ಎಸ್ತೇ 3
3
ಪ್ರಧಾನಮಂತ್ರಿಯಾದ ಹಾಮಾನನು
1ಇದಾದನಂತರ ಅರಸನಾದ ಅಹಷ್ವೇರೋಷನು ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನನ್ನು ಪದವಿಯಲ್ಲಿ ಹೆಚ್ಚಿಸಿ, ಅವನಿಗೆ ದೊಡ್ಡ ಅಧಿಕಾರವನ್ನು ಕೊಟ್ಟು, ತನ್ನ ಆಸ್ಥಾನದ ಎಲ್ಲಾ ಸರದಾರರಲ್ಲಿ ಅವನಿಗೆ ಪ್ರಥಮ ಸ್ಥಾನವನ್ನು ಅನುಗ್ರಹಿಸಿದನು. 2ರಾಜನ ಅರಮನೆಯಲ್ಲಿದ್ದ ಸೇವಕರೆಲ್ಲರೂ ಹಾಮಾನನಿಗೆ ಸಾಷ್ಟಾಂಗನಮಸ್ಕಾರ ಮಾಡುತ್ತಿದ್ದರು; ಆದರೆ ಮೊರ್ದೆಕೈಯು ಅವನಿಗೆ ಸಾಷ್ಟಾಂಗನಮಸ್ಕಾರ ಮಾಡುತ್ತಿರಲಿಲ್ಲ. 3ಅರಮನೆಯ ದ್ವಾರಪಾಲಕರು ಮೊರ್ದೆಕೈಗೆ, “ನೀನು ರಾಜಾಜ್ಞೆಯನ್ನು ಮೀರುವುದೇಕೆ?” ಎಂದು ಪ್ರತಿದಿನ ಅವನನ್ನು ಎಚ್ಚರಿಸುತ್ತಿದ್ದರು. 4ಮೊರ್ದೆಕೈಯು ತಾನು ಯೆಹೂದ್ಯನೆನ್ನುವ ಹೆಮ್ಮೆಯ ಹಾಗೂ ಮಾನವನಿಗೆ ಸಾಷ್ಟಾಂಗನಮಸ್ಕಾರ ಮಾಡುವುದಿಲ್ಲ ಎಂಬ ಅವನ ಹಟ ಸಾಗುವುದೇನೋ ನೋಡೋಣ ಎಂದುಕೊಂಡು ಅವರು ಅದನ್ನು ಹಾಮಾನನಿಗೆ ತಿಳಿಸಿದರು.
ಯೆಹೂದ್ಯರನ್ನು ಸಂಹರಿಸಬೇಕೆಂಬ ರಾಜಾಜ್ಞೆ
5ಮೊರ್ದೆಕೈಯು ತನಗೆ ಸಾಷ್ಟಾಂಗನಮಸ್ಕಾರ ಮಾಡುತ್ತಿಲ್ಲವೆಂದು ತಿಳಿದ ಹಾಮಾನನು ಬಹಳ ಕೋಪಗೊಂಡನು. 6ಅವನು ಮೊರ್ದೆಕೈಯೊಬ್ಬನ ಮೇಲೆಯೇ ಕೈಯೆತ್ತುವುದು ಸಾಲದೆಂದೆಣಿಸಿ, ಇವನು ಯೆಹೂದ ಜನಾಂಗದವನೆಂದು ಕೇಳಿದ ಮೇಲೆ ಅಹಷ್ವೇರೋಷನ ರಾಜ್ಯದಲ್ಲಿದ್ದ ಮೊರ್ದೆಕೈಯ ಬಂಧುಬಳಗದವರನ್ನು ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಬೇಕೆಂದು ನಿರ್ಣಯಿಸಿಕೊಂಡನು. 7ಅರಸನಾದ ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ತಿಂಗಳಾದ ಚೈತ್ರಮಾಸದಲ್ಲಿ ಹಾಮಾನನ ಮುಂದೆ ಶುಭ ಮಾಸವು ಮತ್ತು ಶುಭದಿನವು ಯಾವುದೆಂದು ತಿಳಿದುಕೊಳ್ಳುವುದಕ್ಕೆ#3:7 ಶುಭ ಮಾಸವು ಮತ್ತು ಶುಭದಿನವು ಯಾವುದೆಂದು