YouVersion Logo
Search Icon

ನ್ಯಾಯ 21

21
ಹತರಾಗದೆ ಉಳಿದ ಬೆನ್ಯಾಮೀನ್ಯರಿಗೆ ಹೆಂಡತಿಯರನ್ನು ದೊರಕಿಸಿದ್ದು
1ಇಸ್ರಾಯೇಲರೆಲ್ಲರೂ ಮಿಚ್ಪೆಯಲ್ಲಿದ್ದಾಗ ತಾವು ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವುದಿಲ್ಲವೆಂದು ಆಣೆಯಿಟ್ಟಿದ್ದರು. 2ಅವರು ಬೇತೇಲಿಗೆ ಬಂದು ಸಾಯಂಕಾಲದವರೆಗೆ ದೇವರ ಮುಂದೆ ಕುಳಿತು, ಗಟ್ಟಿಯಾಗಿ ಅಳುತ್ತಾ, 3“ಯೆಹೋವನೇ, ಇಸ್ರಾಯೇಲ್ಯರ ದೇವರೇ, ನಮ್ಮಲ್ಲಿ ಹೀಗೆ ಯಾಕೆ ಆಯಿತು? ಇಸ್ರಾಯೇಲರ ಒಂದು ಕುಲವು ಹಾಳಾಗಿ ಹೋಯಿತಲ್ಲಾ” ಎಂದು ಕೂಗಿದರು. 4ಮರುದಿನ ಅವರು ಬೆಳಿಗ್ಗೆ ಎದ್ದು ಯಜ್ಞವೇದಿಯನ್ನು ಕಟ್ಟಿ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು. 5ಮತ್ತು ಯೆಹೋವನ ಮುಂದೆ ಸಭೆ ಸೇರಿದಾಗ, ಬಾರದೆ ಇದ್ದಂಥ ಇಸ್ರಾಯೇಲರು ಯಾರಾರೆಂದು ವಿಚಾರಮಾಡಿದರು. ಯಾಕೆಂದರೆ ಮಿಚ್ಪೆಯಲ್ಲಿ, “ಯೆಹೋವನ ಸನ್ನಿಧಿಗೆ ಬಾರದವರನ್ನು ಕೊಂದು ಹಾಕುವೆವು” ಎಂದು ಆಣೆಯಿಟ್ಟು ಪ್ರಮಾಣಮಾಡಿದ್ದರು. 6ಇಸ್ರಾಯೇಲರು ತಮ್ಮ ಬಂಧುಗಳಾದ ಬೆನ್ಯಾಮೀನ್ಯರ ಅವಸ್ಥೆಯನ್ನು ಕಂಡು ದುಃಖದಿಂದ, “ಅಯ್ಯೋ, ಇಸ್ರಾಯೇಲರಾದ ನಮ್ಮಲ್ಲಿ ಒಂದು ಕುಲವು ಕಡಿಮೆಯಾಯಿತಲ್ಲಾ; 7ಜೀವದಿಂದುಳಿದವರಿಗೆ ಹೆಂಡತಿಯರನ್ನು ದೊರಕಿಸಿಕೊಡುವುದು ಹೇಗೆ? ನಮ್ಮ ಹೆಣ್ಣುಗಳನ್ನು ಅವರಿಗೆ ಕೊಡುವುದಿಲ್ಲವೆಂದು ಯೆಹೋವನ ಹೆಸರಿನಲ್ಲಿ ಆಣೆಯಿಟ್ಟಿದ್ದೇವಲ್ಲಾ” ಎಂದು ಗೋಳಾಡಿದರು.
8ಮಿಚ್ಪೆಯಲ್ಲಿ ಯೆಹೋವನ ಮುಂದೆ ಸಭೆ ಸೇರಿದಾಗ, ಅದಕ್ಕೆ ಬಾರದಿದ್ದ ಇಸ್ರಾಯೇಲರು ಯಾರಾದರೂ ಇದ್ದಾರೋ ಎಂದು ವಿಚಾರಿಸಿದಾಗ ಯಾಬೇಷ್‍ ಗಿಲ್ಯಾದಿನಿಂದ ಒಬ್ಬನೂ ಬರಲಿಲ್ಲವೆಂದು ಗೊತ್ತಾಯಿತು. 9ಜನರನ್ನು ಲೆಕ್ಕಿಸಿದಾಗ ಯಾಬೇಷ್ ಗಿಲ್ಯಾದಿನಿಂದ ಯಾರೂ ಬರಲಿಲ್ಲವೆಂಬುದು ದೃಢವಾಯಿತು. 