YouVersion Logo
Search Icon

ಹೋಶೇ 8

8
1“ತುತ್ತೂರಿಯನ್ನು ಹಿಡಿದು ಊದು.
ನನ್ನ ಜನರು ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಧರ್ಮವಿಧಿಗಳಿಗೆ ದ್ರೋಹಮಾಡಿದ್ದರಿಂದ,
ಶತ್ರುವು ಹದ್ದಿನ ಹಾಗೆ ಯೆಹೋವನಾದ ನನ್ನ ನಿವಾಸದ ಮೇಲೆ ಬರುತ್ತಾನೆ.
2ಅವರು ನನ್ನನ್ನು, ‘ನಮ್ಮ ದೇವರೇ, ಇಸ್ರಾಯೇಲರಾದ ನಾವು ನಿನ್ನನ್ನು ತಿಳಿದವರಾಗಿದ್ದೇವೆ’ ಎಂದು ಕೂಗಿಕೊಳ್ಳುವರು.
3ಇಸ್ರಾಯೇಲರು ಮೇಲನ್ನು ತಳ್ಳಿಬಿಟ್ಟಿದ್ದಾರೆ; ಶತ್ರುವು ಅವರನ್ನು ಹಿಂದಟ್ಟುವನು.
ಇಸ್ರಾಯೇಲ್ ಕಲ್ಪಿಸಿದ ರಾಜರೂ ಮತ್ತು ದೇವರುಗಳೂ
4ನನ್ನ ಅಪ್ಪಣೆಯಿಲ್ಲದೆ ರಾಜರನ್ನು ನೇಮಿಸಿಕೊಂಡಿದ್ದಾರೆ; ನನಗೆ ತಿಳಿಯದೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ.
ತಮ್ಮ ಬೆಳ್ಳಿ ಮತ್ತು ಬಂಗಾರಗಳಿಂದ ಬೊಂಬೆಗಳನ್ನು ನಿರ್ಮಿಸಿಕೊಂಡಿದ್ದಾರೆ; ಅವರು ನಿರ್ಮಿಸಿದ್ದೆಲ್ಲಾ ನಾಶವಾಗತಕ್ಕದ್ದೇ.
5ಸಮಾರ್ಯವೇ, ನಾನು ನಿನ್ನ ಬಸವನನ್ನು ತಳ್ಳಿಬಿಟ್ಟಿದ್ದೇನೆ;
ನನ್ನ ರೋಷಾಗ್ನಿಯು ನಿನ್ನವರ ಮೇಲೆ ಉರಿಯುತ್ತದೆ; ಅವರು ನಿರ್ಮಲರಾಗುವುದಕ್ಕೆ ಇನ್ನೆಷ್ಟು ಕಾಲ ಹಿಡಿಯುವುದೋ?
6ಆ ಬಸವನೂ ಇಸ್ರಾಯೇಲಿನ ಕೈಕೆಲಸ; ಶಿಲ್ಪಿಯು ಅದನ್ನು ರೂಪಿಸಿದನು;
ಅದು ದೇವರಲ್ಲ; ಸಮಾರ್ಯದ ಬಸವನು ಚೂರುಚೂರಾಗುವನು.
7ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು.
ಇಸ್ರಾಯೇಲರ ಪೈರು ತೆನೆಗೆ ಬಾರದು; ಬೀಜ ಮೊಳೆತರೂ ಹಿಟ್ಟು ಸಿಕ್ಕದು;
ಒಂದು ವೇಳೆ ಸಿಕ್ಕಿದರೂ ಅನ್ಯರು ಅದನ್ನು ನುಂಗಿಬಿಡುವರು.
8ಇಸ್ರಾಯೇಲೇ ನುಂಗಲ್ಪಟ್ಟಿದೆ; ಅದು ಜನಾಂಗಗಳ ಮಧ್ಯದಲ್ಲಿ ಯಾರಿಗೂ ಬೇಡವಾದ ಪಾತ್ರೆಯಂತಿದೆ.
9ಅದು ಒಂಟಿಯಾದ ಕಾಡುಕತ್ತೆಯಂತೆ ಮನಸ್ಸು ಬಂದ ಹಾಗೆ ನಡೆದು ಅಶ್ಶೂರಕ್ಕೆ ಹೋಗಿದೆ.
ಎಫ್ರಾಯೀಮು ಹಣಕೊಟ್ಟು ಜಾರರನ್ನು (ವ್ಯಭಿಚಾರಿಗಳನ್ನು) ಸಂಪಾದಿಸಿಕೊಂಡಿದೆ.
10ಅದು ಜನಾಂಗಗಳೊಳಗೆ ಜಾರರನ್ನು ಸಂಪಾದಿಸಿದರೂ, ಅದನ್ನು ನಾನು ಈಗ ಸೆರೆಗೆ ಒಳಪಡಿಸುವೆನು.
ರಾಜಾಧಿರಾಜನು ಹೊರಿಸುವ ಹೊರೆಯಿಂದ ಅದು ಕುಗ್ಗಿಹೋಗಲಿಕ್ಕೆ ಆರಂಭವಾಗುವುದು.
11ಎಫ್ರಾಯೀಮು ಯಜ್ಞವೇದಿಗಳನ್ನು ಹೆಚ್ಚೆಚ್ಚಾಗಿ ಕಟ್ಟಿ ಪಾಪಮಾಡಿದೆ;
ಕಟ್ಟಿದ ಯಜ್ಞವೇದಿಗಳೇ ಅದಕ್ಕೆ ಪಾಪವಾಗಿ ಪರಿಣಮಿಸಿವೆ.
12ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪವಾಗಿ ಅದಕ್ಕೆ ಬರೆಯಿಸಿಕೊಟ್ಟರೂ,
ಅವುಗಳು ತನಗೆ ಸಂಬಂಧಪಟ್ಟವುಗಳಲ್ಲ ಎಂದು ಅದು ಭಾವಿಸುತ್ತದೆ.
13ಎಫ್ರಾಯೀಮ್ಯರು ಯಜ್ಞಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸಿ ಮಾಂಸಭೋಜನ ಮಾಡುತ್ತಾರೆ;
ಯೆಹೋವನು ಆ ಯಜ್ಞಗಳನ್ನು ಮೆಚ್ಚುವುದಿಲ್ಲ; ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಕ್ಕೆ ದಂಡನೆಮಾಡುವನು;
ಅವರು ಐಗುಪ್ತಕ್ಕೆ ಹಿಂದಿರುಗಬೇಕಾಗುವುದು.
14ಇಸ್ರಾಯೇಲ್ ತನ್ನ ಸೃಷ್ಟಿಕರ್ತನನ್ನು ಮರೆತು ಅರಮನೆಗಳನ್ನು ಕಟ್ಟಿಕೊಂಡಿದೆ;
ಯೆಹೂದವು ಕೋಟೆಕೊತ್ತಲಗಳ ಪಟ್ಟಣಗಳನ್ನು ಮಾಡಿಕೊಂಡಿದೆ;
ಆಹಾ, ನಾನು ಆ ಪಟ್ಟಣಗಳ ಮೇಲೆ ಬೆಂಕಿಯನ್ನು ಸುರಿಸುವೆನು, ಅದು ಅವರ ಸೌಧಗಳನ್ನು ನುಂಗಿಬಿಡುವುದು.”

Currently Selected:

ಹೋಶೇ 8: IRVKan

Highlight

Share

Copy

None

Want to have your highlights saved across all your devices? Sign up or sign in