ವಿಮೋ 15
15
ಜಯಗೀತೆ
1ಆಗ ಮೋಶೆಯೂ, ಇಸ್ರಾಯೇಲರೂ ಯೆಹೋವನನ್ನು ಸ್ತುತಿಸುವುದಕ್ಕಾಗಿ ಈ ಕೀರ್ತನೆಯನ್ನು ಹಾಡಿದರು:
“ಯೆಹೋವನಿಗೆ ಸ್ತೋತ್ರ ಗಾನಮಾಡೋಣ;
ಆತನು ಮಹಾಜಯಶಾಲಿಯಾದವನು.
ಕುದುರೆಗಳನ್ನು ಮತ್ತು ರಾಹುತರನ್ನು ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ.
2ನನ್ನ ಬಲವೂ, ಕೀರ್ತನೆಯೂ ಯಾಹುವೇ.
ಆತನಿಂದ ನನಗೆ ರಕ್ಷಣೆ ಉಂಟಾಯಿತು.
ನಮ್ಮ ದೇವರು ಆತನೇ, ಆತನನ್ನು ಸ್ತುತಿಸುವೆನು, ನಮ್ಮ ಪೂರ್ವಿಕರ ದೇವರು ಆತನೇ,
ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವೆವು.
3ಯೆಹೋವನು ಯುದ್ಧವೀರನು;
ಯೆಹೋವ ಎಂಬುದು ಆತನ ನಾಮವಾಗಿದೆ.
4ಆತನು ಫರೋಹನ ರಥಗಳನ್ನೂ, ಸ್ಯೆನಿಕರನ್ನೂ ಸಮುದ್ರದಲ್ಲಿ ಕೆಡವಿಹಾಕಿದನು.
ಫರೋಹನ ಶ್ರೇಷ್ಠ ವೀರರನ್ನು ಕೆಂಪುಸಮುದ್ರದಲ್ಲಿ ಮುಳುಗಿಸಿ ಬಿಟ್ಟನು.
5ಆಳವಾದ ಸಾಗರವು ಅವರನ್ನು ಮುಚ್ಚಿಬಿಟ್ಟಿತು.
ಅವರು ಕಲ್ಲಿನಂತೆ ಸಮುದ್ರದ ತಳವನ್ನು ಸೇರಿದರು.
6ಯೆಹೋವನೇ, ನಿನ್ನ ಬಲಗೈಯಲ್ಲಿರುವ ಶಕ್ತಿ ಎಷ್ಟೋ ಮಹಿಮೆಯುಳ್ಳದ್ದಾಗಿದೆ.
ಯೆಹೋವನೇ, ನಿನ್ನ ಬಲಗೈ ಶತ್ರುಗಳನ್ನು ಪುಡಿಪುಡಿಮಾಡಿಬಿಡುತ್ತದೆ.
7ನೀನು ಅತ್ಯಧಿಕ ಮಹತ್ವವುಳ್ಳವನಾಗಿ ನಿನ್ನೆದುರಿಗೆ ನಿಲ್ಲುವವರನ್ನು ಕೆಡವಿಬಿಟ್ಟಿರುವೆ.
ನಿನ್ನ ಕೋಪಾಗ್ನಿಯು ಹೊರಟು ಅವರನ್ನು ಒಣಗಿದ ಹುಲ್ಲನ್ನೋ ಎಂಬಂತೆ ಸುಟ್ಟು ಭಸ್ಮಮಾಡಿ ಬಿಟ್ಟಿದೆ.
8ನಿನ್ನ ಮೂಗಿನ ಶ್ವಾಸದಿಂದ ಸಮುದ್ರದ ನೀರು ಒಟ್ಟುಗೂಡಿದವು;
ಪ್ರವಾಹವು ಗೋಡೆಯೋಪಾದಿಯಲ್ಲಿ ನಿಂತುಕೊಂಡಿತು;
ಸಾಗರದಾಳದೊಳಗಿನ ನೀರು ಗಟ್ಟಿಯಾಯಿತು.
9ಶತ್ರುವು, ‘ನಾವು ಇವರನ್ನು ಹಿಂದಟ್ಟಿ ಹಿಡಿಯುವೆವು, ಅವರ ಸೊತ್ತನ್ನು ಅಪಹರಿಸಿ ಹಂಚಿಕೊಳ್ಳುವೆವು;
ಅವರಲ್ಲಿ ನಮ್ಮ ಬಯಕೆಯನ್ನು ತೀರಿಸಿಕೊಳ್ಳುವೆವು.
ನಾವು ಖಡ್ಗವನ್ನು ಹಿಡಿದು; ಶಕ್ತಿಯಿಂದ ಅವರನ್ನು ಸಂಹಾರಮಾಡುವೆವು’ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದರು.