10ಆಗ ಅವರು ತಮ್ಮಲ್ಲಿಂದ ಹನ್ನೆರಡು ಸಾವಿರ ಮಂದಿ ಪರಾಕ್ರಮಶಾಲಿಗಳನ್ನು ಆರಿಸಿಕೊಂಡು ಅವರಿಗೆ, “ನೀವು ಯಾಬೇಷ್ ಗಿಲ್ಯಾದಿಗೆ ಹೋಗಿ ಎಲ್ಲಾ ನಿವಾಸಿಗಳನ್ನೂ, ಸ್ತ್ರೀಯರನ್ನೂ, ಚಿಕ್ಕ ಮಕ್ಕಳನ್ನೂ ಬಿಡದೆ ಸಂಹರಿಸಬೇಕು; 11ಹೇಗೂ ಪುರುಷರನ್ನು, ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲಮಾಡುವುದು ನಿಮ್ಮ ಕೆಲಸ” ಎಂದು ಆಜ್ಞಾಪಿಸಿ ಕಳುಹಿಸಿದರು. 12ಯಾಬೇಷ್ ಗಿಲ್ಯಾದಿನಲ್ಲಿ ಇನ್ನೂ ಮದುವೆಯಾಗದಿದ್ದ ನಾನೂರು ಮಂದಿ ಯುವತಿಯರಿದ್ದರು. ಪಟ್ಟಣವನ್ನು ಸಂಹರಿಸುವುದಕ್ಕೆ ಹೋದವರು ಇವರನ್ನು ಉಳಿಸಿ, ಕಾನಾನ್ ದೇಶದ ಶೀಲೋವಿನಲ್ಲಿದ್ದ ಪಾಳೆಯಕ್ಕೆ ತೆಗೆದುಕೊಂಡು ಬಂದರು. 13ಅನಂತರ ಸರ್ವಸಭೆಯವರು ರಿಮ್ಮೋನ್ ಗಿರಿಯಲ್ಲಿದ್ದ ಬೆನ್ಯಾಮೀನ್ಯರ ಬಳಿಗೆ ದೂತರನ್ನು ಕಳುಹಿಸಿ ಅವರಲ್ಲಿ ಸಮಾಧಾನ ವಾಕ್ಯವನ್ನು ಪ್ರಕಟಿಸಲು ಅವರು ತಿರುಗಿ ಬಂದರು. 14ಇಸ್ರಾಯೇಲರು ತಾವು ಯಾಬೇಷ್ ಗಿಲ್ಯಾದಿನಿಂದ ಉಳಿಸಿ ತಂದ ಕನ್ಯೆಯರನ್ನು ಅವರಿಗೆ ಮದುವೆಮಾಡಿಕೊಟ್ಟರು; ಆದರೂ ಅನೇಕರಿಗೆ ಕನ್ಯೆಯರು ದೊರೆಯಲಿಲ್ಲ.
15ಯೆಹೋವನು ಇಸ್ರಾಯೇಲಿನ ಕುಲಗಳಲ್ಲಿ ಬೆನ್ಯಾಮೀನರನ್ನು ಬೇರ್ಪಡಿಸಿದ್ದರಿಂದ ಜನರು ಬೆನ್ಯಾಮೀನ್ಯರ ವಿಷಯದಲ್ಲಿ ದುಃಖಪಟ್ಟರು. 16ಸಭೆಯ ಹಿರಿಯರು, “ಉಳಿದಿರುವ ಬೆನ್ಯಾಮೀನ್ಯರಿಗೋಸ್ಕರ ಹೆಂಡತಿಯರನ್ನು ದೊರಕಿಸಿ ಕೊಡುವುದು ಹೇಗೆ? ಅವರ ಸ್ತ್ರೀಯರೆಲ್ಲಾ ಸಂಹಾರವಾದರಲ್ಲಾ. 17ಇಸ್ರಾಯೇಲ್ಯರ ಒಂದು ಪೂರ್ಣ ಕುಲವು ಅಳಿದುಹೋಗಬಾರದು; ತಪ್ಪಿಸಿಕೊಂಡು ಉಳಿದಿರುವ ಬೆನ್ಯಾಮೀನರಿಗೆ ಬಾಧ್ಯಸ್ಥರು ಹುಟ್ಟುಬೇಕಲ್ಲಾ. 18ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವ ಇಸ್ರಾಯೇಲರು ಶಾಪಗ್ರಸ್ತರಾಗಲಿ ಎಂದು ಆಣೆಯಿಟ್ಟುಕೊಂಡಿದ್ದ ಕಾರಣ ನಾವು ಅವರಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಕ್ಕಾಗುವುದಿಲ್ಲ” ಎಂದು ಮಾತನಾಡಿಕೊಳ್ಳುತ್ತಿದ್ದರು. 