ಯೆಶಾ 60
60
ಯೆರೂಸಲೇಮಿನ ಮುಂದಿನ ಮಹಾವೈಭವವು
1ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.
2ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ;
ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವುದು.
3ಜನಾಂಗಗಳು ನಿನ್ನ ಬೆಳಕಿಗೆ ನೆರೆದು ಬರುವವು, ಅರಸರೂ ನಿನ್ನಲ್ಲಿನ ಉದಯಪ್ರಕಾಶಕ್ಕೆ ಸೇರುವರು.
4ಕಣ್ಣೆತ್ತಿ ಸುತ್ತಲು ನೋಡು, ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರಿಬರುತ್ತಾರೆ;
ಗಂಡುಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ.
5ನೀನು ಅವರನ್ನು ನೋಡಿ ಸಂತೋಷ ಸಂಭ್ರಮ ಪಡುವೆ, ನಿನ್ನ ಹೃದಯವು ಹರ್ಷಿಸಿ ಉಲ್ಲಾಸಿಸುವುದು;
ಏಕೆಂದರೆ ಸಮುದ್ರ ವ್ಯಾಪಾರದ ಸಮೃದ್ಧಿಯು ನಿನಗೆ ಅತಿಯಾದ ಲಾಭತರುವುದು. ಕಡೆಗೆ ತಿರುಗುವುದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವುದು.
6ಉಷ್ಟ್ರಸಮೂಹವೂ, ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು;
ಅವೆಲ್ಲವೂ ಬಂಗಾರವನ್ನೂ, ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು.
7ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸುವವು.
ಅವು ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ಮಹಿಮೆಯಿಂದ ಕೂಡಿದ ನನ್ನ ಆಲಯವನ್ನು ಘನಪಡಿಸುವೆನು.
8ಆಹಾ, ದ್ವೀಪನಿವಾಸಿಗಳೂ ನನ್ನನ್ನು ನಿರೀಕ್ಷಿಸುವವರಾಗಿದ್ದಾರೆ!
ಮೇಘದೋಪಾದಿಯಲ್ಲಿ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆ ಹಾರಿ ಬರುತ್ತಿರುವ ಇವರು ಯಾರು?
9ಯೆಹೋವನು ನಿನ್ನನ್ನು ವೈಭವಪಡಿಸಿರುವುದನ್ನು ಕೇಳಿ ತಾರ್ಷೀಷಿನ ಹಡಗುಗಳು,
ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ನಿಧಿಯೂ, ಇಸ್ರಾಯೇಲಿನ ಸದಮಲಸ್ವಾಮಿಯ ಸನ್ನಿಧಿಯ ಸ್ಥಾನಕ್ಕೆ
ನಿನ್ನ ಮಕ್ಕಳನ್ನು ಅವರ ಬೆಳ್ಳಿ ಬಂಗಾರಗಳ ಸಮೇತ ದೂರದಿಂದ ತರುವುದರಲ್ಲಿ ಮುಂದಾಗುತ್ತಿವೆ.
10ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಪುನಃ ಕಟ್ಟುವರು, ಅವರ ಅರಸರು ನಿನ್ನನ್ನು ಆರಾಧಿಸುವರು;
ನನ್ನ ಕೋಪದಿಂದ ನಿನ್ನನ್ನು ಹೊಡೆದು, ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ.
11ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು.
ಅವುಗಳ ಅರಸರು ಮೆರವಣಿಗೆಯಾಗಿ ಬರುತ್ತಿರುವರು; ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು.
12ನಿನ್ನನ್ನು ಆರಾಧಿಸದ ಜನಾಂಗ ಮತ್ತು ರಾಜ್ಯಗಳು ನಾಶವಾಗುವವು; ಹೌದು, ಆ ಜನಾಂಗಗಳು ಹಾಳಾಗಿ ಹೋಗುವವು.
13ನನ್ನ ಪವಿತ್ರಾಲಯವನ್ನು ಭೂಷಿಸುವುದಕ್ಕಾಗಿ ತುರಾಯಿ, ತಪಸಿ, ತಿಲಕ ಈ ವೃಕ್ಷರೂಪವಾದ ಲೆಬನೋನಿನ ಮಹಿಮೆಯು ನಿನಗಾಗುವುದು;
ನನ್ನ ಪಾದಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು.
14ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು
ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾಮಿಯ ಚೀಯೋನ್ ಎಂದು ಕೊಂಡಾಡುವರು.
15ನಿವಾಸಿಗಳು ತ್ಯಜಿಸಿದ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು,
ನಿತ್ಯಶ್ರೇಷ್ಠತೆಯನ್ನು ದಯಪಾಲಿಸಿ ನಿನ್ನನ್ನು ತಲತಲಾಂತರದವರೆಗೆ ಉಲ್ಲಾಸಕರವಾಗುವಂತೆ ಮಾಡುವೆನು.
16ನೀನು ಜನಾಂಗಗಳ ಮೊಲೆಕೂಸಾಗುವಿ, ರಾಜರು ನಿನಗೆ ಮೊಲೆಯೂಡಿಸುವರು;
ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನೀನು ತಿಳಿದುಕೊಳ್ಳುವಿ.
17ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು;
ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ, ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.
18ನಿನ್ನ ದೇಶದಲ್ಲಿ ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು, ನಿನ್ನ ಪ್ರಾಂತ್ಯಗಳೊಳಗೆ ಭಂಗನಾಶನಗಳ ವಾರ್ತೆಯೇ ಕೇಳಿಬರುವುದಿಲ್ಲ;
ಆಗ ದೇವರಕ್ಷಣೆಯು ನನ್ನ ಪೌಳಿಗೋಡೆಗಳು, ದೇವಸ್ತೋತ್ರವು ನನ್ನ ಬಾಗಿಲುಗಳು ಎಂದು ಅಂದುಕೊಳ್ಳುವಿ.
19ಇನ್ನು ಮೇಲೆ ಹಗಲಿನಲ್ಲಿ ನಿನಗಿರುವ ಪ್ರಕಾಶವು ಸೂರ್ಯನದಲ್ಲ; ಚಂದ್ರನು ನಿನ್ನ ಬೆಳಕಿಗಾಗಿ ಎಂದಿಗೂ ಕಳೆಗುಂದುವುದಿಲ್ಲ;
ಯೆಹೋವನೇ ನಿನಗೆ ನಿತ್ಯಪ್ರಕಾಶವು, ನಿನ್ನ ದೇವರೇ ನಿನಗೆ ತೇಜಸ್ಸು.
20ನಿನ್ನ ಸೂರ್ಯನು ಇನ್ನು ಮುಳುಗನು, ನಿನ್ನ ಚಂದ್ರನು ತೊಲಗನು;
ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು, ನೀನು ದುಃಖಿಸುವ ದಿನಗಳು ಕೊನೆಯಾಗುವುದು.
21ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು; ನನ್ನ ಪ್ರಭಾವಕ್ಕೋಸ್ಕರ ನಾನು ನೆಟ್ಟ ಸಸಿಯಾಗಿಯೂ,
ನನ್ನ ಕೈ ಸೃಷ್ಟಿಸಿದ ಪ್ರಜೆಯಾಗಿಯೂ ದೇಶವನ್ನು ಸದಾ ಅನುಭವಿಸುವರು.
22ಚಿಕ್ಕವನಿಂದ ಒಂದು ಕುಲವಾಗುವುದು, ಅಲ್ಪನಿಂದ ಬಲವಾದ ಜನಾಂಗವಾಗುವುದು.
ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.
Currently Selected:
ಯೆಶಾ 60: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.