10ಆದರೆ ನೀನು ಗಾಳಿಯನ್ನು ಊದಿದಾಗ, ಸಮುದ್ರವು ಅವರನ್ನು ಮುಚ್ಚಿಕೊಂಡಿತು;
ಅವರು ಮಹಾಸಾಗರದೊಳಗೆ ಸೀಸದ ಗುಂಡಿನಂತೆ ಮುಳುಗಿಹೋದರು.
11ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು?
ನಿನ್ನ ಹಾಗೆ ಪರಿಶುದ್ಧತ್ವದಲ್ಲಿ ಸರ್ವೋತ್ತಮನು
ಮಹಿಮೆ ಹೊಂದಿದವನು, ಭಯಂಕರನೂ, ಅದ್ಭುತ ಕೃತ್ಯಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನರು ಯಾರಿದ್ದಾರೆ?
12ನೀನು ನಿನ್ನ ಬಲಗೈಯನ್ನು ಚಾಚಿದಾಗ,
ಭೂಮಿಯು ಬಾಯ್ದೆರೆದು ಶತ್ರುಗಳನ್ನು ನುಂಗಿಬಿಟ್ಟಿತಲ್ಲಾ.
13ನಿನ್ನ ಒಡಂಬಡಿಕೆಯ ನಂಬಿಗಸ್ತಿಕೆಯಲ್ಲಿ ನೀನು ನಿನ್ನ ಪ್ರಜೆಯನ್ನು ಬಿಡುಗಡೆ ಮಾಡಿರುವೆ.
ನಿನ್ನ ಶಕ್ತಿಯಿಂದ ಅವರನ್ನು ನೀನು ವಾಸಮಾಡುವ ಪರಿಶುದ್ಧ ನಿವಾಸಕ್ಕೆ ನಡೆಸಿರುವೆ.
14ಜನಾಂಗಗಳು ಇದನ್ನು ಕೇಳಿ ನಡುಗುವರು.
ಫಿಲಿಷ್ಟಿಯದಲ್ಲಿ ವಾಸಿಸುವವರು ಭಯಭೀತರಾಗುವರು.
15ಎದೋಮ್ಯರ ಪ್ರಭುಗಳು ದಿಗ್ಭ್ರಮೆಗೊಳ್ಳುವರು;
ಮೋವಾಬ್ಯರ ಸೈನಿಕರು ನಡುಗುವರು;
ಕಾನಾನಿನ ನಿವಾಸಿಗಳೆಲ್ಲರೂ ಕರಗಿ ಹೋಗುವರು.
16ಭಯವೂ, ಹೆದರಿಕೆಯೂ, ಅವರಿಗುಂಟಾಗುವುದು.
ನಿನ್ನ ಭುಜಬಲದ ಶಕ್ತಿಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು.
ಅಷ್ಟರಲ್ಲಿ ಯೆಹೋವನೇ, ನೀನು ಕಾಪಾಡಿದ ನಿನ್ನ ಪ್ರಜೆಗಳು
ದಾಟಿ ಹೋಗಿ ದೇಶವನ್ನು ಸೇರುವರು.
17ನೀನು ಅವರನ್ನು ನಿನ್ನ ಸ್ವಕೀಯ ದೇಶವಾಗಿರುವ ಬೆಟ್ಟದ ಸೀಮೆಗೆ ತಂದು ಬಲಪಡಿಸುವಿ,
ಯೆಹೋವನೇ, ನೀನು ಸ್ವಂತ ನಿವಾಸಕ್ಕಾಗಿ ಕಟ್ಟಿಕೊಂಡಿರುವ ಸ್ಥಳದವರೆಗೂ
ಕರ್ತನೇ, ನೀನು ನಿನಗಾಗಿ ಸಿದ್ಧಪಡಿಸಿಕೊಂಡಿರುವ ಪವಿತ್ರ ಪರ್ವತದವರೆಗೂ ಅವರನ್ನು ಬರಮಾಡುವಿ.
18ಯೆಹೋವನೇ ಯುಗಯುಗಾಂತರಗಳಲ್ಲಿಯೂ ಅರಸನಾಗಿ ಆಳುವವನು.”
