ಯೆರೆ 6
6
ಯೆರೂಸಲೇಮಿನ ಜನರಿಗೆ ಎಚ್ಚರಿಕೆ
1“ಬೆನ್ಯಾಮೀನ್ ಕುಲದವರೇ, ಯೆರೂಸಲೇಮಿನೊಳಗಿಂದ ವಲಸೆ ಹೋಗಿರಿ, ತೆಕೋವದಲ್ಲಿ ಕೊಂಬನ್ನೂದಿರಿ, ಬೇತ್ ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ, ಏಕೆಂದರೆ ಉತ್ತರ ದಿಕ್ಕಿನಿಂದ ಅತಿನಾಶಕರವಾದ ವಿಪತ್ತು ತಲೆದೋರುತ್ತಿದೆ.
2ಚೀಯೋನ್ ನಗರಿಯು ಸೊಂಪಾದ ಹಸುರುಗಾವಲಿಗೆ ಸಮಾನವಾಗಿ ನನಗೆ ಕಾಣುತ್ತದೆ.
3ಕುರುಬರು ತಮ್ಮ ಹಿಂಡುಗಳೊಡನೆ ಅಲ್ಲಿಗೆ ಬಂದು ಅದರೆದುರಿಗೆ ಸುತ್ತಲೂ ತಮ್ಮ ಗುಡಾರಗಳನ್ನು ಹಾಕುವರು; ಪ್ರತಿಯೊಬ್ಬನೂ ತನ್ನ ತನ್ನ ಸ್ಥಳದಲ್ಲಿ ಮೇಯಿಸಿಬಿಡುವನು.
4ಇವರು, ಚೀಯೋನಿಗೆ ವಿರುದ್ಧವಾಗಿ ಸನ್ನದ್ಧರಾಗಿರಿ, ಏಳಿರಿ, ಮಧ್ಯಾಹ್ನಕ್ಕೆ ಅದರ ಮೇಲೆ ನುಗ್ಗುವ! ಅಯ್ಯೋ, ಇದೇನು! ನಮಗೆ ಹೊತ್ತು ತಿರುಗಿತಲ್ಲಾ, ಸಂಜೆಯ ನೆರಳುಗಳು ಉದ್ದವಾದವು ಅನ್ನುವರು.
5ಎದ್ದು ರಾತ್ರಿಯಲ್ಲಿ ಅದರ ಮೇಲೆ ಬಿದ್ದು ಅಲ್ಲಿನ ಅರಮನೆಗಳನ್ನು ಹಾಳುಮಾಡೋಣ ಅಂದುಕೊಳ್ಳುವರು.
6ಸೇನಾಧೀಶ್ವರನಾದ ಯೆಹೋವನು, ಮರಗಳನ್ನು ಕಡಿದುಬಿಡಿರಿ, ಯೆರೂಸಲೇಮಿನ ಎದುರಿಗೆ ದಿಬ್ಬಹಾಕಿರಿ.
ಇದೇ ನೀವು ದಂಡಿಸತಕ್ಕ ಪಟ್ಟಣ; ಅದರೊಳಗೆ ಬರೀ ದಬ್ಬಾಳಿಕೆಯೇ ತುಂಬಿದೆ.
7ತೊಟ್ಟಿಯು ತನ್ನಲ್ಲಿನ ನೀರನ್ನು ತಿಳಿಯಾಗಿ ಇಟ್ಟುಕೊಳ್ಳುವಂತೆ ಈ ಪಟ್ಟಣವು ತನ್ನಲ್ಲಿನ ದುಷ್ಟತನವನ್ನು ನಿಚ್ಚಳವಾಗಿ ಇಟ್ಟುಕೊಂಡಿದೆ.
ಅಲ್ಲಿ ಬಲಾತ್ಕಾರದ ಮತ್ತು ಕೊಳ್ಳೆಯ ಸುದ್ದಿಯೇ ಕೇಳಿಬರುತ್ತದೆ; ರೋಗಗಳೂ, ಗಾಯಗಳೂ ಸದಾ ನನ್ನ ಕಣ್ಣಿಗೆ ಬೀಳುತ್ತವೆ.
