ಎಸ್ತೇ 6
6
ಮೊರ್ದೆಕೈಯನ್ನು ಸನ್ಮಾನಿಸಿದ ಅರಸನು
1ಆ ರಾತ್ರಿಯಲ್ಲಿ ಅರಸನಿಗೆ ನಿದ್ರೆಬರಲಿಲ್ಲ; ಆದುದರಿಂದ ಅವನು ಪೂರ್ವ ಘಟನೆಗಳ ಗ್ರಂಥವನ್ನು ತರಲು ಸೇವಕರಿಗೆ ಅಪ್ಪಣೆಮಾಡಿ ಅದನ್ನು ಪಾರಾಯಣಮಾಡಿಸುತ್ತಿದ್ದನು. 2ಅಹಷ್ವೇರೋಷ್ ರಾಜನನ್ನು ಕೊಲ್ಲಬೇಕೆಂದು ದ್ವಾರಪಾಲಕರಾದ ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರೂ ರಾಜಕಂಚುಕಿಗಳು ಒಳಸಂಚುಮಾಡಿದ ಸಂಗತಿಯೂ ಅದು ಮೊರ್ದೆಕೈ ಮುಖಾಂತರ ಬಯಲಿಗೆ ಬಂದ ಸಂಗತಿಯೂ ಅದರಲ್ಲಿ ಬರೆಯಲಾಗಿತ್ತು. 3ಆಗ ಅರಸನು, “ಇದಕ್ಕಾಗಿ ಮೊರ್ದೆಕೈಗೆ ಯಾವ ಸ್ಥಾನಮಾನಗಳು ದೊರಕಿದವು?” ಎಂದು ವಿಚಾರಿಸಿದಾಗ ಅವನ ಸಾನ್ನಿಧ್ಯಸೇವಕರಾದ ಪರಿವಾರದವರು, “ಏನೂ ದೊರಕಲಿಲ್ಲ” ಎಂದು ಹೇಳಿದರು. 4ಅರಸನು, “ಪ್ರಾಕಾರದಲ್ಲಿ ಯಾರಿದ್ದಾರೆ?” ಎಂದು ಕೇಳಿದನು. ಅಷ್ಟರಲ್ಲಿ ಹಾಮಾನನು ತಾನು ಸಿದ್ಧಮಾಡಿಸಿದ ಗಲ್ಲಿಗೆ ಮೊರ್ದೆಕೈಯನ್ನು ನೇತುಹಾಕಿಸುವುದಕ್ಕೆ ಅರಸನ ಅಪ್ಪಣೆ ಪಡೆದುಕೊಳ್ಳಬೇಕೆಂದು ಅರಮನೆಯ ಹೊರಗಣ ಪ್ರಾಕಾರದಲ್ಲಿ ಬಂದು ನಿಂತಿದ್ದನು. 5ಆಗ ರಾಜಸೇವಕರು, “ಇಗೋ, ಪ್ರಾಕಾರದಲ್ಲಿ ಹಾಮಾನನಿರುತ್ತಾನೆ” ಎಂದು ಬಿನ್ನವಿಸಿದರು. ಆಗ ಅರಸನು, “ಅವನು ಒಳಗೆ ಬರಲಿ” ಅಂದನು. 6ಹಾಮಾನನು ಬಂದಾಗ, “ಅರಸನು ಯಾರನ್ನಾದರು ಸನ್ಮಾನಿಸಬೇಕೆಂದು ಇಷ್ಟವುಳ್ಳವನಾಗಿದ್ದರೆ ಅಂಥವನಿಗೆ ಮಾಡಬೇಕಾದದ್ದೇನು?” ಎಂದು ಅವನನ್ನು ಕೇಳಿದನು. 7ಅದಕ್ಕೆ ಹಾಮಾನನು, “ಅರಸನು ನನ್ನನ್ನಲ್ಲದೆ ಇನ್ನಾರನ್ನು ಸನ್ಮಾನಿಸುವುದಕ್ಕೆ ಇಷ್ಟವುಳ್ಳವನಾಗಿರುವನು” ಅಂದುಕೊಂಡನು. 8ಅವನು ಅರಸನಿಗೆ, “ಯಾರನ್ನಾದರೂ ಸನ್ಮಾನಿಸಬೇಕೆಂದು ಅರಸನಿಗೆ ಇಷ್ಟವಿದ್ದರೆ ತಾನು ಧರಿಸಿಕೊಳ್ಳುವ ರಾಜ ವಸ್ತ್ರಗಳನ್ನೂ ಮತ್ತು ಸವಾರಿಮಾಡುವ ಪಟ್ಟದ ಕುದುರೆಯನ್ನೂ ತರಿಸಬೇಕು. 