ಯೆಶಾ 63
63
ಯೆಹೋವನು ಶತ್ರುಗಳನ್ನು ಧ್ವಂಸಮಾಡುವುದು
1ಆಹಾ, ರಕ್ತವರ್ಣದ ಉಡುಪನ್ನಿಟ್ಟು, ಘನವಸ್ತ್ರಗಳನ್ನು ಧರಿಸಿಕೊಂಡು, ಮಹಾಶೌರ್ಯಯುಕ್ತನಾಗಿ ಮೆರೆಯುತ್ತಾ,
ಎದೋಮಿನ ಬೊಚ್ರದಿಂದ ಬರುವ ಇವನು ಯಾರು?
ಸತ್ಯಾನುಸಾರವಾಗಿ ಮಾತನಾಡುವವನು, ರಕ್ಷಿಸಲು ಸಮರ್ಥನು ಆದ ನಾನೇ.
2ನಿನ್ನ ಉಡುಪು ಏಕೆ ಕೆಂಪಾಗಿದೆ, ನಿನ್ನ ವಸ್ತ್ರಗಳು ದ್ರಾಕ್ಷಿಯನ್ನು ತುಳಿಯುವವನ ಬಟ್ಟೆಯ ಹಾಗಿರುವುದು ಏಕೆ?
3ನಾನೊಬ್ಬನೇ ದ್ರಾಕ್ಷಿಯನ್ನು ತೊಟ್ಟಿಯಲ್ಲಿ ತುಳಿದಿದ್ದೇನೆ, ಜನಾಂಗದವರಲ್ಲಿ ಯಾರೂ ನನ್ನೊಂದಿಗಿರಲಿಲ್ಲ.
ನನ್ನ ಕೋಪದಿಂದ ಶತ್ರುಗಳನ್ನು ತುಳಿದೆನು, ರೋಷವೇರಿದವನಾಗಿ ಅವರನ್ನು ತುಳಿದುಹಾಕಿದೆನು;
ಅವರ ಜೀವಸತ್ವ ನನ್ನ ವಸ್ತ್ರಗಳ ಮೇಲೆ ಸಿಡಿದಿದೆ, ನನ್ನ ಉಡುಪನ್ನೆಲ್ಲಾ ಮಲಿನ ಮಾಡಿಕೊಂಡೆನು.
4ಏಕೆಂದರೆ ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಸಿದ್ಧವಾಗಿತ್ತು, ನನ್ನ ಜನರನ್ನು ವಿಮೋಚಿಸುವ ವರ್ಷವು ಒದಗಿತ್ತು.
5ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, ಯಾವ ಬೆಂಬಲವೂ ಇಲ್ಲದ್ದನ್ನು ಕಂಡು ಸ್ತಬ್ಧನಾದೆನು;
ಆಗ ನನ್ನ ಸ್ವಹಸ್ತವೇ ನನಗೆ ರಕ್ಷಣಾಸಾಧನವಾಯಿತು, ನನ್ನ ರೌದ್ರವೇ ನನಗೆ ಆಧಾರವಾಯಿತು.
6ನನ್ನ ಕೋಪದಿಂದ ಜನಾಂಗಗಳನ್ನು ತುಳಿದು ರೋಷವೇರಿದವನಾಗಿ,
ಅವುಗಳನ್ನು ಚೂರುಚೂರು ಮಾಡಿ ನೆಲದ ಮೇಲೆ ಅವುಗಳ ಸಾರವನ್ನು ಸುರಿಸಿದೆನು.
ಕೃಪಾಕಾರ್ಯಗಳಿಗೆ ಪ್ರಾರ್ಥನೆ
7ಯೆಹೋವನು ನಮಗೆ ಅನುಗ್ರಹಿಸಿದ್ದನ್ನೆಲ್ಲಾ ಸ್ಮರಿಸಿ ಆತನ ಕೃಪಾಕಾರ್ಯಗಳನ್ನು ಮತ್ತು ಸ್ತುತ್ಯಕೃತ್ಯಗಳನ್ನು,
ಆತನು ಕನಿಕರದಿಂದಲೂ, ಕೃಪಾತಿಶಯದಿಂದಲೂ ಇಸ್ರಾಯೇಲ್ ವಂಶದವರಿಗೆ ದಯಪಾಲಿಸಿರುವ ಮಹೋಪಕಾರವನ್ನೂ ಪ್ರಸಿದ್ಧಿಪಡಿಸುವೆನು.
8“ನಿಜವಾಗಿ ಇವರು ನನ್ನ ಜನರು, ನನ್ನ ಮಕ್ಕಳು, ಮೋಸ ಮಾಡಲಾರರು” ಎಂದು ಆತನು ಅಂದುಕೊಂಡು ಅವರಿಗೆ ರಕ್ಷಕನಾದನು.
9ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು;
ತನ್ನಲ್ಲಿನ ಮಮತೆಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ, ಪುರಾತನ ಕಾಲದಲ್ಲೆಲ್ಲಾ ಎತ್ತಿಕೊಂಡು ಹೊರುತ್ತಾ ಬಂದನು.
10ಅವರಾದರೋ ಎದುರುಬಿದ್ದು ಆತನ ಪವಿತ್ರಾತ್ಮವನ್ನು ದುಃಖಪಡಿಸಿದರು; ಆದುದರಿಂದ ಆತನು ಮಾರ್ಪಟ್ಟು ಅವರಿಗೆ ಶತ್ರುವಾಗಿ ತಾನೇ ಅವರೊಡನೆ ಹೋರಾಡಿದನು.