8ಯೆರೂಸಲೇಮೇ, ನಾನು ನಿನ್ನನ್ನು ಅಗಲಿ ನಾಶಪಡಿಸಿ ನಿರ್ಜನ ದೇಶವನ್ನಾಗಿ ಮಾಡದಂತೆ ರಕ್ಷಿಸಿಕೊಳ್ಳಲು ಶಿಕ್ಷಣವನ್ನು ಹೊಂದು ಎಂದು ಹೇಳಿದ್ದಾನೆ.
9ಸೇನಾಧೀಶ್ವರನಾದ ಯೆಹೋವನು, ಇಸ್ರಾಯೇಲಿನ ಶೇಷವನ್ನು ದ್ರಾಕ್ಷಿಯ ಹಕ್ಕಲನ್ನೋ ಎಂಬಂತೆ ಆಯಬೇಕು; ದ್ರಾಕ್ಷಿಯ ಹಣ್ಣನ್ನು ಕೀಳುವವನಂತೆ ನೀನು ನಿನ್ನ ಕೈಯನ್ನು ತಿರುಗಿ ರೆಂಬೆಗಳಲ್ಲಿ ಹಾಕು ಎಂದು ಹೇಳುತ್ತಾನೆ.
ದಂಗೆಕೋರ ಯೆಹೂದ
10ನಾನು, ಯಾರ ಸಂಗಡ ಮಾತನಾಡಿ ಅವರು ಗಮನಿಸುವಂತೆ ಸಾಕ್ಷಿಕೊಡಲಿ? ಇಗೋ, ಅವರ ಕಿವಿ ಮುಚ್ಚಲ್ಪಟ್ಟಿವೆ.#6:10 ಅವರ ಕಿವಿ ಮುಚ್ಚಲ್ಪಟ್ಟಿವೆ. ಅವರ ಕಿವಿಗಳು ಸುನ್ನತಿ ಇಲ್ಲದವು,
ಅಯ್ಯೋ, ಯೆಹೋವನ ಮಾತು ಅವರಿಗೆ ತಿರಸ್ಕಾರ, ಅದರಲ್ಲಿ ಅವರಿಗೆ ಆನಂದವೇ ಇಲ್ಲ.
11ಆದಕಾರಣ ಯೆಹೋವನ ರೋಷವು ನನ್ನಲ್ಲಿ ತುಂಬಿ ತುಳುಕುತ್ತದೆ; ತಡೆದು ತಡೆದು ನನಗೆ ಸಾಕಾಯಿತು.
ಬೀದಿಯಲ್ಲಿನ ಮಕ್ಕಳ ಮೇಲೂ, ಯುವಕರ ಸಂಘದ ಮೇಲೂ ಅದನ್ನು ಹೊಯ್ದು ಬಿಡಬೇಕು.
ಗಂಡನೂ, ಹೆಂಡತಿಯೂ, ಮುದುಕನೂ, ಮುಪ್ಪಿನ ಮುದುಕನೂ ಅಂತು ಎಲ್ಲರೂ ಅಪಹರಿಸಲ್ಪಡುವರು.
12ಅವರ ಹೆಂಡತಿ, ಮನೆ, ಹೊಲ ಮತ್ತು ಗದ್ದೆ ಇವೆಲ್ಲವುಗಳು ಅನ್ಯರ ಪಾಲಾಗುವವು. ದೇಶದ ನಿವಾಸಿಗಳ ಮೇಲೆ ಕೈಮಾಡುವೆನಷ್ಟೆ ಎಂದು ಯೆಹೋವನು ಹೇಳಿದ್ದಾನೆ.
13ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಬಾಚಿಕೊಳ್ಳುತ್ತಲೇ ಇದ್ದಾರೆ; ಪ್ರವಾದಿಗಳು ಮೊದಲುಗೊಂಡು ಯಾಜಕರವರೆಗೆ ಸಕಲರು ಮೋಸಮಾಡುತ್ತಾರೆ.
14ಸಮಾಧಾನವಿಲ್ಲದಿದ್ದರೂ, ಸಮಾಧಾನ ಎಂದು ಹೇಳಿ ನನ್ನ ಜನರ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ.
15ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾದರೂ ಎಳ್ಳಷ್ಟೂ ನಾಚಿಕೆಪಡಲಿಲ್ಲ, ಲಜ್ಜೆಯ ಗಂಧವನ್ನೂ ತಿಳಿಯಲಿಲ್ಲ.
