ಆದಿ 31
31
ಯಾಕೋಬನು ಲಾಬಾನನಿಂದ ಓಡಿ ಹೋದದ್ದು
1“ನಮ್ಮ ತಂದೆಯ ಆಸ್ತಿಯೆಲ್ಲಾ ಯಾಕೋಬನ ಪಾಲಾಯಿತು, ನಮ್ಮ ತಂದೆಯ ಆಸ್ತಿಯಿಂದಲೇ ಅವನಿಗೆ ಇಷ್ಟೊಂದು ಐಶ್ವರ್ಯವುಂಟಾಯಿತು” ಎಂಬುದಾಗಿ ಲಾಬಾನನ ಮಕ್ಕಳು ಹೇಳಿಕೊಳ್ಳುವ ಮಾತುಗಳು ಯಾಕೋಬನ ಕಿವಿಗೆ ಬಿದ್ದವು. 2ಇದಲ್ಲದೆ ಯಾಕೋಬನು ಲಾಬಾನನ ಮುಖಭಾವವನ್ನು ನೋಡಿದಾಗ ಅದು ಮೊದಲಿದ್ದಂತೆ ತೋರಲಿಲ್ಲ.
3ಮತ್ತು ಯೆಹೋವನು ಯಾಕೋಬನಿಗೆ, “ನೀನು ನಿನ್ನ ತಂದೆಯ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ಹಿಂತಿರುಗಿ ಹೋಗು, ನಾನು ನಿನ್ನೊಂದಿಗೆ ಇರುವೆನು” ಎಂದು ಹೇಳಿದನು.
4ಹೀಗಿರುವುದರಿಂದ ಯಾಕೋಬನು ರಾಹೇಲಳನ್ನೂ, ಲೇಯಳನ್ನೂ, ತನ್ನ ಆಡುಕುರಿಗಳ ಹಿಂಡನ್ನು ಮೇಯಿಸುತ್ತಿದ್ದ ಅಡವಿಗೆ ಕರೆಕಳುಹಿಸಿ 5ಅವರಿಗೆ ಹೇಳಿದ್ದೇನಂದರೆ, “ನಿಮ್ಮ ತಂದೆಯ ಮುಖಭಾವವು ನನ್ನ ವಿಷಯದಲ್ಲಿ ಮೊದಲಿದ್ದಂತೆ ಇಲ್ಲವೆಂದು ತೋರಿಬಂತು. ಆದರೂ ನನ್ನ ತಂದೆಯ ದೇವರು ನನ್ನೊಂದಿಗೆ ಇದ್ದಾನೆ. 6ನಾನು ನಿಮ್ಮ ತಂದೆಯ ಸೇವೆಯನ್ನು ಪೂರ್ಣಬಲದಿಂದ ಮಾಡಿದ್ದೇನೆ, ನೀವೂ ಅದನ್ನು ಬಲ್ಲಿರಿ. 7ಆದರೆ ನಿಮ್ಮ ತಂದೆಯು ನನ್ನನ್ನು ವಂಚಿಸಿ ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದನು, ನನಗೆ ಕೇಡುಮಾಡುವುದಕ್ಕೆ ದೇವರು ಅವನಿಗೆ ಅವಕಾಶಕೊಡಲಿಲ್ಲ. 8ನಿಮ್ಮ ತಂದೆ ನನಗೆ, ‘ಚುಕ್ಕೆಯುಳ್ಳದ್ದು ನಿನ್ನ ಸಂಬಳವಾಗಿರಲಿ’ ಎಂದು ಅವನು ಹೇಳಿದಾಗ ಹಿಂಡಿನ ಆಡುಕುರಿಗಳೆಲ್ಲವೂ ಚುಕ್ಕೆಯುಳ್ಳದ್ದನ್ನೇ ಈಯಿತು. ಅವನು ‘ರೇಖೆಯುಳ್ಳದ್ದು ನಿನ್ನ ಸಂಬಳವಾಗಿರಲಿ’ ಎಂದು ಹೇಳಿದಾಗ ಆಡುಕುರಿಗಳೆಲ್ಲವೂ ರೇಖೆಯುಳ್ಳ ಮರಿಗಳನ್ನೇ ಈದವು. 9ಹೀಗೆ ದೇವರು ನಿಮ್ಮ ತಂದೆಯ ಆಡುಕುರಿಗಳನ್ನು, ಪಶುಪ್ರಾಣಿಗಳನ್ನು ಅವನಿಂದ ತೆಗೆದು ನನಗೆ ಕೊಟ್ಟನು.