9ಆ ವಸ್ತ್ರಗಳನ್ನೂ ಕುದುರೆಯನ್ನೂ ಪ್ರಧಾನರಾದ ಅರಸನ ಸರದಾರರಲ್ಲೊಬ್ಬನ ವಶಕ್ಕೆ ಕೊಟ್ಟು, ಅರಸನು ಸನ್ಮಾನಿಸಬೇಕೆಂದಿರುವ ಪುರುಷನಿಗೆ ಆ ರಾಜವಸ್ತ್ರಗಳನ್ನು ಹಾಕಿಸಬೇಕು. ಅನಂತರ ಅವನನ್ನು ಆ ಕುದುರೆಯ ಮೇಲೆ ಕುಳ್ಳಿರಿಸಿ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾ ಅವನ ಮುಂದೆ, ‘ಅರಸನು ಸನ್ಮಾನಿಸಬೇಕೆಂದಿರುವವನನ್ನು ಗೌರವಿಸುವ ರೀತಿಯು ಇದೇ’ ಎಂದು ಪ್ರಕಟಣೆ ಮಾಡಿಸಬೇಕು” ಎಂದು ಹೇಳಿದನು. 10ಕೂಡಲೆ ಅರಸನು ಹಾಮಾನನಿಗೆ, “ನೀನು ಹೇಳಿದ ವಸ್ತ್ರಗಳನ್ನೂ ಮತ್ತು ಕುದುರೆಯನ್ನೂ ಬೇಗನೆ ತೆಗೆದುಕೊಂಡು ಬಂದು ಅರಮನೆಯ ಬಾಗಿಲಿನಲ್ಲಿ ಕುಳಿತುಕೊಂಡಿರುವ ಮೊರ್ದೆಕೈ ಎಂಬ ಯೆಹೂದ್ಯನಿಗೆ ಹಾಗೆಯೇ ಮಾಡು; ನೀನು ಹೇಳಿದವುಗಳಲ್ಲಿ ಒಂದನ್ನೂ ನೆರವೇರಿಸದೆ ಬಿಡಬೇಡ” ಎಂದು ಅಪ್ಪಣೆಮಾಡಿದನು. 11ಹಾಮಾನನು ಆ ವಸ್ತ್ರಗಳನ್ನೂ ಮತ್ತು ಕುದುರೆಯನ್ನೂ ತೆಗೆದುಕೊಂಡು ಬಂದು, ಮೊರ್ದೆಕೈಯನ್ನು ಭೂಷಿಸಿ, ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ, ಅವನ ಮುಂದೆ, “ಅರಸನು ಸನ್ಮಾನಿಸಬೇಕೆಂದಿರುವವನನ್ನು ಗೌರವಿಸುವ ರೀತಿಯು ಇದೇ” ಎಂದು ಪ್ರಕಟಣೆಮಾಡಿಸಿದನು.
12ಮೊರ್ದೆಕೈಯು ಹಿಂತಿರುಗಿ ಅರಮನೆಯ ಬಾಗಿಲಿಗೆ ಹೋದನು. ಹಾಮಾನನಾದರೋ ದುಃಖದಿಂದ ಮುಖವನ್ನು ಮುಚ್ಚಿಕೊಂಡು ಶೀಘ್ರವಾಗಿ ಮನೆಗೆ ಹೋಗಿ ತನ್ನ ಹೆಂಡತಿಯಾದ ಜೆರೆಷಳ ಮತ್ತು ಎಲ್ಲಾ ಆಪ್ತರ ಮುಂದೆ ತನಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದನು. 13ಆಗ ಅವನ ಪಂಡಿತರೂ ಮತ್ತು ಹೆಂಡತಿಯೂ ಅವನಿಗೆ, “ಯಾವನ ಮುಂದೆ ನಿನ್ನ ಸೋಲು ಪ್ರಾರಂಭವಾಯಿತೋ ಆ ಮನುಷ್ಯನು ಯೆಹೂದ ಸಂತಾನದವನಾಗಿದ್ದರೆ ನೀನು ಗೆಲ್ಲಲಾರಿ, ಅವನ ಮುಂದೆ ಬಿದ್ದು ಹಾಳಾಗುವಿ” ಅಂದರು. 14ಅವರು ಇನ್ನೂ ಅವನೊಡನೆ ಮಾತನಾಡುತ್ತಿರುವಾಗಲೇ ರಾಜಕಂಚುಕಿಗಳು ಬಂದು ಎಸ್ತೇರಳು ಮಾಡಿಸಿರುವ ಔತಣಕ್ಕೆ ಬೇಗ ಬರಬೇಕೆಂದು ಹಾಮಾನನನ್ನು ಕರೆದೊಯ್ದರು.
Currently Selected:
ಎಸ್ತೇ 6: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.