ವಿಮೋ 13
13
ಚೊಚ್ಚಲುಗಳ ಪ್ರತಿಷ್ಠೆ
1ಯೆಹೋವನು ಮೋಶೆಯ ಸಂಗಡ ಮಾತನಾಡಿ, 2“ಇಸ್ರಾಯೇಲರಲ್ಲಿ ಹುಟ್ಟಿರುವ ಪ್ರತಿಯೊಂದು ಚೊಚ್ಚಲ ಗಂಡನ್ನು ನನಗಾಗಿ ಪ್ರತಿಷ್ಠಿಸಬೇಕು. ಮನುಷ್ಯರಲ್ಲಾಗಲೀ, ಪಶುಗಳಲ್ಲಾಗಲೀ ಹುಟ್ಟುವ ಪ್ರಥಮ ಗರ್ಭಫಲವು ನನ್ನದಾಗಿದೆ” ಎಂದು ಹೇಳಿದನು.
ಹುಳಿಯಿಲ್ಲದ ರೊಟ್ಟಿಯ ಹಬ್ಬ
3ಮೋಶೆಯು ಇಸ್ರಾಯೇಲರಿಗೆ, “ನೀವು ದಾಸತ್ವದಲ್ಲಿದ್ದ ಐಗುಪ್ತ ದೇಶದೊಳಗಿಂದ ಬಿಡುಗಡೆಯಾದ ಈ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಯೆಹೋವನು ತನ್ನ ಭುಜಬಲದಿಂದ ನಿಮ್ಮನ್ನು ಆ ಸ್ಥಳದಿಂದ ಬಿಡಿಸಿದ್ದಾನೆ. ಈ ದಿನದಲ್ಲಿ ನೀವು ಹುಳಿಬೆರೆಸಿದ್ದನ್ನು ತಿನ್ನಬಾರದು. 4ಚೈತ್ರ ಮಾಸದ ಈ ದಿನದಲ್ಲೇ ನೀವು ಹೊರಗೆ ಬಂದಿರುವಿರಿ. 5ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಮಾಡಿ ಹೇಳಿದಂತೆ, ನಿಮ್ಮನ್ನು #13:5 ಬಹಳಷ್ಟು ಫಲವತ್ತಾದ ದೇಶ.ಹಾಲೂ ಮತ್ತು ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ಕರೆದು ತಂದು ಅದನ್ನು ನಿಮಗೆ ಕೊಟ್ಟಾಗ ನೀವು ಈ ತಿಂಗಳಲ್ಲಿ ಈ ಆಚರಣೆಯನ್ನು ನಡೆಸಬೇಕು. 6ಏಳು ದಿನ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು, ಏಳನೆಯ ದಿನದಲ್ಲಿ ಯೆಹೋವನ ಘನಕ್ಕಾಗಿ ಹಬ್ಬವನ್ನು ಆಚರಿಸಬೇಕು. 7ಆ ಏಳು ದಿನವೂ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮಾತ್ರವಲ್ಲದೆ, ನಿಮ್ಮಲ್ಲಿ ಹುಳಿಹಿಟ್ಟು ಕಾಣಿಸಬಾರದು. ಇಲ್ಲವೆ ಹುಳಿಹಿಟ್ಟು ನಿಮ್ಮ ಗಡಿಯಲ್ಲೇ ಕಾಣಬಾರದು. 8ಆ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ನಮ್ಮ ಜನರು ಐಗುಪ್ತ ದೇಶದಿಂದ ಹೊರಟು ಬಂದಾಗ ಯೆಹೋವನು ನಮಗೋಸ್ಕರ ಮಾಡಿದ್ದನ್ನು ನೆನಪು ಮಾಡಿಕೊಳ್ಳುವುದಕ್ಕಾಗಿ ಈ ಆಚರಣೆಯನ್ನು ಆಚರಿಸುತ್ತೇವೆ. 9ಯೆಹೋವನು ತನ್ನ ಭುಜಬಲದಿಂದ ನಿಮ್ಮನ್ನು ಐಗುಪ್ತ ದೇಶದಿಂದ ಬಿಡಿಸಿದ್ದರಿಂದ ಆತನ ನಿಯಮವನ್ನು ಕುರಿತು ನೀವು ಹೇಳಬೇಕು. ಈ ಆಚರಣೆಯು ನಿಮ್ಮ ಕೈಗಳ ಮೇಲೆ ಗುರುತಾಗಿಯೂ, ಹಣೆಗೆ ಕಟ್ಟಿಕೊಂಡಿರುವ ಜ್ಞಾಪಕಪಟ್ಟಿಯಂತೆಯೂ ಇರಬೇಕು. 10ಹೀಗಿರುವುದರಿಂದ ಪ್ರತಿವರ್ಷವು ನಿಯಮಿತವಾದ ಕಾಲದಲ್ಲಿ ನೀವು ಈ ಆಚರಣೆಯನ್ನು ಮಾಡಬೇಕು.