19ಆಗ ಶೀಲೋವಿನಲ್ಲಿ ಪ್ರತಿವರ್ಷ ಯೆಹೋವನ ಉತ್ಸವ ನಡೆಯುತ್ತದೆಂಬುದು ಅವರ ನೆನಪಿಗೆ ಬಂದಿತು. (ಶೀಲೋ ಎಂಬುದು ಬೇತೇಲಿನ ಉತ್ತರಕ್ಕೂ ಬೇತೇಲಿನಿಂದ ಶೆಕೆಮಿಗೆ ಹೋಗುವ ರಾಜಮಾರ್ಗದ ಪೂರ್ವಕ್ಕೂ, ಲೆಬೋನದ ದಕ್ಷಿಣಕ್ಕೂ ಇರುತ್ತದೆ.) 20ಆಗ ಅವರು ಬೆನ್ಯಾಮೀನ್ಯರನ್ನು ಕರೆದು ಅವರಿಗೆ, “ಇಗೋ, ನೀವು ದ್ರಾಕ್ಷಿತೋಟಗಳಲ್ಲಿ ಅಡಗಿಕೊಳ್ಳಿರಿ; 21ಶೀಲೋವಿನ ಕನ್ಯೆಯರು ಹೊರಗೆ ಬಂದು ನಾಟ್ಯವಾಡುವಾಗ, ನೀವು ತೋಟಗಳಿಂದ ಹೊರಗೆ ಬಂದು ಪ್ರತಿಯೊಬ್ಬನು ತನತನಗೆ ಶೀಲೋವಿನ ಕನ್ಯೆಯರಿಂದ ಒಬ್ಬಳನ್ನು ಹೆಂಡತಿಯಾಗಿ ತೆಗೆದುಕೊಂಡು ನಿಮ್ಮ ಸೀಮೆಗೆ ಓಡಿಹೋಗಿರಿ. 22ಅವರ ತಂದೆಗಳೂ, ಅಣ್ಣತಮ್ಮಂದಿರೂ ನಮ್ಮ ಹತ್ತಿರ ದೂರು ತಂದರೆ ನಾವು ಅವರಿಗೆ, ‘ನಮ್ಮನ್ನು ನೋಡಿ ಅವರಿಗೆ ಕೃಪೆತೋರಿಸಿರಿ; ಯುದ್ಧದಿಂದ ಪ್ರತಿಯೊಬ್ಬನಿಗೆ ಹೆಣ್ಣನ್ನು ದೊರಕಿಸುವುದು ನಮ್ಮಿಂದಾಗಲಿಲ್ಲವಲ್ಲಾ; ಮತ್ತು ನಿಮ್ಮ ಹೆಣ್ಣುಮಕ್ಕಳನ್ನು ನೀವೇ ಕೊಡಲಿಲ್ಲವಾದ್ದರಿಂದ ನೀವು ನಿರಪರಾಧಿಗಳು’ ಎಂದು ಹೇಳಿ ಸಮಾಧಾನಪಡಿಸುವೆವು” ಅಂದರು. 23ಅದರಂತೆಯೇ ಬೆನ್ಯಾಮೀನ್ಯರು ನೃತ್ಯಮಾಡುತ್ತ ಹೊರಗೆ ಬಂದಿದ್ದ ಕನ್ಯೆಯರಲ್ಲಿ ತಮ್ಮ ಸಂಖ್ಯೆಗೆ ಸರಿಯಾಗುವಷ್ಟು ಮಂದಿಯನ್ನು ಹೆಂಡತಿಯರನ್ನಾಗಿ ಹಿಡಿದುಕೊಂಡು ತಮ್ಮ ಸ್ವಾಧೀನವಾದ ಭೂಮಿಗೆ ಹೋಗಿ ಅಲ್ಲಿ ಪಟ್ಟಣಗಳನ್ನು ಕಟ್ಟಿ ವಾಸಮಾಡಿದರು.
24ಅನಂತರ ಇಸ್ರಾಯೇಲರು ತಮ್ಮ ತಮ್ಮ ಕುಲಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿದ ಪ್ರದೇಶಗಳಿಗೆ ಹಿಂದಿರುಗಿ ಹೋದರು. 25ಆ ಕಾಲದಲ್ಲಿ ಇಸ್ರಾಯೇಲರೊಳಗೆ ಅರಸನಿರಲಿಲ್ಲ; ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.

Currently Selected:

ನ್ಯಾಯ 21: IRVKan

Highlight

Share

Copy

None

Want to have your highlights saved across all your devices? Sign up or sign in