10“ಕುರಿಗಳು ಗರ್ಭಧರಿಸುವ ಕಾಲದಲ್ಲಿ ನಾನು ಕನಸಿನಲ್ಲಿ ಕಣ್ಣೆತ್ತಿ ನೋಡಿದಾಗ ಕುರಿಗಳೊಂದಿಗೆ ಸಂಗಮಿಸಿದ ಆಡುಗಳೆಲ್ಲವೂ ರೇಖೆ, ಚುಕ್ಕೆ ಮಚ್ಚೆಗಳುಳ್ಳವುಗಳಾಗಿ ಕಾಣಿಸಿದವು. 11ಆ ಕನಸಿನಲ್ಲಿ ದೇವದೂತನು, ‘ಯಾಕೋಬನೇ’ ಎಂದು ಕರೆಯಲು ನಾನು, ‘ಇದ್ದೇನೆ’ ಎಂದು ಹೇಳಿದಾಗ 12ಆತನು ನನಗೆ, ‘ಲಾಬಾನನು ನಿನ್ನ ವಿಷಯದಲ್ಲಿ ನಡೆದುಕೊಂಡ ರೀತಿಯನ್ನು ನಾನು ನೋಡಿದ್ದೇನೆ, ಆದುದರಿಂದ ನೀನು ಕಣ್ಣೆತ್ತಿ ಕುರಿಗಳೊಂದಿಗೆ ಸಂಗಮಿಸುವ ಆಡುಗಳನ್ನು ನೋಡು. ರೇಖೆಯೂ, ಚುಕ್ಕೆಯೂ, ಮಚ್ಚೆಯೂ ಉಳ್ಳವುಗಳಾಗಿವೆ. 13ನೀನು ಸ್ತಂಭವನ್ನು ಅಭಿಷೇಕಿಸಿ ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ನೀನೆದ್ದು ಈ ದೇಶವನ್ನು ಬಿಟ್ಟು ನೀನು ಹುಟ್ಟಿದ ದೇಶಕ್ಕೂ ಬಂಧುಗಳ ಬಳಿಗೂ ಹಿಂತಿರುಗಿ ಹೋಗು’” ಎಂದು ಹೇಳಿದನು.
14ಯಾಕೋಬನು ಈ ಮಾತುಗಳನ್ನಾಡಿದಾಗ ರಾಹೇಲಳು ಮತ್ತು ಲೇಯಳು, “ನಮ್ಮ ತಂದೆಯ ಮನೆಯಲ್ಲಿ ನಮಗೆ ಪಾಲೂ ಸ್ವಾಸ್ತ್ಯತೆ ಇನ್ನೇನಿದೆ? 15ಅವನು ನಮ್ಮನ್ನು ಅನ್ಯರೆಂದು ಎಣಿಸುತ್ತಾನಲ್ಲಾ; ಅವನು ನಮ್ಮನ್ನು ಮಾರಿ ನಮ್ಮ ಮೂಲಕ ಸಿಕ್ಕಿದ ಹಣವನ್ನು ತಾನೇ ನುಂಗಿಬಿಟ್ಟನಲ್ಲಾ. 16ಆದ್ದರಿಂದ ದೇವರು ನಮ್ಮ ತಂದೆಯಿಂದ ತೆಗೆದುಕೊಂಡ ಆಸ್ತಿಯನ್ನೆಲ್ಲಾ ನಮಗೂ, ನಮ್ಮ ಮಕ್ಕಳಿಗೂ ಕೊಟ್ಟನಲ್ಲಾ, ದೇವರು ನಿನಗೆ ಹೇಳಿದಂತೆಯೇ ಮಾಡು” ಎಂದು ಉತ್ತರ ಕೊಟ್ಟರು.
17ಆಗ ಯಾಕೋಬನು ತನ್ನ ಮಕ್ಕಳನ್ನೂ, ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿದನು. 18ತಾನು ಸಂಪಾದಿಸಿಕೊಂಡಿದ್ದ ಎಲ್ಲಾ ಆಸ್ತಿಯನ್ನೂ, ಪದ್ದನ್ ಅರಾಮ್ ದೇಶದಲ್ಲಿ ಸಂಪಾದಿಸಿಕೊಂಡಿದ್ದ ಎಲ್ಲಾ ಪಶುಪ್ರಾಣಿಗಳನ್ನೂ ತೆಗೆದುಕೊಂಡು ಕಾನಾನ್ ದೇಶಕ್ಕೆ ತನ್ನ ತಂದೆಯಾದ ಇಸಾಕನ ಬಳಿಗೆ ಹೋಗುವುದಕ್ಕಾಗಿ ಹೊರಟನು.
