YouVersion Logo
Search Icon

ವಿಮೋ 8

8
ಕಪ್ಪೆಗಳಿಂದ ಬಾಧೆಯುಂಟಾದದ್ದು
1ನಂತರ ಯೆಹೋವನು ಮೋಶೆಯ ಸಂಗಡ ಮಾತನಾಡಿ ಅವನಿಗೆ, “ನೀನು ಫರೋಹನ ಬಳಿಗೆ ಹೋಗಿ ಹೀಗೆ ಹೇಳಬೇಕು, ‘ಯೆಹೋವನು ಆಜ್ಞಾಪಿಸುವುದೇನೆಂದರೆ: ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರಿಗೆ ಅಪ್ಪಣೆಕೊಡಬೇಕು. 2ಅಪ್ಪಣೆಕೊಡದೆ ಹೋದರೆ, ನಾನು ನಿನ್ನ ದೇಶದಲ್ಲೆಲ್ಲಾ ಕಪ್ಪೆಗಳಿಂದ ಉಪದ್ರವ ಕೊಡುವೆನು. 3ನೈಲ್ ನದಿಯಲ್ಲಿ ಕಪ್ಪೆಗಳು ಅಸಂಖ್ಯಾತವಾಗಿ ಹುಟ್ಟುವವು. ಅವು ಹೊರಟು ಬಂದು ನಿನ್ನ ಅರಮನೆಯಲ್ಲಿಯೂ, ಮಲಗುವ ಕೋಣೆಯಲ್ಲಿಯೂ, ಮಂಚದ ಮೇಲೆಯೂ ಬರುವುದಲ್ಲದೆ ನಿನ್ನ ಪರಿವಾರದವರ ಮನೆಗಳಲ್ಲಿಯೂ, ನಿನ್ನ ಪ್ರಜೆಗಳ ಮೇಲೆಯೂ, ಒಲೆಗಳಲ್ಲಿಯೂ, ಹಿಟ್ಟು ನಾದುವ ಪಾತ್ರೆಗಳಲ್ಲಿಯೂ ಬರುವವು. 4ನಿನ್ನ ಮೇಲೆಯೂ, ನಿನ್ನ ಪ್ರಜೆಗಳ ಮೇಲೆಯೂ ಮತ್ತು ಪರಿವಾರದವರ ಮೇಲೆಯೂ ಕಪ್ಪೆಗಳು ಹರಡಿಕೊಳ್ಳುವವು.’” ಎಂದನು.
5ಯೆಹೋವನು ಪುನಃ ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ನಿನ್ನ ಕೋಲನ್ನು ಹಿಡಿದುಕೊಂಡು ಹೊಳೆ, ಕಾಲುವೆ, ಕೆರೆ ಇವುಗಳ ಮೇಲೆ ಅದನ್ನು ಹಿಡಿದುಕೊಂಡು ಕೈಯನ್ನು ಚಾಚು. ಆಗ ಐಗುಪ್ತ ದೇಶದ ಮೇಲೆಲ್ಲಾ ಕಪ್ಪೆಗಳು ಬರುವವು” ಎಂದು ಹೇಳಬೇಕು ಎಂದನು. 6ಆರೋನನು ಐಗುಪ್ತ ದೇಶದಲ್ಲಿ ನೀರಿರುವ ಎಲ್ಲಾ ಸ್ಥಳಗಳ ಮೇಲೆ ತನ್ನ ಕೈಚಾಚಲು ಕಪ್ಪೆಗಳು ಹೊರಟು ಬಂದು ದೇಶವನ್ನೆಲ್ಲಾ ತುಂಬಿಕೊಂಡವು. 7ಮಂತ್ರವಾದಿಗಳು ತಮ್ಮ ಮಂತ್ರವಿದ್ಯೆಗಳಿಂದ ಹಾಗೆಯೇ ಮಾಡಿ, ಐಗುಪ್ತ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.
8ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, “ನೀವು ಯೆಹೋವನನ್ನು ಬೇಡಿಕೊಂಡು ಈ ಕಪ್ಪೆಗಳನ್ನು ನನ್ನ ಬಳಿಯಿಂದಲೂ, ನನ್ನ ಪ್ರಜೆಗಳ ಬಳಿಯಿಂದಲೂ ತೊಲಗಿಸಬೇಕು, ಹಾಗೆ ಮಾಡಿದರೆ ನಿಮ್ಮ ಜನರು ಯೆಹೋವನಿಗೋಸ್ಕರ ಯಜ್ಞಮಾಡುವಂತೆ ಅವರಿಗೆ ನಾನು ಅಪ್ಪಣೆ ಕೊಡುವೆನು” ಎಂದನು. 