ಆದಕಾರಣ ನಾನು ದಂಡಿಸುವ ಸಮಯದಲ್ಲಿ ಅವರು ಮುಗ್ಗರಿಸುವರು, ಬೀಳುವವರ ಸಂಗಡ ಬಿದ್ದೇ ಹೋಗುವರು” ಎಂದು ಯೆಹೋವನು ನುಡಿಯುತ್ತಾನೆ.
ಯೆಹೋವನ ಮಾರ್ಗವನ್ನು ತಿರಸ್ಕರಿಸಿದ ಯೆಹೂದ
16ಯೆಹೋವನು, “ದಾರಿಗಳು ಕೂಡುವ ಸ್ಥಳದಲ್ಲಿ ನಿಂತುಕೊಂಡು ನೋಡಿ ಪುರಾತನ ಮಾರ್ಗಗಳು ಯಾವುವು.
ಆ ಸನ್ಮಾರ್ಗವು ಎಲ್ಲಿ? ಎಂದು ವಿಚಾರಿಸಿ ಅದರಲ್ಲೇ ನಡೆಯಿರಿ; ಇದರಿಂದ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು ಎಂದು ಅಪ್ಪಣೆಕೊಟ್ಟಾಗ ಅವರು ‘ಅದರಲ್ಲಿ ನಾವು ನಡೆಯುವುದೇ ಇಲ್ಲ’ ಎಂದರು.
17‘ತುತ್ತೂರಿಯ ಶಬ್ದವನ್ನು ಕೇಳಿರಿ’ ಎಂದು ನಾನು ಅವರ ಮೇಲೆ ಕಾವಲುಗಾರರನ್ನು ನೇಮಿಸಲು, ‘ನಾವು ಕೇಳುವುದಿಲ್ಲ’ ಎಂದು ಹೇಳಿದರು.
18ಆದಕಾರಣ, ಜನಾಂಗಗಳೇ, ಕೇಳಿರಿ! ಜನಸಮೂಹವೇ, ಅವರಲ್ಲಿ ನಡೆದದ್ದನ್ನು ಮನಸ್ಸಿಗೆ ತಂದುಕೋ!
19ಭೂಲೋಕವೇ, ಕೇಳು! ಆಹಾ, ಈ ಜನರು ನನ್ನ ಮಾತುಗಳನ್ನು ಕೇಳದೆ, ನನ್ನ ಧರ್ಮಬೋಧನೆಯನ್ನು ಅಸಡ್ಡೆಮಾಡಿದ್ದರಿಂದ ಇವರ ಆಲೋಚನೆಗಳ ಫಲವಾದ ಕೇಡನ್ನು ಇವರ ಮೇಲೆ ಬರಮಾಡುವೆನು.
20ನೀವು ಶೆಬದ ಧೂಪವನ್ನು ಮತ್ತು ದೂರ ದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವುದರಿಂದ ಏನು ಪ್ರಯೋಜನ?
ನಿಮ್ಮ ಹೋಮಗಳು ನನಗೆ ಮೆಚ್ಚಿಕೆಯಲ್ಲ, ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.
21ಆದಕಾರಣ ಇಗೋ, ನಾನು ಈ ಜನರ ಮುಂದೆ ಅಡ್ಡಿಆತಂಕಗಳನ್ನು ಒಡ್ಡುವೆನು.
ತಂದೆ ಮಕ್ಕಳು ಅವುಗಳನ್ನೂ ಎಡವುವರು, ನೆರೆಹೊರೆಯವರೂ ನಾಶವಾಗುವರು ಇದೇ ಯೆಹೋವನಾದ ನನ್ನ ಮಾತು” ಎಂದು ನುಡಿಯುತ್ತಾನೆ.
ಉತ್ತರ ದಿಕ್ಕಿನಿಂದ ಆಕ್ರಮಣ
22“ಆಹಾ, ಉತ್ತರ ದಿಕ್ಕಿನಿಂದ ಜನಸಮೂಹ ಬರುತ್ತದೆ, ಮಹಾ ಜನಾಂಗವು ಎಬ್ಬಿಸಲ್ಪಟ್ಟು ಲೋಕದ ಕಟ್ಟಕಡೆಯಿಂದ ಹೊರಡುತ್ತದೆ.