19ಆಗ ಲಾಬಾನನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವುದಕ್ಕೋಸ್ಕರ ಹೋಗಿದ್ದನು. ಹೀಗಿರುವಲ್ಲಿ ರಾಹೇಲಳು ತನ್ನ ತಂದೆಯ ಮನೆಯಲ್ಲಿದ್ದ ವಿಗ್ರಹಗಳನ್ನು ಕದ್ದುಕೊಂಡಳು. 20ಆದರೆ ಯಾಕೋಬನು ತಾನು ಹೋಗುತ್ತೇನೆಂದು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ಅವನನ್ನು ಮೋಸಗೊಳಿಸಿ ಹೊರಟುಬಿಟ್ಟನು. 21ಹೀಗೆ ಅವನು ತನ್ನ ಆಸ್ತಿಯನ್ನೆಲ್ಲಾ ತೆಗೆದುಕೊಂಡು ಯೂಫ್ರೆಟಿಸ್ ಮಹಾ ನದಿಯನ್ನು ದಾಟಿ ಗಿಲ್ಯಾದೆಂಬ ಬೆಟ್ಟದ ಸೀಮೆಯ ದಾರಿಯನ್ನು ಹಿಡಿದನು.
ಲಾಬಾನನು ಯಾಕೋಬನನ್ನು ಬೆನ್ನಟ್ಟಿದ್ದು
22ಯಾಕೋಬನು ಹೊರಟುಹೋದ ವರ್ತಮಾನವು ಮೂರನೆಯ ದಿನದಲ್ಲಿ ಲಾಬಾನನಿಗೆ ತಿಳಿದುಬರಲು, 23ಅವನು ತನ್ನ ಬಂಧುಗಳನ್ನು ಕೂಡಿಸಿಕೊಂಡು, ಏಳು ದಿನ ಪ್ರಯಾಣಮಾಡಿ ಯಾಕೋಬನನ್ನು ಹಿಂದಟ್ಟಿ ಗಿಲ್ಯಾದ್ ಬೆಟ್ಟದ ಸೀಮೆಯಲ್ಲಿ ಅವನನ್ನು ಸಂಧಿಸಿದನು. 24ಆದರೆ ರಾತ್ರಿಯಲ್ಲಿ ದೇವರು ಅರಾಮ್ಯನಾದ ಲಾಬಾನನ ಕನಸಿನಲ್ಲಿ ಬಂದು, “ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ ಕೆಟ್ಟದ್ದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು” ಎಂದನು.
25ತರುವಾಯ ಲಾಬಾನನೂ ಯಾಕೋಬನನ್ನು ಸಂಧಿಸಿದಾಗ ಯಾಕೋಬನು ಬೆಟ್ಟದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹ ತನ್ನವರೊಡನೆ ಅದೇ ಗಿಲ್ಯಾದ್ ಬೆಟ್ಟದಲ್ಲಿ ಗುಡಾರವನ್ನು ಹಾಕಿಕೊಂಡನು. 26ಲಾಬಾನನು ಯಾಕೋಬನಿಗೆ, “ಇದೇನು ನೀನು ಮಾಡಿದ್ದು? ನೀನು ನನ್ನ ಹೆಣ್ಣುಮಕ್ಕಳನ್ನು ಯುದ್ಧದಲ್ಲಿ ಸೆರೆಹಿಡಿದವರಂತೆ ತೆಗೆದುಕೊಂಡು ನನಗೆ ಏನೂ ಹೇಳದೆ ಹೊರಟುಬಂದೆಯಲ್ಲಾ. 