ಎಜ್ರ 7
7
ಎಜ್ರನು ಯೆರೂಸಲೇಮಿಗೆ ಬಂದದ್ದು
1ಇದಾದ ಮೇಲೆ ಪರ್ಷಿಯ ರಾಜನಾದ ಅರ್ತಷಸ್ತನ ಆಳ್ವಿಕೆಯಲ್ಲಿ ಎಜ್ರನು ಬಾಬಿಲೋನಿನಿಂದ ಬಂದನು. ಇವನು ಸೆರಾಯನ ಮಗ; ಸೆರೆಯನು ಅಜರ್ಯನ ಮಗ; ಇವನು ಹಿಲ್ಕೀಯನ ಮಗ. 2ಹಿಲ್ಕೀಯನು ಶಲ್ಲೂಮನ ಮಗ; ಇವನು ಚಾದೋಕನ ಮಗ; ಇವನು ಅಹೀಟೂಬನ ಮಗ; ಇವನು ಅಮರ್ಯನ ಮಗ. 3ಅಮರ್ಯನು ಅಜರ್ಯನ ಮಗ; ಇವನು ಮೆರಾಯೋತನ ಮಗ. 4ಮೆರಾಯೋತನು ಜೆರಹ್ಯನ ಮಗ; ಇವನು ಉಜ್ಜೀಯ ಮಗ; ಇವನು ಬುಕ್ಕೀಯ ಮಗ. 5ಬುಕ್ಕೀಯನು ಅಬೀಷೂವನ ಮಗ; ಇವನು ಫೀನೆಹಾಸನ ಮಗ; ಇವನು ಎಲ್ಲಾಜಾರನ ಮಗ; ಇವನು ಪ್ರಧಾನಯಾಜಕನಾದ ಆರೋನನ ಮಗ. 6ಎಜ್ರನು ಇಸ್ರಾಯೇಲ್ ದೇವರಾದ ಯೆಹೋವನಿಂದ ದೊರಕಿದ ಮೋಶೆಯ ಧರ್ಮೋಪದೇಶದಲ್ಲಿ ಪಾರಂಗತನಾದ ಶಾಸ್ತ್ರಿಯಾಗಿದ್ದನು. ಅವನ ದೇವರಾದ ಯೆಹೋವನ ಹಸ್ತಪಾಲನೆಯಿಂದ ಅರಸನು ಅವನಿಗೆ ಇಷ್ಟವಾದದ್ದನ್ನೆಲ್ಲಾ ಅನುಗ್ರಹಿಸಿದನು. 7ಅವನೊಡನೆ ಕೆಲವು ಜನರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ಗಾಯಕರೂ, ದ್ವಾರಪಾಲಕರೂ ಮತ್ತು ದೇವಸ್ಥಾನದಾಸರೂ ಅರ್ತಷಸ್ತ ಅರಸನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೆರೂಸಲೇಮಿಗೆ ಬಂದರು. 8ಎಜ್ರನು ಆ ಅರಸನ ಆಳ್ವಿಕೆಯ ಏಳನೆಯ ವರ್ಷದ ಐದನೆಯ ತಿಂಗಳಲ್ಲಿ ಯೆರೂಸಲೇಮನ್ನು ತಲುಪಿದನು. 9ಅವನು ಮೊದಲನೆಯ ತಿಂಗಳಿನ ಮೊದಲ ದಿನದಲ್ಲಿ ಬಾಬಿಲೋನಿನಿಂದ ಹೊರಟನು; ತನ್ನ ದೇವರ ಕೃಪಾ ಹಸ್ತಪಾಲನೆಯಿಂದ ಐದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆರೂಸಲೇಮಿಗೆ ಬಂದು ಸೇರಿದನು. 10ಎಜ್ರನು ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಿ ಅನುಸರಿಸಲಿಕ್ಕೂ, ಇಸ್ರಾಯೇಲರಿಗೆ ಅದರ ವಿಧಿನ್ಯಾಯಗಳನ್ನು ಕಲಿಸಬೇಕೆಂದು ದೃಢಮಾಡಿಕೊಂಡಿದ್ದನು.