23ಬಿಲ್ಲನ್ನೂ, ಈಟಿಯನ್ನೂ ಹಿಡಿದುಕೊಂಡಿದ್ದಾರೆ, ಅವರು ಕ್ರೂರರು, ನಿಷ್ಕರುಣಿಗಳು; ಅವರ ಧ್ವನಿಯು ಸಮುದ್ರದಂತೆ ಬೋರ್ಗರೆಯುತ್ತದೆ, ಕುದುರೆಗಳನ್ನು ಹತ್ತಿದ್ದಾರೆ.
ಚೀಯೋನ್ ನಗರಿಯೇ, ಆ ಸೈನ್ಯವು ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ” ಎಂದು ಯೆಹೋವನು ನುಡಿಯುತ್ತಾನೆ.
24ನಾವು ಅದರ ಸುದ್ದಿಯನ್ನು ಕೇಳಿದೆವು, ನಮ್ಮ ಕೈಗಳು ಜೋಲುಬಿದ್ದವು, ಪ್ರಸವವೇದನೆಯಂತಿರುವ ಯಾತನೆಯು ನಮ್ಮನ್ನು ಹಿಡಿದಿದೆ.
25ಊರ ಹೊರಗೆ ಹೋಗಬೇಡಿರಿ, ದಾರಿಯಲ್ಲಿ ನಡೆಯಬೇಡಿರಿ; ಶತ್ರುವಿನ ಕತ್ತಿಯಿದೆ, ಸುತ್ತುಮುತ್ತಲು ದಿಗಿಲು.
26ನನ್ನ ಪ್ರಜೆಯೆಂಬ ಯುವತಿಯೇ, ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯಲ್ಲಿ ಬಿದ್ದು ಹೊರಳಾಡು.
ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ದುಃಖಪಟ್ಟು ಘೋರಪ್ರಲಾಪ ಮಾಡು; ಕೊಳ್ಳೆಗಾರನು ತಟ್ಟನೆ ನಮ್ಮ ಮೇಲೆ ಬೀಳುವನಷ್ಟೆ.
27ಯೆಹೋವನು ನನಗೆ, “ನಾನು ನಿನ್ನನ್ನು ನನ್ನ ಜನವೆಂಬ ಅದಿರಿಗೆ ಶೋಧಕನನ್ನಾಗಿ ನೇಮಿಸಿದ್ದೇನೆ; ನೀನು ಅವರ ನಡತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕು.
28ಅವರೆಲ್ಲರೂ ಕೇವಲ ದ್ರೋಹಿಗಳು, ಚಾಡಿ ಹೇಳುತ್ತಾ ತಿರುಗಾಡುವವರು.
ಅವರು ತಾಮ್ರ ಮತ್ತು ಕಬ್ಬಿಣ, ಅವರೆಲ್ಲರೂ ಭ್ರಷ್ಟರೇ.
29ತಿದಿಯು (ಶ್ವಾಸಕೋಶ) ಬುಸುಬುಸುಗುಟ್ಟುತ್ತದೆ, ಸೀಸವು ಉರಿಯಿಂದ ಸುಟ್ಟುಹೋಗುತ್ತದೆ.
ಅಕ್ಕಸಾಲಿಗನು ಎಷ್ಟು ಶೋಧಿಸಿದರೂ ನಿಷ್ಪ್ರಯೋಜನ, ಕಲ್ಮಷವು ತೆಗೆಯಲ್ಪಡುವುದಿಲ್ಲ.
30ಯೆಹೋವನಾದ ನಾನು ಇವರನ್ನು ನೂಕಿಬಿಟ್ಟಿದ್ದರಿಂದ ಇವರು ‘ಕಂದು ಬೆಳ್ಳಿ’ ಎನಿಸಿಕೊಳ್ಳುವರು” ಎಂದು ಹೇಳಿದ್ದಾನೆ.
Currently Selected:
ಯೆರೆ 6: IRVKan
Highlight
Share
Copy
![None](/_next/image?url=https%3A%2F%2Fimageproxy.youversionapi.com%2F58%2Fhttps%3A%2F%2Fweb-assets.youversion.com%2Fapp-icons%2Fen.png&w=128&q=75)
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.