27ಯಾಕೆ ನನ್ನನ್ನು ಮೋಸಗೊಳಿಸಿ ಕಳ್ಳತನದಿಂದ ಹೊರಟು ಬಂದಿ? ನನಗೆ ತಿಳಿಸಿದ್ದರೆ ನಾನು ಸಂತೋಷದಿಂದ ಹಾಡು, ವೀಣೆ, ತಾಳ ಮುಂತಾದ ವಾದ್ಯಗಳೊಡನೆ ನಿನ್ನನ್ನು ಕಳುಹಿಸುತ್ತಿದ್ದೆನು. 28ಆದರೆ ನೀನು ನನ್ನ ಹೆಣ್ಣು ಮಕ್ಕಳಿಗೂ ಮೊಮ್ಮಕ್ಕಳಿಗೂ, ಮುದ್ದಿಡುವುದಕ್ಕಾದರೂ ಆಗದಂತೆ ಮಾಡಿದಿ. ನೀನು ಮಾಡಿದ್ದು ಹುಚ್ಚು ಕೆಲಸ. 29ನಿಮಗೆ ಕೇಡುಮಾಡುವುದಕ್ಕೆ ನನ್ನಲ್ಲಿ ಸಾಮರ್ಥ್ಯ ಇದೆ. ಆದರೆ ಕಳೆದ ರಾತ್ರಿಯಲ್ಲಿ ನಿಮ್ಮ ತಂದೆಯ ದೇವರು, ‘ಯಾಕೋಬನಿಗೆ ಒಳ್ಳೆಯದನ್ನಾಗಲೀ, ಕೆಟ್ಟದನ್ನಾಗಲಿ ಹೇಳದ ಹಾಗೆ ಎಚ್ಚರವಾಗಿರು’ ಎಂದು ಹೇಳಿದನು. 30ಆದರೆ ತಂದೆಯ ಮನೆಗೆ ಹೋಗುವುದಕ್ಕೆ ನಿನಗೆ ಬಹಳ ಆಶೆಯಿರುವುದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ?” ಎಂದು ಕೇಳಿದನು.
31ಅದಕ್ಕೆ ಯಾಕೋಬನು ಲಾಬಾನನಿಗೆ, “ನೀನು ನಿನ್ನ ಹೆಣ್ಣು ಮಕ್ಕಳನ್ನು ಬಲಾತ್ಕಾರದಿಂದ ಹಿಂದಕ್ಕೆ ತೆಗೆದುಕೊಳ್ಳುವಿ ಎಂದು ಭಯಪಟ್ಟು ಹೊರಟು ಬಂದೆನು. 32ನಿನ್ನ ದೇವರುಗಳು ಯಾರ ಬಳಿಯಲ್ಲಿ ಸಿಕ್ಕುತ್ತವೆಯೋ ಅವರು ಸಾಯಲಿ. ನಮ್ಮ ಬಂಧುಗಳ ಮುಂದೆಯೇ ನನ್ನ ಆಸ್ತಿಯನ್ನು ಪರೀಕ್ಷಿಸಬಹುದು. ಅದರಲ್ಲಿ ನಿನ್ನದೇನಾದರೂ ಸಿಕ್ಕಿದರೆ ಅದನ್ನು ತೆಗೆದುಕೋ” ಎಂದು ಹೇಳಿದನು. ರಾಹೇಲಳು ಆ ದೇವರುಗಳನ್ನು ಕದ್ದದ್ದು ಯಾಕೋಬನಿಗೆ ತಿಳಿದಿರಲಿಲ್ಲ.
33ಲಾಬಾನನು ಯಾಕೋಬನ ಗುಡಾರದಲ್ಲಿಯೂ, ಲೇಯಳ ಗುಡಾರದಲ್ಲಿಯೂ, ಆ ಇಬ್ಬರು ದಾಸಿಯರ ಗುಡಾರದಲ್ಲಿಯೂ ಹುಡುಕಿದನು. ಆದರೂ ಅವನಿಗೇನೂ ಸಿಕ್ಕಲ್ಲಿಲ್ಲ. ಲೇಯಳ ಗುಡಾರವನ್ನು ಬಿಟ್ಟು ರಾಹೇಲಳ ಗುಡಾರಕ್ಕೆ ಬಂದನು. 34ರಾಹೇಲಳು ಆ ವಿಗ್ರಹಗಳನ್ನು ತೆಗೆದುಕೊಂಡು ಒಂಟೆಯ ಸಬರದೊಳಗಿಟ್ಟು (ತಡಿಯ ಚೀಲದಲ್ಲಿ) ಅವುಗಳ ಮೇಲೆ ಕುಳಿತ್ತಿದ್ದಳು. ಲಾಬಾನನು ಗುಡಾರದಲ್ಲಿದ್ದ ವಸ್ತುಗಳನ್ನೆಲ್ಲಾ ನೋಡಿದರೂ ಅವುಗಳನ್ನು ಕಾಣಲಿಲ್ಲ.