ಅರ್ತಷಸ್ತನು ಎಜ್ರನಿಗೆ ಕೊಟ್ಟ ಪತ್ರ
11ಯಾಜಕನು ಮತ್ತು ಶಾಸ್ತ್ರಿಯೂ, ಇಸ್ರಾಯೇಲರಿಗಾಗಿ ಕೊಡಲ್ಪಟ್ಟ ಯೆಹೋವನ ಆಜ್ಞಾವಿಧಿಸೂತ್ರಗಳಲ್ಲಿ ವಿದ್ವಾಂಸನೂ ಆಗಿದ್ದ ಎಜ್ರನಿಗೆ ಅರಸನಾದ ಅರ್ತಷಸ್ತನು ಕೊಟ್ಟ ಪತ್ರ.
12“ರಾಜಾಧಿರಾಜನಾದ ಅರ್ತಷಸ್ತನು, ಯಾಜಕನೂ ಪರಲೋಕದೇವರ ಧರ್ಮಶಾಸ್ತ್ರದಲ್ಲಿ ಪ್ರವೀಣನೂ ಆದ ಎಜ್ರನಿಗೆ ತಿಳಿಸುವುದೇನೆಂದರೆ, 13ನನ್ನ ರಾಜ್ಯದಲ್ಲಿರುವ ಇಸ್ರಾಯೇಲರು ತಮ್ಮ ಯಾಜಕರು ಮತ್ತು ಲೇವಿಯರು ಹಾಗು ಯೆರೂಸಲೇಮಿಗೆ ಹೋಗಬೇಕೆಂದು ಮನಸ್ಸುಳ್ಳವರೆಲ್ಲರೂ ನಿನ್ನ ಸಂಗಡ ಹೋಗಬಹುದೆಂದು ಅಪ್ಪಣೆ ಕೊಡುತ್ತಿದ್ದೇನೆ. 14ನೀನು ಹೋಗಿ ಯೆಹೂದದವರ ಮತ್ತು ಯೆರೂಸಲೇಮಿನವರ ಆಚರಣೆಯು ನಿನ್ನ ಕೈಯಲ್ಲಿರುವ ನಿನ್ನ ದೇವರ ಧರ್ಮೋಪದೇಶಗ್ರಂಥಕ್ಕೆ ಅನುಸಾರವಾಗಿದೆಯೋ ಇಲ್ಲವೋ ಎಂದು ಪರಿಶೀಲಿಸಬೇಕು. 15ಮತ್ತು ಅರಸನೂ ಅವನ ಮಂತ್ರಿಗಳೂ ಯೆರೂಸಲೇಮಿನಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಿಗೊಸ್ಕರ ಕಾಣಿಕೆಯಾಗಿ ಸಮರ್ಪಿಸಿದ ಬೆಳ್ಳಿಬಂಗಾರ, 16ಬಾಬೆಲ್ ಸಂಸ್ಥಾನದಲ್ಲಿ ನಿನಗೆ ಸಿಕ್ಕುವ ಬೆಳ್ಳಿಬಂಗಾರ, ಇಸ್ರಾಯೇಲ್ ಸಾಧಾರಣಜನರೂ, ಯಾಜಕರೂ, ಯೆರೂಸಲೇಮಿನಲ್ಲಿರುವ ತಮ್ಮ ದೇವರ ಆಲಯಕ್ಕಾಗಿ ಸ್ವ ಇಚ್ಛೆಯಿಂದ ಕೊಡುವ ಕಾಣಿಕೆ ಇವುಗಳನ್ನು ಅಲ್ಲಿಗೆ ಒಪ್ಪಿಸಬೇಕು; ಹೀಗೆಂದು ನಾನೂ ಮತ್ತು ನನ್ನ ಏಳು ಜನ ಮಂತ್ರಿಗಳೂ ನಿನ್ನನ್ನು ಕಳುಹಿಸುತ್ತೇವೆ. 17ನೀನು ಈ ಹಣದಿಂದ ಹೋರಿ, ಟಗರು, ಕುರಿ ಇವುಗಳನ್ನೂ ಮತ್ತು ಇವುಗಳೊಡನೆ ಸಮರ್ಪಣೆಯಾಗತಕ್ಕ ಧಾನ್ಯದ್ರವ್ಯ, ಪಾನದ್ರವ್ಯಗಳನ್ನೂ ಕೊಂಡುಕೊಂಡು ಅವುಗಳನ್ನು ಯೆರೂಸಲೇಮಿನಲ್ಲಿರುವ ನಿಮ್ಮ ದೇವರ ಆಲಯದ ಯಜ್ಞವೇದಿಯ ಮೇಲೆ ಸಮರ್ಪಿಸಬೇಕು. 