ಯೆಶಾ 58
58
ನಿಜವಾದ ಉಪವಾಸ
1ಸ್ವರವೆತ್ತಿ ಕೂಗು, ಸಂಕೋಚಪಡಬೇಡ,
ಕೊಂಬಿನಂತೆ ಧ್ವನಿಗೈದು ನನ್ನ ಜನರಿಗೆ ಅವರ ದ್ರೋಹಗಳನ್ನು ತಿಳಿಯಪಡಿಸು. ಯಾಕೋಬ ವಂಶದವರಿಗೆ ಅವರ ಪಾಪಗಳನ್ನು ತಿಳಿಸು.
2ಅವರಂತು ದಿನದಿನವೂ ನನ್ನ ದರ್ಶನಕ್ಕಾಗಿ ಬಂದು, ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಹೆಚ್ಚಳಪಡುತ್ತಾರೆ;
ತನ್ನ ದೇವರ ನಿಯಮಗಳನ್ನು ಬಿಡದೆ ಧರ್ಮವನ್ನಾಚರಿಸುವ ಜನಾಂಗವೋ ಎಂಬಂತೆ,
ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳಿಕೊಂಡು ದೇವದರ್ಶನದಲ್ಲಿ ಆನಂದಿಸುತ್ತಾರೆ.
3“ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ; ನಮ್ಮ ಆತ್ಮವನ್ನು ಕುಂದಿಸಿಕೊಂಡಿದ್ದೇವೆ,
ನೀನು ಗಮನಿಸದಿರುವುದೇಕೆ” ಅಂದುಕೊಳ್ಳುತ್ತಾರೆ.
ಇಗೋ, ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ನಿತ್ಯದ ಕೆಲಸವನ್ನು ನಡೆಸಿ ನಿಮ್ಮ ಆಳುಗಳನ್ನು ದುಡಿತಕ್ಕೆ ಎಳೆಯುತ್ತೀರಿ.
4ನೋಡಿರಿ, ನಿಮ್ಮ ಉಪವಾಸದ ಫಲವೇನೆಂದರೆ, ವ್ಯಾಜ್ಯ, ಕಲಹ, ಕೇಡಿನ ಗುದ್ದು ಇವುಗಳೇ. ನೀವು ಈಗ ಮಾಡುವ ಉಪವಾಸವು ನಿಮ್ಮ ಪ್ರಾರ್ಥನೆಯನ್ನು ಉನ್ನತಲೋಕಕ್ಕೆ ಮುಟ್ಟಿಸತಕ್ಕದ್ದಲ್ಲ.
5ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವುದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದ್ದೋ,?
ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣಿತಟ್ಟನ್ನೂ ಮತ್ತು ಬೂದಿಯನ್ನೂ ಆಸನಮಾಡಿಕೊಳ್ಳುವುದು
ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ?
6ನೋಡಿರಿ, ಕೇಡಿನ ಬಂಧನಗಳನ್ನು ಬಿಚ್ಚುವುದು, ನೊಗಹೊರಿಸುವ ಹುರಿಯನ್ನು ಕಳಚುವುದು,
ಜಜ್ಜಿ ಹೋದವರನ್ನು ಬಿಡುಗಡೆ ಮಾಡುವುದು, ನೊಗಗಳನ್ನೆಲ್ಲಾ ಮುರಿಯುವುದು,
7ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು,
ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ಮನುಷ್ಯನಾಗಿರುವ ಯಾರಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವುದು,
ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ.
8ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಮೂಡಿ ಬರುವುದು,
ನಿಮ್ಮ ಕ್ಷೇಮವು ಬೇಗನೆ ಬೆಳೆಯುವುದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿರುವುದು,
ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವುದು.
9ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ, “ಇಗೋ, ಇದ್ದೇನೆ” ಅನ್ನುವನು.
ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನು, ಇನ್ನೊಬ್ಬರನ್ನು ದೂಷಣೆಗೆ ಗುರಿಮಾಡಿ ತೋರುವ ಬೆರಳನ್ನು, ಕೆಡುಕಿನ ನುಡಿಯನ್ನು ಬಿಟ್ಟು,
10ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ, ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ,
ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವುದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವುದು.
11ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡೆಸುತ್ತಾ,
ಮರುಭೂಮಿಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ, ನಿಮ್ಮ ಎಲುಬುಗಳನ್ನು ಬಲಗೊಳಿಸುವನು;
ನೀವು ತಂಪಾದ ತೋಟಕ್ಕೂ, ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ.
12ನಿಮ್ಮ ಸಂತಾನದವರು ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ಪುನಃ ಕಟ್ಟುವರು.
ನೀವು ತಲತಲಾಂತರಗಳಿಂದ ಹಾಳುಬಿದ್ದಿರುವ ಅಸ್ತಿವಾರಗಳ ಮೇಲೆ ಕಟ್ಟಡಗಳನ್ನು ಎಬ್ಬಿಸುವಿರಿ;
“ಬಿದ್ದ ಗೋಡೆಯನ್ನು ಕಟ್ಟುವ ಜನಾಂಗ, ಹಾದಿಗಳನ್ನು ತಿರುಗಾಡುವ ಸ್ಥಿತಿಗೆ ತರುವ ಜನಾಂಗ”
ಎಂಬ ಬಿರುದುಗಳು ನಿಮಗುಂಟಾಗುವವು.
ಸಬ್ಬತ್ ದಿನದ ಆಚರಣೆ
13ನೀವು ಸಬ್ಬತ್ ದಿನವನ್ನು ಅಗಮ್ಯವಾದದ್ದೆಂದು ತಿಳಿದು, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ನಿತ್ಯದ ಕೆಲಸವನ್ನು ಮಾಡದೆ,
ಸ್ವಇಚ್ಛೆಯಂತೆ ನಡೆಯದೆ, ಸ್ವಕಾರ್ಯದಲ್ಲಿ ನಿರತರಾಗದೆ, ಹರಟೆಹರಟದೆ,
ಯೆಹೋವನ ಸಬ್ಬತ್ ಎಂಬ ಪರಿಶುದ್ಧದಿನವು ಉಲ್ಲಾಸಕರವೂ, ಮಾನ್ಯವೂ ಆದದ್ದೆಂದು ಘನಪಡಿಸಿದರೆ,
14ಆಗ ನೀವು ಯೆಹೋವನಲ್ಲಿ ಉಲ್ಲಾಸಪಡುವಿರಿ ಮತ್ತು ನಾನು ನಿಮ್ಮನ್ನು ಭೂಮಿಯ ಉನ್ನತವಾದ ಪ್ರದೇಶಗಳ ಮೇಲೆ ಹತ್ತಿಸಿ,
ನಿಮ್ಮ ಪಿತೃವಾದ ಯಾಕೋಬನ ಸ್ವತ್ತನ್ನು ನೀವು ಅನುಭವಿಸುವಂತೆ ಮಾಡುವೆನು.
ಯೆಹೋವನೇ ಇದನ್ನು ನುಡಿದಿದ್ದಾನೆ.
Currently Selected:
ಯೆಶಾ 58: IRVKan
Highlight
Share
Copy
![None](/_next/image?url=https%3A%2F%2Fimageproxy.youversionapi.com%2F58%2Fhttps%3A%2F%2Fweb-assets.youversion.com%2Fapp-icons%2Fen.png&w=128&q=75)
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.