35ರಾಹೇಲಳು ತನ್ನ ತಂದೆಗೆ, “ಅಪ್ಪಾ, ನಾನು ನಿನ್ನ ಮುಂದೆ ಎದ್ದು ನಿಂತುಕೊಳ್ಳದೆ ಹೋದರೂ ಕೋಪಿಸಿಕೊಳ್ಳಬೇಡ, ನಾನು ಮೈಲಿಗೆಯಾಗಿದ್ದೇನೆ” ಎಂದು ಹೇಳಿದಳು. ಅವನು ಚೆನ್ನಾಗಿ ಹುಡುಕಿದರೂ ಆ ವಿಗ್ರಹಗಳನ್ನು ಕಂಡುಕೊಳ್ಳದೆ ಹೊರಟು ಹೋದನು.
36ಆಗ ಯಾಕೋಬನು ಕೋಪಗೊಂಡು ಲಾಬಾನನನ್ನು ಗದರಿಸಿ, “ನೀನು ಇಷ್ಟು ಆತುರ ಪಟ್ಟು ನನ್ನನ್ನು ಹಿಂದಟ್ಟಿ ಬರುವಂತೆ ನಾನೇನು ದ್ರೋಹ ಮಾಡಿದೆನು? 37ನನ್ನ ವಸ್ತುಗಳನ್ನೆಲ್ಲಾ ಪರೀಕ್ಷಿಸಿ ನೋಡುವಂತೆ ನಾನೇನು ತಪ್ಪುಮಾಡಿದೆನು? ನಿನ್ನ ಸೊತ್ತು ಏನಾದರೂ ನನ್ನಲ್ಲಿ ಸಿಕ್ಕಿದೆಯೋ? ನನ್ನ ಬಳಗದವರ ಮುಂದೆಯೂ ನಿನ್ನ ಬಂಧುಗಳ ಮುಂದೆಯೂ ಅದನ್ನು ತಂದು ಇಡು. ಇವರೇ ನಮ್ಮಿಬ್ಬರ ನ್ಯಾಯವನ್ನು ತೀರಿಸಲಿ.
38“ನಾನು ಇಪ್ಪತ್ತು ವರ್ಷ ನಿನ್ನ ಸಂಗಡ ಇದ್ದೆನು. ನಿನ್ನ ಹಿಂಡಿನ ಹೆಣ್ಣು ಆಡುಕುರಿಗಳನ್ನು ಕಂದು ಹಾಕಲಿಲ್ಲ. ನಿನ್ನ ಹಿಂಡಿನ ಟಗರುಗಳನ್ನು ನಾನೇನೂ ತಿಂದುಬಿಡಲಿಲ್ಲ. 39ಕಾಡುಮೃಗಗಳಿಂದ ಕೊಲ್ಲಲ್ಪಟ್ಟ ಕುರಿ, ಆಡುಗಳನ್ನು ನಿನ್ನ ಭಾಗಕ್ಕೆ ಹಾಕದೆ ನಾನೇ ನಷ್ಟವನ್ನು ಹೊತ್ತೆನು. ಹಗಲಿನಲ್ಲಿ, ಇರುಳಿನಲ್ಲಿ ಕಳೆದು ಹೋದದ್ದರ ಲೆಕ್ಕವನ್ನು ನನ್ನಿಂದ ತೆಗೆದುಕೊಂಡೆ. 40ಹಗಲಿನಲ್ಲಿ ಬಿಸಿಲಿನಿಂದಲೂ, ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು, ನಿದ್ದೆಮಾಡುವುದಕ್ಕಾದರೂ ಅವಕಾಶ ಸಿಗಲಿಲ್ಲ, ನನ್ನ ಸ್ಥಿತಿ ಹೀಗಿತ್ತು. 41ಇಪ್ಪತ್ತು ವರ್ಷ ನಿನ್ನ ಮನೆಯಲ್ಲಿದ್ದೆನು. ನಿನ್ನ ಇಬ್ಬರು ಹೆಣ್ಣು ಮಕ್ಕಳಿಗೋಸ್ಕರ ಹದಿನಾಲ್ಕು ವರ್ಷವೂ ನಿನ್ನ ಆಡು ಕುರಿಗಳಿಗೋಸ್ಕರ ಆರು ವರ್ಷವೂ ಸೇವೆಮಾಡಿದೆನು. ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದೆ. 42ನನ್ನ ತಂದೆಯ ದೇವರೂ, ಅಬ್ರಹಾಮನ ದೇವರೂ, ಇಸಾಕನು ಭಯಭಕ್ತಿಯಿಂದ ಸೇವಿಸಿದ ದೇವರು ನನ್ನೊಂದಿಗೆ ಇಲ್ಲದೆ ಹೋಗಿದ್ದರೆ, ನಿಶ್ಚಯವಾಗಿ ನೀನು ನನ್ನನ್ನು ಬರಿಗೈಯಿಂದ ಕಳುಹಿಸಿಬಿಡುತ್ತಿದ್ದೆ, ದೇವರು ನನ್ನ ಕಷ್ಟವನ್ನೂ ನಾನು ಪಟ್ಟ ಪ್ರಯಾಸ ಗೊತ್ತಿದ್ದರಿಂದಲೇ ನಿನ್ನೆಯ ರಾತ್ರಿ ನಿನ್ನನ್ನು ಗದರಿಸಿದನು” ಎಂದನು.