11ಆಗ ಆತನ ಜನರು#63:11 ಆತನ ಜನರು ಆತನು ಅಥವಾ ದೇವರು ಪುರಾತನವಾದ ಮೋಶೆಯ ಕಾಲವನ್ನು ಜ್ಞಾಪಕಮಾಡಿಕೊಂಡು ಹೀಗೆಂದರು, “ತನ್ನ ಜನವೆಂಬ ಮಂದೆಯನ್ನು ಕುರುಬರ ಸಹಿತ ಸಮುದ್ರದೊಳಗಿಂದ ಮೇಲಕ್ಕೆ ಬರಮಾಡಿದಾತನು ಎಲ್ಲಿ?
12ಅವರ ಮಧ್ಯದಲ್ಲಿ ತನ್ನ ಪವಿತ್ರಾತ್ಮವನ್ನಿರಿಸಿ, ಮೋಶೆಯ ಬಲಗೈಯೊಂದಿಗೆ ತನ್ನ ಘನಹಸ್ತವನ್ನೂ ಮುಂದುವರೆಸುತ್ತಾ
ತನ್ನ ಹೆಸರು ಶಾಶ್ವತವಾಗಿರಬೇಕೆಂದು ಅವರೆದುರಿಗೆ ಜಲರಾಶಿಯನ್ನು ಇಬ್ಭಾಗ ಮಾಡಿದಾತನು ಎಲ್ಲಿ?
13ಸಾಗರದ ತಳಕ್ಕೆ ಅವರನ್ನು ನಡೆಸಿದಾತನು ಎಲ್ಲಿ? ಕುದುರೆಯು ಮೈದಾನದಲ್ಲಿ ನಡೆಯುವ ಪ್ರಕಾರ ಅವರು ಮುಗ್ಗರಿಸಲಿಲ್ಲ.
14ತಗ್ಗಿಗೆ ಇಳಿಯುವ ದನಗಳೋಪಾದಿಯಲ್ಲಿ ಯೆಹೋವನ ಆತ್ಮವು ಅವರನ್ನು ವಿಶ್ರಾಂತಿಯ ಸ್ಥಾನಕ್ಕೆ ಕರೆತಂದಿತು;
ನಿನ್ನ ನಾಮವನ್ನು ಘನಪಡಿಸಿಕೊಳ್ಳುವುದಕ್ಕಾಗಿ ನಿನ್ನ ಜನರನ್ನು ಹೀಗೆ ನಡೆಸಿದಿ.
15ಆಕಾಶದಿಂದ ನೋಡು, ಪರಿಶುದ್ಧವೂ, ಘನವೂ ಆದ ನಿನ್ನ ಉನ್ನತಸ್ಥಾನದಿಂದ ಲಕ್ಷಿಸು;
ನಿನ್ನ ಉತ್ಸಾಹವೆಲ್ಲಿ, ನಿನ್ನ ಸಾಹಸ ಕಾರ್ಯಗಳೆಲ್ಲಿ?
ನಿನ್ನ ಕರುಳ ಮರುಗಾಟವನ್ನೂ, ನಿನ್ನ ಕನಿಕರವನ್ನೂ ನಮ್ಮ ಕಡೆಗೆ ಬಿಗಿ ಹಿಡಿದಿದ್ದಿ.
16ನೀನೇ ನಮ್ಮ ಪಿತೃವಾಗಿದ್ದೀಯಲ್ಲಾ;
ಅಬ್ರಹಾಮನು ನಮ್ಮನ್ನರಿಯನು, ಇಸ್ರಾಯೇಲನು ನಮ್ಮನ್ನು ಗುರುತಿಸನು;
ಯೆಹೋವನೇ, ನೀನೇ ನಮ್ಮ ಪಿತೃ; ನೀನು ಆದಿಯಿಂದಲೂ ‘ನಮ್ಮ ವಿಮೋಚಕನು’ ಅನ್ನಿಸಿಕೊಂಡಿದ್ದಿ.
17ಯೆಹೋವನೇ, ನಾವು ನಿನ್ನ ಮಾರ್ಗದಿಂದ ತಪ್ಪಿ ಅಲೆಯುವಂತೆ ಏಕೆ ಮಾಡುತ್ತೀ?
ನಾವು ನಿನಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿನಪಡಿಸುವುದೇಕೆ? ನಿನ್ನ ಸೇವಕರ ನಿಮಿತ್ತ ನಿನ್ನ ಬಾಧ್ಯವಾದ ಕುಲಗಳಿಗಾಗಿ ತಿರುಗಿ ಪ್ರಸನ್ನನಾಗು.
18ನಿನ್ನ ಸ್ವಕೀಯಜನರು ಸ್ವಲ್ಪಕಾಲ ಮಾತ್ರ ನಿನ್ನ ಸ್ವತ್ತಾದ ಪವಿತ್ರಸ್ಥಳವನ್ನು ಅನುಭವಿಸುತ್ತಿದ್ದರು;
ಈಗ ನಮ್ಮ ವೈರಿಗಳು ಅದನ್ನು ತುಳಿದುಬಿಟ್ಟಿದ್ದಾರೆ.
19ನಿನ್ನ ದೊರೆತನಕ್ಕೆ ಎಂದಿಗೂ ಒಳಪಡದೆ, ನಿನ್ನ ನಾಮವನ್ನು ಧರಿಸದೆ ಇರುವ ಜನರ ಹಾಗಿದ್ದೇವೆ.#63:19 ನಿನ್ನ ನಾಮವನ್ನು ಧರಿಸದೆ ಇರುವ ಜನರ ಹಾಗಿದ್ದೇವೆ. ಪುರಾತನ ಕಾಲದಿಂದಲೂ ನಾವು ನಿನ್ನ ಜನರಾಗಿದ್ದೇವೆ.
Currently Selected:
ಯೆಶಾ 63: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.