18ಉಳಿದ ಬೆಳ್ಳಿಬಂಗಾರವನ್ನು, ನಿಮ್ಮ ದೇವರ ಆಜ್ಞೆಯನ್ನು ಅನುಸರಿಸಿ, ನಿನಗೂ ನಿನ್ನ ಸಹೋದರರಿಗೂ ಸರಿತೋರುವಂತೆ ವೆಚ್ಚಮಾಡಿರಿ. 19ನಿನ್ನ ದೇವರ ಆಲಯದ ಆರಾಧನೆಗಾಗಿ ನಿನ್ನ ವಶಕ್ಕೆ ಕೊಡುವ ಸಾಮಾನುಗಳನ್ನು ಯೆರೂಸಲೇಮಿನ ದೇವರ ಸನ್ನಿಧಿಗೆ ತೆಗೆದುಕೊಂಡು ಹೋಗು. 20ನಿನ್ನ ದೇವರ ಆಲಯಕ್ಕೋಸ್ಕರ ನೀನು ಬೇರೆ ಯಾವುದನ್ನಾದರೂ ವೆಚ್ಚಮಾಡಬೇಕಾದರೆ ಅದನ್ನು ರಾಜಭಂಡಾರದಿಂದ ತೆಗೆದುಕೊಂಡು ವೆಚ್ಚಮಾಡು.
21“ಅರ್ತಷಸ್ತ ರಾಜನಾದ ನಾನು ಹೊಳೆಯಾಚೆಯ ಪ್ರಾಂತ್ಯಗಳ ಭಂಡಾರಗಳ ಮುಖ್ಯಸ್ಥರಿಗೆ ಆಜ್ಞಾಪಿಸುವುದು ಏನೆಂದರೆ, ‘ಯಾಜಕರೂ ಪರಲೋಕದೇವರ ಧರ್ಮಾಚಾರ್ಯನೂ ಆದ ಎಜ್ರನು ಕೇಳಿಕೊಳ್ಳುವುದನ್ನೆಲ್ಲಾ ನೀವು ತಪ್ಪದೆ ಕೊಡಬೇಕು. 22ನೂರು ತಲಾಂತು ಬೆಳ್ಳಿ#7:22 ನೂರು ತಲಾಂತು ಬೆಳ್ಳಿ ಅಂದರೆ 3,400 ಕಿಲೋಗ್ರಾಂ ಬೆಳ್ಳಿ., ನೂರು ಕೋರ್ ಗೋದಿ#7:22 ನೂರು ಕೋರ್ ಗೋದಿ ಅಂದರೆ 10,000 ಕಿಲೋಗ್ರಾಂ ಗೋದಿ. ನೂರು ಬತ್ ದ್ರಾಕ್ಷಾರಸ#7:22 ನೂರು ಬತ್ ದ್ರಾಕ್ಷಾರಸ ಅಂದರೆ 2,000 ಲೀಟರ್. ದ್ರಾಕ್ಷಾರಸ, ಎಣ್ಣೆ ನೂರು ಬತ್#7:22 ಎಣ್ಣೆ ನೂರು ಬತ್ ಅಂದರೆ 2,000 ಲೀಟರ್. ಎಣ್ಣೆ. ಇಷ್ಟರ ಮಟ್ಟಿಗೂ ಕೊಡಬಹುದು; ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು. 23ಅರಸನ ಮತ್ತು ಅವನ ಸಂತಾನದವರ ರಾಜ್ಯದ ಮೇಲೆ ದೈವಕೋಪ ಉಂಟಾಗದ ಹಾಗೆ ನೀವು ಪರಲೋಕದೇವರ ಆಜ್ಞಾನುಸಾರ ಬೇಕಾದದ್ದನ್ನೆಲ್ಲಾ ಯಾವ ಕೊರತೆಯೂ ಇಲ್ಲದೆ ಒದಗಿಸಿ ಕೊಡಬೇಕು. 24ಇದಲ್ಲದೆ ಆ ದೇವಾಲಯದ ಸೇವೆಯಲ್ಲಿರುವ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು, ದಾಸರು ಮುಂತಾದ ಸೇವಕರಲ್ಲಿ ಯಾರಿಂದಲೂ ಕಪ್ಪ, ತೆರಿಗೆ, ಸುಂಕ ಇವುಗಳನ್ನು ವಸೂಲಿಮಾಡುವುದಕ್ಕೆ ನಿಮಗೆ ಅಧಿಕಾರವಿಲ್ಲ ಎಂಬುದು ತಿಳಿದಿರಲಿ.’