ಚೊಚ್ಚಲುಗಳ ಸಮರ್ಪಣೆ
11“ಯೆಹೋವನು ನಿಮಗೂ ನಿಮ್ಮ ಪೂರ್ವಿಕರಿಗೂ ಪ್ರಮಾಣಮಾಡಿದ ಪ್ರಕಾರ ನಿಮ್ಮನ್ನು ಕಾನಾನ್ಯರ ದೇಶಕ್ಕೆ ಬರಮಾಡಿ ಆ ದೇಶವನ್ನು ನಿಮಗೆ ಕೊಟ್ಟ ನಂತರ, 12ನಿಮ್ಮಲ್ಲಿಯೂ ನಿಮ್ಮ ಪಶುಗಳಲ್ಲಿಯೂ ಹುಟ್ಟುವ ಪ್ರಥಮ ಗರ್ಭಫಲವು ಗಂಡಾದ ಪಕ್ಷಕ್ಕೆ ಅದು ಯೆಹೋವನ ಭಾಗವೆಂದು ತಿಳಿದುಕೊಂಡು ಅದನ್ನು ಆತನಿಗೆ ಸಮರ್ಪಿಸಬೇಕು. 13#13:13 ಕುರಿಮರಿಯ ಯಜ್ಞ ಸಮರ್ಪಿಸಲು ಯೋಗ್ಯವಾದದ್ದು ಆದರೆ ಕತ್ತೆಯನ್ನು ಯಜ್ಞವಾಗಿ ಅರ್ಪಿಸುವುದು ಯೋಗ್ಯವಲ್ಲ.ಮೊದಲು ಹುಟ್ಟಿದ ಕತ್ತೆಯ ಚೊಚ್ಚಲಮರಿಗೆ ಬದಲಾಗಿ ಕುರಿಮರಿಯನ್ನು ಬಿಡಿಸಿಕೊಳ್ಳಬಹುದು. ಹಾಗೆ ಬಿಡಿಸದೆ ಹೋದರೆ ಅದರ ಕುತ್ತಿಗೆ ಮುರಿದು ಕೊಲ್ಲಬೇಕು. ಮನುಷ್ಯರ ಚೊಚ್ಚಲ ಗಂಡು ಮಕ್ಕಳನ್ನು ಯೆಹೋವನಿಗಾಗಿ ಬಿಡಿಸಿಕೊಳ್ಳಲೇ ಬೇಕು. 14ಮುಂದೆ ನಿಮ್ಮ ಮಕ್ಕಳು, ‘ಇದರ ಅರ್ಥ ಏನು?’ ಎಂದು ನಿಮ್ಮನ್ನು ವಿಚಾರಿಸುವಾಗ ನೀವು ಅವರಿಗೆ, ‘ನಾವು ದಾಸತ್ವದಲ್ಲಿದ್ದ ಐಗುಪ್ತ ದೇಶದಿಂದ ಯೆಹೋವನು ತನ್ನ ಭುಜಬಲದಿಂದ ನಮ್ಮನ್ನು ಬಿಡಿಸಿದನು. 15ಫರೋಹನು ಹಠಹಿಡಿದು ನಮ್ಮನ್ನು ಹೋಗಗೊಡಿಸದೇ ಇದ್ದಾಗ ಯೆಹೋವನು ಐಗುಪ್ತ ದೇಶದಲ್ಲಿ ಮನುಷ್ಯರ ಚೊಚ್ಚಲಮಕ್ಕಳನ್ನು, ಪಶುಗಳ ಚೊಚ್ಚಲು ಮರಿಗಳನ್ನು ಅಂತೂ ಆ ದೇಶದಲ್ಲಿ ಚೊಚ್ಚಲಾಗಿದ್ದ ಎಲ್ಲವನ್ನು ಸಂಹಾರ ಮಾಡಿದನು. ಆದಕಾರಣ ಗಂಡಾಗಿ ಹುಟ್ಟುವ ಪ್ರಥಮ ಗರ್ಭಫಲವನ್ನೆಲ್ಲಾ ನಾವು ಯೆಹೋವನಿಗೆ ಸಮರ್ಪಿಸುವುದುಂಟು. ಮನುಷ್ಯರಿಂದಾದ ಪ್ರಥಮ ಗರ್ಭಫಲವನ್ನಾದರೋ ಅದನ್ನು ಬದಲುಕೊಟ್ಟು ಬಿಡಿಸುತ್ತೇವೆ’” ಎಂದು ಹೇಳಬೇಕು. 16ಯೆಹೋವನು ಭುಜಬಲದಿಂದ ನಿಮ್ಮನ್ನು ಐಗುಪ್ತ ದೇಶದಿಂದ ಬಿಡಿಸಿದ ಸಂಗತಿಯನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳುವುದರ ಗುರುತಾಗಿ ಅದನ್ನು ನಿಮ್ಮ ಕೈಗಳ ಮೇಲೆಯೂ, ಹಣೆಯ ಮೇಲೆ ಜ್ಞಾಪಕಪಟ್ಟಿಯಂತೆಯೂ ಇರಬೇಕು.