ಯಾಕೋಬನಿಗೂ ಲಾಬಾನನಿಗೂ ಆದ ಒಪ್ಪಂದ
43ಅದಕ್ಕೆ ಲಾಬಾನನು ಯಾಕೋಬನಿಗೆ, “ಈ ಪುತ್ರಿಯರು ನನ್ನ ಪುತ್ರಿಯರಲ್ಲವೇ, ಈ ಮಕ್ಕಳು ನನ್ನ ಮೊಮ್ಮಕ್ಕಳಲ್ಲವೇ, ಈ ಹಿಂಡುಗಳೂ ನನ್ನವೇ, ನಿನ್ನ ಕಣ್ಣು ಮುಂದೆ ಇರುವುದೆಲ್ಲವೂ ನನ್ನದೇ. ಹಾಗಾದರೆ ಈ ನನ್ನ ಪುತ್ರಿಯರಿಗೋಸ್ಕರವೂ, ಇವರು ಹೆತ್ತ ಮಕ್ಕಳಿಗೋಸ್ಕರವೂ ಈಗ ನಾನೇನು ಮಾಡಲಿ? 44ಆದುದರಿಂದ ನಾವಿಬ್ಬರು ಸೇರಿ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳೋಣ ಬಾ, ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ” ಎಂದು ಹೇಳಿದನು.
45ಆಗ ಯಾಕೋಬನು ಒಂದು ಕಲ್ಲನ್ನು ತೆಗೆದುಕೊಂಡು ಸ್ತಂಭವಾಗಿ ನಿಲ್ಲಿಸಿದನು. 46ಯಾಕೋಬನು ತನ್ನ ಕಡೆಯವರಿಗೆ, “ಕಲ್ಲುಗಳನ್ನು ಕೂಡಿಸಿರಿ” ಎಂದು ಹೇಳಲು ಅವರು ಕಲ್ಲುಗಳನ್ನು ಕೂಡಿಸಿ ಗುಡ್ಡೆ ಮಾಡಿದರು. ಅವರೆಲ್ಲರೂ ಆ ಗುಡ್ಡೆಯ ಬಳಿಯಲ್ಲಿ ಭೋಜನವನ್ನು ಮಾಡಿದರು. 47ಆ ಗುಡ್ಡೆಗೆ ಲಾಬಾನನು “#31:47 ಯಗರಸಾಹದೂತ ಅಂದರೆ ಸಾಕ್ಷಿಯ ಗುಡ್ಡೆ.ಯಗರಸಾಹದೂತ” ಎಂದೂ ಯಾಕೋಬನು “#31:47 ಗಲೇದ್ ಅಂದರೆ ಸಾಕ್ಷಿಯ ಗುಡ್ಡೆ.ಗಲೇದ್” ಎಂದೂ ಹೆಸರಿಟ್ಟರು.