19ಫರೋಹನ ಕುದುರೆಗಳು, ರಥಗಳೂ, ರಾಹುತರೂ ಸಮುದ್ರದೊಳಗೆ ಬಂದಾಗ ಯೆಹೋವನು ಸಮುದ್ರದ ನೀರನ್ನು ಅವರ ಮೇಲೆ ತಿರುಗಿ ಬರಮಾಡಿ ಮುಳುಗಿಸಿಬಿಟ್ಟನು. ಆದರೆ ಇಸ್ರಾಯೇಲರಾದರೋ ಸಮುದ್ರದ ಮಧ್ಯದಲ್ಲಿನ ಒಣ ನೆಲದ ಮೇಲೆ ದಾಟಿ ಹೋದರು. 20ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋದರಿ ಮಿರ್ಯಾಮಳು ಕೈಯಲ್ಲಿ ತಾಳವನ್ನು ತೆಗೆದುಕೊಂಡಳು. ಸ್ತ್ರೀಯರೆಲ್ಲರೂ ಕೈಗಳಲ್ಲಿ ತಾಳಗಳನ್ನು ಹಿಡಿದುಕೊಂಡು ನಾಟ್ಯವಾಡುತ್ತಾ, ಆಕೆಯ ಹಿಂದೆ ಹೋದರು. 21ಮಿರ್ಯಾಮಳು ಅವರಿಗೆ ಹೀಗೆ ಹಾಡಿದಳು:
“ಯೆಹೋವನಿಗೆ ಕೀರ್ತನೆ ಹಾಡಿರಿ, ಆತನು ಮಹೋನ್ನತನಾದ ದೇವರಾಗಿದ್ದಾನೆ.
ಕುದುರೆಗಳನ್ನೂ, ರಾಹುತರನ್ನೂ ಸಮುದ್ರದಲ್ಲಿ ಮುಳುಗಿಸಿ ನಾಶಮಾಡಿದನು.”
ಕಹಿನೀರು ಸಿಹಿಯಾದದ್ದು
22ಆನಂತರ ಮೋಶೆಯು ಇಸ್ರಾಯೇಲರನ್ನು ಕೆಂಪುಸಮುದ್ರದ ಮೂಲಕವಾಗಿ ನಡೆಸಿದನು. ಅವರು ಶೂರ್ ಮರುಭೂಮಿಯಲ್ಲಿ ಮೂರು ದಿನಗಳು ನೀರಿಲ್ಲದೆ ಪ್ರಯಾಣ ಮಾಡಿದರು. 23ತರುವಾಯ ಅವರು ಮಾರಾ ಎಂಬ ಸ್ಥಳಕ್ಕೆ ಬಂದರು. ಆದರೆ ಆ ಸ್ಥಳದ ನೀರು ಕಹಿಯಾಗಿದ್ದರಿಂದ ಅವರಿಗೆ ಅದನ್ನು ಕುಡಿಯುವುದಕ್ಕೆ ಆಗದೆ ಹೋಯಿತು. ಆದ್ದರಿಂದಲೇ ಆ ಸ್ಥಳಕ್ಕೆ #15:23 ಮಾರಾ ಅಂದರೆ ಕಹಿ.ಮಾರಾ ಎಂದು ಹೆಸರಾಯಿತು. 24ಜನರು ಮೋಶೆಗೆ, “ನಾವೇನು ಕುಡಿಯಬೇಕು?” ಎಂದು ಅವನಿಗೆ ವಿರುದ್ಧವಾಗಿ ಗುಣಗುಟ್ಟಿದರು. 25ಮೋಶೆಯು ಯೆಹೋವನಿಗೆ ಪ್ರಾರ್ಥಿಸಿದನು. ಆಗ ಯೆಹೋವನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಅವನು ಅದನ್ನು ನೀರಿನಲ್ಲಿ ಹಾಕಿದಾಗ, ನೀರು ಸಿಹಿಯಾಯಿತು. ಅಲ್ಲಿ ಯೆಹೋವನು ಇಸ್ರಾಯೇಲರಿಗಾಗಿ ಒಂದು ನಿಯಮವನ್ನು ಮಾಡಿ ಅವರನ್ನು ಪರೀಕ್ಷಿಸಿದನು. 26ಯೆಹೋವನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ, ಆತನ ದೃಷ್ಟಿಗೆ ಸರಿಬೀಳುವುದನ್ನು ಮಾಡಿ, ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು, ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಿ ನಡೆದರೆ, ನಾನು ಐಗುಪ್ತ್ಯರಿಗೆ ಉಂಟುಮಾಡಿದ ವ್ಯಾಧಿಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನೂ, ನಿಮ್ಮನ್ನು ಗುಣಪಡಿಸುವವನೂ ಆಗಿದ್ದೇನೆ” ಎಂದನು.
27ಆ ನಂತರ ಅವರು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಬುಗ್ಗೆಗಳೂ, ಎಪ್ಪತ್ತು ಖರ್ಜೂರದ ಮರಗಳೂ ಇದ್ದವು. ಆ ನೀರಿನ ಬಳಿಯಲ್ಲಿ ಅವರು ಇಳಿದು ಕೊಂಡರು.
Currently Selected:
ವಿಮೋ 15: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.