ಮೇಘಸ್ತಂಭ ಮತ್ತು ಅಗ್ನಿಸ್ತಂಭ
17ಫರೋಹನು ಇಸ್ರಾಯೇಲರಿಗೆ ಹೋಗುವುದಕ್ಕೆ ಅಪ್ಪಣೆ ಕೊಟ್ಟಾಗ, ಫಿಲಿಷ್ಟಿಯರ ದೇಶದ ಮಾರ್ಗವು ಸಮೀಪವಾಗಿದ್ದರೂ ದೇವರು ಆ ದಾರಿಯಲ್ಲಿ ಅವರನ್ನು ಹೋಗಗೊಡಿಸಲಿಲ್ಲ. ಏಕೆಂದರೆ, “ದೇವರು, ಜನರು ಯುದ್ಧವನ್ನು ನೋಡಿ ಗಾಬರಿಯಾಗಿ ಮನಸ್ಸನ್ನು ಬದಲಾಯಿಸಿಕೊಂಡು ಐಗುಪ್ತಕ್ಕೆ ಹಿಂದಿರುಗಿ ಹೋದಾರೂ” ಎಂದು ಹೇಳಿದನು. 18ಹೀಗಿರುವುದರಿಂದ ಯೆಹೋವನು ಜನರನ್ನು ಕೆಂಪುಸಮುದ್ರದ ಸಮೀಪದಲ್ಲಿರುವ ಮರುಭೂಮಿಯನ್ನು ಬಳಸಿಕೊಂಡು ಹೋಗುವಂತೆ ಮಾಡಿದನು. ಆದರೂ ಇಸ್ರಾಯೇಲರು #13:18 ಅಥವಾ ಇಸ್ರಾಯೇಲರು ಕುಲ ಕುಲವಾಗಿ ಹೊರಟುಹೋದರು.ಯುದ್ಧಸನ್ನದ್ದರಾಗಿ ಐಗುಪ್ತ ದೇಶದೊಳಗಿಂದ ಹೊರಟುಬಂದರು. 19ಇದಲ್ಲದೆ ಯೋಸೇಫನು ಇಸ್ರಾಯೇಲರಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಪರಾಂಬರಿಸಿ ತನ್ನ ವಾಗ್ದಾನವನ್ನು ನೆರವೇರಿಸುವವನಾಗಿರುವುದರಿಂದ ನೀವು ಹೋಗುವಾಗ ನನ್ನ ದೇಹದ ಅಸ್ತಿಮೂಳೆಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಹೋಗಬೇಕು” ಎಂದು ಖಂಡಿತವಾದ ಪ್ರಮಾಣವನ್ನು ಮಾಡಿಸಿದ್ದರಿಂದ ಮೋಶೆಯು ಅವನ ಮೂಳೆಗಳನ್ನು ತನ್ನ ಸಂಗಡ ತೆಗೆದುಕೊಂಡು ಹೋದನು. 20ಅವರು ಸುಕ್ಕೋತಿನಿಂದ ಪ್ರಯಾಣ ಮಾಡಿ ಮರಳುಗಾಡಿನ ಅಂಚಿನಲ್ಲಿರುವ ಏತಾಮಿನಲ್ಲಿ ಪಾಳೆಯಮಾಡಿ ಇಳಿದುಕೊಂಡರು.
21ಯೆಹೋವನು ಹಗಲು ಹೊತ್ತಿನಲ್ಲಿ ದಾರಿತೋರಿಸುವುದಕ್ಕೆ ಮೇಘಸ್ತಂಭದಲ್ಲಿಯೂ, ರಾತ್ರಿವೇಳೆಯಲ್ಲಿ ಬೆಳಕುಕೊಡುವುದಕ್ಕೆ ಅಗ್ನಿಸ್ತಂಭದಲ್ಲಿಯೂ ಇದ್ದು ಅವನ್ನು ನಡೆಸುತಿದ್ದನು. ಈ ರೀತಿಯಲ್ಲಿ ಅವರು ಹಗಲಿರುಳು ಪ್ರಯಾಣಮಾಡಿದರು. 22ಹಗಲಿನಲ್ಲಿ ಮೇಘಸ್ತಂಭವಾಗಿ, ರಾತ್ರಿಯಲ್ಲಿ ಅಗ್ನಿಸ್ತಂಭವಾಗಿ ಜನರನ್ನು ಬಿಟ್ಟು ಹೋಗದೆ ಅಲ್ಲಿಯೇ ಇರುತ್ತಿದ್ದನು.
Currently Selected:
ವಿಮೋ 13: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.