48ಆಗ ಲಾಬಾನನು, “ಈ ಹೊತ್ತು ನಿನಗೂ ನನಗೂ ಆದ ಒಡಂಬಡಿಕೆಗೆ ಈ ಗುಡ್ಡೆಯೇ ಸಾಕ್ಷಿ” ಎಂದು ಹೇಳಿದುದರಿಂದ ಅದಕ್ಕೆ ಗಲೇದ್ ಎಂದು ಹೆಸರಾಯಿತು. 49ಅದಲ್ಲದೆ ಅವನು, “ನಾವು ಒಬ್ಬರಿಗೊಬ್ಬರು ಅಗಲಿರುವಾಗ ಯೆಹೋವನೇ ನಮ್ಮಿಬ್ಬರನ್ನೂ ನೋಡಿಕೊಳ್ಳುತ್ತಾ ಇರುವನು” ಎಂದು ಹೇಳಿದ್ದರಿಂದ ಅದಕ್ಕೆ #31:49 ಮಿಚ್ಪಾ ಅಂದರೆ ಕಾವಲು ಗೋಪುರ ಅಥವಾ ಉನ್ನತ ಸ್ಥಳ.ಮಿಚ್ಪಾ ಎಂದು ಹೆಸರಾಯಿತು 50ಮತ್ತು ಲಾಬಾನನು, “ನೀನು ನನ್ನ ಇಬ್ಬರು ಹೆಣ್ಣುಮಕ್ಕಳನ್ನು ನೋಯಿಸಿದರೆ ಅಥವಾ ಬೇರೆ ಸ್ತ್ರೀಯರನ್ನು ಮದುವೆ ಮಾಡಿಕೊಂಡರೆ ವಿಚಾರಿಸುವವರು ಮನುಷ್ಯರೊಳಗೆ ಯಾರೂ ಇಲ್ಲದಿದ್ದರೂ ದೇವರೇ ನಮ್ಮ ಒಡಂಬಡಿಕೆಗೆ ಸಾಕ್ಷಿ” ಎಂದನು.
51ಇದಲ್ಲದೆ ಲಾಬಾನನು ಯಾಕೋಬನಿಗೆ, “ನಿನಗೂ ನನಗೂ ನಡುವೆ ನಾನು ನಿಲ್ಲಿಸಿರುವ ಈ ಸ್ತಂಭವನ್ನು ನೋಡು, ಈ ಗುಡ್ಡೆಯನ್ನೂ ನೋಡು. 52ನಾನು ಕೇಡು ಮಾಡುವುದಕ್ಕೋಸ್ಕರ ಈ ಗುಡ್ಡೆಯನ್ನು, ದಾಟಿ ನಿನ್ನ ಬಳಿಗೆ ಬರುವುದಿಲ್ಲ. ಹಾಗೆಯೇ ನೀನು ಈ ಗುಡ್ಡೆಯನ್ನೂ ಈ ಸ್ತಂಭವನ್ನು ದಾಟಿ ನನ್ನ ಬಳಿಗೆ ಬರಕೂಡದು. ಇದಕ್ಕೆ ಈ ಗುಡ್ಡೆಯೂ ಸ್ತಂಭವೂ ಸಾಕ್ಷಿಯಾಗಿರಲಿ. 53ಅಬ್ರಹಾಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಿನಗೂ ನನಗೂ ನ್ಯಾಯತೀರಿಸಲಿ” ಎಂದನು. ಅದೇ ಪ್ರಕಾರ ಯಾಕೋಬನು ತನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಆರಾಧಿಸುವ ದೇವರ ಮೇಲೆ ಆಣೆಯಿಟ್ಟು ಪ್ರಮಾಣ ಮಾಡಿದನು. 54ಯಾಕೋಬನು ಆ ಬೆಟ್ಟದ ಮೇಲೆ ಯಜ್ಞವನ್ನು ಮಾಡಿ ತನ್ನ ಬಂಧುಗಳನ್ನು ತನ್ನೊಡನೆ ಊಟಮಾಡಲು ಕರೆಯಿಸಿದನು. ಅವರು ಊಟ ಮಾಡಿ ಬೆಟ್ಟದಲ್ಲಿಯೇ ರಾತ್ರಿ ಇಳಿದುಕೊಂಡರು.
55ಮುಂಜಾನೆ ಲಾಬಾನನು ಎದ್ದು ತನ್ನ ಹೆಣ್ಣು ಮಕ್ಕಳಿಗೂ, ಮೊಮ್ಮಕ್ಕಳಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿ ತನ್ನ ಮನೆಗೆ ಹಿಂತಿರುಗಿ ಹೋದನು.
Currently Selected:
ಆದಿ 31: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.