9ಅದಕ್ಕೆ ಮೋಶೆ ಫರೋಹನಿಗೆ, “ಈ ಕಪ್ಪೆಗಳು ನಿನ್ನ ಬಳಿಯಿಂದಲೂ, ನಿನ್ನ ಪ್ರಜೆಗಳ ಬಳಿಯಿಂದಲೂ, ನಿನ್ನ ಮನೆಗಳಿಂದಲೂ ತೊಲಗಿ ನೈಲ್ ನದಿಯಲ್ಲಿ ಮಾತ್ರ ಉಳಿಯುವಂತೆ ನಿನಗೋಸ್ಕರವೂ, ನಿನ್ನ ಪರಿವಾರದವರಿಗೋಸ್ಕರವೂ ನಾನು ಯಾವಾಗ ಬೇಡಿಕೊಳ್ಳಲಿ? ನಿನ್ನ ಚಿತ್ತಕ್ಕೆ ಸರಿ ತೋರುವಂತೆ ನೀನೇ ಅದಕ್ಕೊಂದು ಕಾಲವನ್ನು ನೇಮಿಸಬೇಕು” ಎಂದು ಫರೋಹನನ್ನು ವಿನಂತಿಸಿಕೊಂಡನು. 10ಫರೋಹನು ಮೋಶೆಗೆ, “ನಾಳೆ” ಎಂದನು. ಆಗ ಮೋಶೆಯು, “ನಿನ್ನ ಮಾತಿನ ಪ್ರಕಾರವೇ ಆಗಲಿ, ಇದರಿಂದ ನಮ್ಮ ದೇವರಾಗಿರುವ ಯೆಹೋವನಿಗೆ ಸಮಾನರು ಬೇರೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವಿ. 11ಕಪ್ಪೆಗಳು ನಿನ್ನನ್ನೂ, ನಿನ್ನ ಮನೆಗಳನ್ನೂ, ನಿನ್ನ ಪ್ರಜಾಪರಿವಾರದವರನ್ನೂ ಬಿಟ್ಟು, ನೈಲ್ ನದಿಯಲ್ಲಿ ಮಾತ್ರ ಇರುವವು” ಎಂದನು. 12ಮೋಶೆ ಮತ್ತು ಆರೋನರು ಫರೋಹನ ಬಳಿಯಿಂದ ಹೊರಟು ಹೋದರು. ಆಗ ಮೋಶೆಯು ಯೆಹೋವನಿಗೆ, ನೀನು ಫರೋಹನ ಮೇಲೆ ಬರಮಾಡಿರುವ ಕಪ್ಪೆಗಳನ್ನು ತೊಲಗಿಸಬೇಕೆಂದು ಮೊರೆಯಿಟ್ಟನು. 13ಯೆಹೋವನು ಮೋಶೆಯ ಮಾತಿನ ಪ್ರಕಾರವೇ ಮಾಡಿದನು. ಮನೆಗಳಲ್ಲಿಯೂ, ಅಂಗಳಗಳಲ್ಲಿಯೂ, ಬಯಲಿನಲ್ಲಿಯೂ ಇದ್ದ ಕಪ್ಪೆಗಳು ಸತ್ತುಹೋದವು. 14ಜನರು ಅವುಗಳನ್ನು ರಾಶಿ ರಾಶಿಯಾಗಿ ಕೂಡಿಸಿದರು. ದೇಶವೆಲ್ಲಾ ದುರ್ವಾಸನೆಯಿಂದ ತುಂಬಿಹೋಯಿತು. 15ಆದರೆ ಫರೋಹನು ಕಪ್ಪೆಗಳ ಕಾಟವು ತೀರಿತೆಂದು ತಿಳಿದುಕೊಂಡಾಗ, ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು. ಯೆಹೋವನು ಹೇಳಿದಂತೆಯೇ ಅವನು, ಮೋಶೆ ಮತ್ತು ಆರೋನನ ಮಾತನ್ನು ಕೇಳದೆ ಹೋದನು.
ಹೇನುಗಳ ಬಾಧೆ
16ತರುವಾಯ ಯೆಹೋವನು ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಚಾಚಿ ಭೂಮಿಯ ಧೂಳನ್ನು ಹೊಡೆ, ಆಗ ಐಗುಪ್ತ ದೇಶದ ಭೂಮಿಯಲ್ಲಿದ್ದ ಧೂಳೆಲ್ಲಾ ಹೇನುಗಳಾಗುವುದು’” ಎಂದನು. 17ಅವರು ಹಾಗೆಯೇ ಮಾಡಿದರು. ಆರೋನನು ಕೋಲನ್ನು ಹಿಡಿದುಕೊಂಡು ಅದನ್ನು ಚಾಚಿ, ಭೂಮಿಯ ಧೂಳನ್ನು ಹೊಡೆದನು. ಆಗ ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ ಹೇನುಗಳು ಬಂದವು. ಐಗುಪ್ತ ದೇಶದ ಭೂಮಿಯಲ್ಲಿದ್ದ ಧೂಳು ಹೇನುಗಳಾದವು. 