25“ಎಜ್ರನೇ, ನಿನ್ನ ಕೈಯಲ್ಲಿರುವ ನಿನ್ನ ದೇವರ ಜ್ಞಾನೋಪದೇಶಗ್ರಂಥಕ್ಕೆ ಅನುಸಾರವಾಗಿ ನ್ಯಾಯಾಧೀಶರನ್ನೂ ಮತ್ತು ಪಂಚಾಯತರನ್ನೂ ನೇಮಿಸು. ಅವರು ಹೊಳೆಯಾಚೆಯ ಇಸ್ರಾಯೇಲರಲ್ಲಿ ನಿನ್ನ ದೇವರ ಧರ್ಮವನ್ನು ಅರಿತಿರುವವರೆಲ್ಲರ ವ್ಯಾಜ್ಯಗಳನ್ನು ತೀರಿಸಲಿ. ಅರಿಯದವರಿಗೆ ನೀವು ಅದನ್ನು ಕಲಿಸಬೇಕು. 26ನಿನ್ನ ದೇವರ ಧರ್ಮಶಾಸ್ತ್ರವನ್ನೂ ಮತ್ತು ರಾಜಾಜ್ಞೆಯನ್ನೂ ಕೈಕೊಳ್ಳದವರಿಗೆಲ್ಲಾ ಮರಣದಂಡನೆ, ಬೇಡಿಹಾಕುವುದು ಈ ವಿಧವಾದ ಶಿಕ್ಷೆಯನ್ನು ತಪ್ಪದೆ ವಿಧಿಸಬೇಕು” ಎಂಬುದು ನಿಮಗೆ ತಿಳಿದಿರಲಿ.
ಎಜ್ರನು ಯೆಹೋವನನ್ನು ಸ್ತುತಿಸಿದ್ದು
27ಎಜ್ರನು ನೀಡಿದ ಪ್ರತಿಕ್ರಿಯೆ, “ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಅರಸನು ಯೆರೂಸಲೇಮಿನಲ್ಲಿರುವ ಯೆಹೋವನ ಆಲಯವನ್ನು ಶೋಭಾಯಮಾನದ ಸ್ಥಿತಿಗೆ ತರುವುದಕ್ಕೆ#7:27 ಶೋಭಾಯಮಾನದ ಸ್ಥಿತಿಗೆ ತರುವುದಕ್ಕೆ ಅಂದರೆ ಘನಪಡಿಸುವುದಕ್ಕೆ. ಆತನ ಪ್ರೇರಣೆಯಿಂದಲೇ ಮನಸ್ಸುಮಾಡಿದ್ದಾನೆ. ಅರಸನು ಅವನ ಮಂತ್ರಿಗಳ ಮತ್ತು ಅವನ ಎಲ್ಲಾ ಶ್ರೇಷ್ಠರಾದ ಸರದಾರರ ಮುಂದೆ ನನಗೆ ದಯೆತೋರಿಸಿದ್ದಾನೆ. 28ನನ್ನ ದೇವರಾದ ಯೆಹೋವನ ಹಸ್ತಪಾಲನೆಯು ನನ್ನೊಂದಿಗೆ ಇರುವುದರಿಂದ ಅರಸನ ಮುಂದೆ ನನಗೆ ದೊರಕ್ಕಿದ್ದರಿಂದ ನಾನು ಧೈರ್ಯವಾಗಿ ನನ್ನೊಂದಿಗೆ ಪ್ರಯಾಣ ಮಾಡುವುದಕ್ಕೆ ಕೆಲವು ಜನ ಇಸ್ರಾಯೇಲ್ ಪ್ರಧಾನರನ್ನು ಕೂಡಿಸಿಕೊಂಡೆನು” ಎಂದು ಹೇಳಿದನು.
Currently Selected:
ಎಜ್ರ 7: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.