿದನು:
2“ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು;
ಆತನು ನನಗೆ ಸದುತ್ತರವನ್ನು ದಯಪಾಲಿಸಿದನು;
ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ಕೂಗಿಕೊಂಡೆನು!
ಆಹಾ, ನೀನು ನನ್ನ ಸ್ವರವನ್ನು ಲಾಲಿಸಿದೆ.
3ನನ್ನನ್ನು ಸಮುದ್ರದ ಅಗಾಧಸ್ಥಳದಲ್ಲಿ ಹಾಕಿದ್ದೀಯಲ್ಲಾ;
ಪ್ರವಾಹವು ನನ್ನನ್ನು ಸುತ್ತಿಕೊಂಡಿತು;
ಲೆಕ್ಕವಿಲ್ಲದ ಸಮುದ್ರದ ಅಲೆಗಳೂ, ತೆರೆಗಳೂ ನನ್ನ ಮೇಲೆ ದಾಟಿ ಹೋದವು
4‘ನಿನ್ನ ಸಾನ್ನಿಧ್ಯದಿಂದ ತಳ್ಳಲ್ಪಟ್ಟಿದ್ದೇನೆ ಎಂದುಕೊಂಡೆನು;
ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಪುನಃ ಹೇಗೆ ನೋಡುವೆನು?’
5ಜಲರಾಶಿಯು ನನ್ನನ್ನು ಮುತ್ತಿ ನನ್ನ ಪ್ರಾಣಕ್ಕೆ ಹಾನಿ ತಂದಿತು,
ಮಹಾಸಾಗರವು ನನ್ನನ್ನು ಆವರಿಸಿತು,
ಕಡಲಕಳೆಯು ನನ್ನ ತಲೆಯನ್ನು ಸುತ್ತಿಕೊಂಡಿತು.
6ಪರ್ವತಗಳ ತಳಹದಿಗೆ ಇಳಿದುಹೋದೆನು,
ಭೂಲೋಕದ ದ್ವಾರಗಳ ಚಿಲಕಗಳು ಎಂದಿಗೂ ತೆಗೆಯದ ಹಾಗೆ ನನ್ನನ್ನು ಬಂಧಿಸಿದವು;
ನನ್ನ ದೇವರಾದ ಯೆಹೋವನೇ, ನೀನು ನನ್ನ ಪ್ರಾಣವನ್ನು ಅಧೋಲೋಕದೊಳಗಿನಿಂದ ಉದ್ಧರಿಸಿದ್ದೀ.
7“ನನ್ನ ಆತ್ಮವು ನನ್ನಲ್ಲಿ ಕುಂದಿಹೋದಾಗ ಯೆಹೋವನಾದ ನಿನ್ನನ್ನು ನೆನಪು ಮಾಡಿಕೊಂಡು ಸ್ಮರಿಸಿದೆನು;
ನನ್ನ ಬಿನ್ನಹವು ನಿನಗೆ ಮುಟ್ಟಿತು, ಅದು ನಿನ್ನ ಪರಿಶುದ್ಧಾಲಯವನ್ನು ಬಂದು ಸೇರಿತು.
8“ನಿರ್ಜೀವ ವಿಗ್ರಹಗಳನ್ನು ಅವಲಂಬಿಸಿದವರು
ತಮ್ಮ ದೇವರ ಕರುಣಾನಿಧಿಯನ್ನು ತೊರೆದುಬಿಡುವರು.
9ಆದರೆ ನಾನು ಸ್ತೋತ್ರ ಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು,
ನಿನಗೆ ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು.
ರಕ್ಷಣೆಯು ಯೆಹೋವನಿಂದಲೇ ಉಂಟಾಗುವುದು.”
10ಆಗ ಯೆಹೋವನು ಮೀನಿಗೆ ಅಪ್ಪಣೆಕೊಡಲು ಅದು ಯೋನನನ್ನು ಸಮುದ್ರದ ದಡದಲ್ಲಿ ಕಾರಿಬಿಟ್ಟಿತು.

Currently Selected:

ಯೋನ 2: IRVKan

Highlight

Share

Copy

None

Want to have your highlights saved across all your devices? Sign up or sign in