18ಮಂತ್ರಗಾರರು ತಮ್ಮ ಮಂತ್ರವಿದ್ಯೆಗಳಿಂದ ಹಾಗೆಯೇ ಹೇನುಗಳನ್ನು ಉಂಟುಮಾಡುವುದಕ್ಕೆ ಪ್ರಯತ್ನಿಸಿದರೂ ಆಗದೆ ಹೋಯಿತು. ಆ ಹೇನುಗಳು ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಇದ್ದವು. 19ಆಗ ಆ ಮಂತ್ರಗಾರರು ಫರೋಹನಿಗೆ, “ಇದು ದೇವರ ಕೈಕೆಲಸವೇ ಸರಿ” ಎಂದು ಹೇಳಿದರು. ಆದರೂ ಫರೋಹನ ಹೃದಯವು ಕಠಿಣವಾಗಿತ್ತು. ಯೆಹೋವನು ಮೋಶೆಗೆ ಮುಂತಿಳಿಸಿದಂತೆಯೇ ಫರೋಹನು ಅವರ ಮಾತನ್ನು ಕೇಳದೆ ಹೋದನು.
ನೊಣಗಳ ಬಾಧೆ
20ತರುವಾಯ ಯೆಹೋವನು ಮೋಶೆಗೆ, “ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೋ. ಅವನು ಹೊರಗೆ ನದಿಯ ಬಳಿಗೆ ಬರುತ್ತಾನೆ. ನೀನು ಅವನಿಗೆ ಹೀಗೆಂದು ಹೇಳು, ‘ಯೆಹೋವನು ಆಜ್ಞಾಪಿಸುವುದೇನೆಂದರೆ, ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆಕೊಡಬೇಕು. 21ಆದರೆ ನೀನು, ನನ್ನ ಜನರಿಗೆ ಅಪ್ಪಣೆಕೊಡದೇ ಹೋದರೆ, ನಾನು ನಿನಗೂ, ನಿನ್ನ ಪರಿವಾರದವರಿಗೂ, ನಿನ್ನ ಮನೆಗಳಿಗೂ ನೊಣಗಳ ಕಾಟವುಂಟಾಗುವಂತೆ ಮಾಡುವೆನು. ಐಗುಪ್ತ್ಯರ ಮನೆಗಳಲ್ಲಿಯೂ, ಅವರ ಎಲ್ಲಾ ಭೂಮಿಗಳಲ್ಲಿಯೂ ಆ ನೊಣಗಳು ತುಂಬಿಕೊಳ್ಳುವವು. 22ಆದರೆ ಆ ದಿನದಲ್ಲಿ ನಾನೇ, ಭೂಲೋಕದಲ್ಲಿ ಯೆಹೋವನೆಂದು ನೀನು ತಿಳಿದುಕೊಳ್ಳುವಂತೆ ನನ್ನ ಜನರು ವಾಸವಾಗಿರುವ ಗೋಷೆನ್ ಸೀಮೆಯನ್ನು ಪ್ರತ್ಯೇಕಿಸುವೆನು. ಅಲ್ಲಿ ಆ ನೊಣಗಳ ಕಾಟವು ಇರುವುದಿಲ್ಲ. 23ಹೀಗೆ ನನ್ನ ಜನಕ್ಕೂ, ನಿನ್ನ ಜನಕ್ಕೂ ನಡುವೆ #8:23 ವಿಮುಕ್ತಗೊಳಿಸುವೆನು.ವ್ಯತ್ಯಾಸವನ್ನುಂಟು ಮಾಡುವೆನು. ನಾಳೆಯೇ ಈ ಮಹತ್ಕಾರ್ಯ ಉಂಟಾಗುವುದು’ ಎಂದು ಹೇಳಬೇಕು” ಎಂದನು. 24ಯೆಹೋವನು ಹಾಗೆಯೇ ಮಾಡಿದನು. ಬಾಧಿಸುವ ನೊಣಗಳು ಫರೋಹನ ಅರಮನೆಯಲ್ಲಿಯೂ, ಅವನ ಪರಿವಾರದವರ ಮನೆಗಳಲ್ಲಿಯೂ, ಸಮಸ್ತ ಐಗುಪ್ತ ದೇಶದಲ್ಲಿಯೂ ವಿಪರೀತವಾಗಿ ತುಂಬಿಕೊಂಡವು. ಅವುಗಳಿಂದ ದೇಶವು ಹಾಳಾಗಿಹೋಯಿತು.
25ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ ಅವರಿಗೆ, “ನೀವು ಹೋಗಿ ಈ ದೇಶದಲ್ಲಿಯೇ ನಿಮ್ಮ ದೇವರಿಗೆ ಯಜ್ಞವನ್ನರ್ಪಿಸಿರಿ” ಎಂದನು. 26ಆದರೆ ಮೋಶೆ, “ಹಾಗೆ ಮಾಡುವುದು ಸರಿಯಲ್ಲ, ನಮ್ಮ ದೇವರಾದ ಯೆಹೋವನಿಗೆ ನಾವು ಯಜ್ಞವನ್ನರ್ಪಿಸುವುದು ಐಗುಪ್ತ್ಯರಿಗೆ ಅಸಹ್ಯವಾಗಿದೆ. ಐಗುಪ್ತ್ಯರಿಗೆ ಅಸಹ್ಯವಾಗಿರುವುದನ್ನು ಅವರ ಕಣ್ಣೆದುರಿಗೆ ಯಜ್ಞ ಅರ್ಪಿಸಿದರೆ ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವರಲ್ಲವೇ? 27ನಾವು ಅರಣ್ಯದಲ್ಲಿ ಮೂರು ದಿನಗಳ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನು ಆಜ್ಞಾಪಿಸುವ ಪ್ರಕಾರ ಯಜ್ಞಮಾಡಬೇಕು” ಎಂದನು. 28ಅದಕ್ಕೆ ಫರೋಹನು ಅವರಿಗೆ, “ನಿಮ್ಮ ದೇವರಾದ ಯೆಹೋವನಿಗೆ ಅರಣ್ಯದಲ್ಲಿ ಯಜ್ಞಮಾಡುವಂತೆ ನಾನು ನಿಮಗೆ ಅಪ್ಪಣೆ ಕೊಡುತ್ತೇನೆ. ಆದರೆ ಬಹಳ ದೂರ ಹೋಗಬಾರದು. ನನಗೋಸ್ಕರ ಪ್ರಾರ್ಥನೆ ಮಾಡಿರಿ” ಎಂದನು. 29ಅದಕ್ಕೆ ಮೋಶೆಯು, “ನಾನು ನಿನ್ನ ಬಳಿಯಿಂದ ಹೊರಟು ಹೋದ ಕೂಡಲೇ, ಫರೋಹನಾದ ನಿನಗೂ, ನಿನ್ನ ಪರಿವಾರದವರಿಗೂ ನೊಣಗಳ ಬಾಧೆಯು ನಾಳೆಯಿಂದ ಇರಬಾರದೆಂಬುದಾಗಿ ನಾನು ಯೆಹೋವನನ್ನು ಬೇಡಿಕೊಳ್ಳುವೆನು. ಆದರೆ ಯೆಹೋವನಿಗೆ ಯಜ್ಞವನ್ನರ್ಪಿಸುವುದಕ್ಕೆ ನೀನು ನನ್ನ ಜನರಿಗೆ ಅಪ್ಪಣೆಕೊಡದೆ ಇನ್ನು ಮುಂದೆ ವಂಚನೆಮಾಡಬಾರದು” ಎಂದನು. 30ಮೋಶೆ ಫರೋಹನ ಬಳಿಯಿಂದ ಹೊರಟು ಹೋಗಿ ಯೆಹೋವನಿಗೆ ಪ್ರಾರ್ಥನೆಮಾಡಿದನು. 31ಮೋಶೆಯು ಪ್ರಾರ್ಥಿಸಿದಂತೆಯೇ ಯೆಹೋವನು ಮಾಡಿದನು. ಆ ನೊಣಗಳೆಲ್ಲಾ ಫರೋಹನ ಬಳಿಯಿಂದಲೂ, ಅವನ ಪ್ರಜಾಪರಿವಾರದವರ ಬಳಿಯಿಂದಲೂ ತೊಲಗಿಹೋದವು. ಒಂದೂ ಉಳಿಯಲಿಲ್ಲ. 32ಆದರೂ ಫರೋಹನು ತನ್ನ ಹೃದಯವನ್ನು ಕಠಿಣಮಾಡಿಕೊಂಡು ಜನರಿಗೆ ಹೋಗುವುದಕ್ಕೆ ಅಪ್ಪಣೆ ಕೊಡಲಿಲ್ಲ.

Currently Selected:

ವಿಮೋ 8: IRVKan

Highlight

Share

Copy

None

Want to have your highlights saved across all your devices? Sign up or sign in