ತಿಳಿದುಕೊಳ್ಳುವುದಕ್ಕೆ ಅಥವಾ ತನ್ನ ಒಳಸಂಚನ್ನು ಕೈಗೊಳ್ಳಲು ಸರಿಯಾದ ದಿನ ಮತ್ತು ತಿಂಗಳನ್ನು ಕಂಡುಹಿಡಿಯಲು. “ಪೂರ್” ಅಂದರೆ ಚೀಟನ್ನು ಹಾಕಿದರು. ಚೀಟು ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನಕ್ಕೆ ಬಿತ್ತು. 8ಹಾಮಾನನು ಅರಸನಾದ ಅಹಷ್ವೇರೋಷನಿಗೆ, “ನಿನ್ನ ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ಒಂದು ಜನಾಂಗವಿರುತ್ತದೆ; ಅದು ಇತರ ಜನಾಂಗಗಳವರ ಮಧ್ಯದಲ್ಲಿ ಹರಡಿದ್ದರೂ ಎಲ್ಲರಿಂದ ಪ್ರತ್ಯೇಕವಾಗಿಯೇ ಇರುತ್ತದೆ. ಆ ಜನಾಂಗಗಳವರ ನಿಯಮಗಳು ಇತರ ಎಲ್ಲಾ ಜನಾಂಗಗಳವರ ನಿಯಮಗಳಿಗಿಂತ ಭಿನ್ನವಾಗಿರುತ್ತವೆ. ಅರಸನ ನಿಯಮಗಳನ್ನಂತೂ ಅವರು ಅನುಸರಿಸುವುದೇ ಇಲ್ಲ, ಅರಸನು ಅವರನ್ನು ಸುಮ್ಮನೆ ಬಿಡುವುದು ಉಚಿತವಲ್ಲ. 9ಅರಸನ ಚಿತ್ತವಾದರೆ ಅವರನ್ನು ಸಂಹರಿಸಬೇಕು ಎಂಬ ಆಜ್ಞೆಯು ಹೊರಡಲಿ; ಹಾಗೆ ಮಾಡಿದರೆ ನಾನು ರಾಜಭಂಡಾರಕ್ಕಾಗಿ ಹತ್ತು ಸಾವಿರ ತಲಾಂತು ಬೆಳ್ಳಿಯನ್ನು #3:9 ಹತ್ತು ಸಾವಿರ ತಲಾಂತು ಬೆಳ್ಳಿಯನ್ನು 3,400 ಕಿಲೋಗ್ರಾಂ.ತೂಕ ಮಾಡಿ ಉದ್ಯೋಗಸ್ಥರ ಕೈಗೆ ಒಪ್ಪಿಸುವೆನು” ಎಂದು ಹೇಳಿದನು. 10ಆಗ ಅರಸನು ತನ್ನ ಕೈಯಲ್ಲಿದ್ದ ಮುದ್ರೆಯುಂಗುರವನ್ನು ತೆಗೆದು ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಯೆಹೂದ್ಯರ ದ್ವೇಷಿಯೂ ಆದ ಹಾಮಾನನಿಗೆ ಒಪ್ಪಿಸಿದನು. 11ಅರಸನು ಹಾಮಾನನಿಗೆ ಕೊಟ್ಟು, “ಆ ಬೆಳ್ಳಿ ನಿನ್ನಲ್ಲೇ ಇರಲಿ; ನೀನು ಆ ಜನರನ್ನು ಏನು ಬೇಕಾದರೂ ಮಾಡಬಹುದು” ಎಂದು ಹೇಳಿದನು.
12ಮೊದಲನೆಯ ತಿಂಗಳಿನ ಹದಿಮೂರನೆಯ ದಿನದಲ್ಲಿ ರಾಜಲೇಖಕರು ಕೂಡಿ ಬರಬೇಕು ಎಂದು ಅಪ್ಪಣೆಯಾಯಿತು. ಅವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ, ಆಯಾ ಸಂಸ್ಥಾನಗಳ ಅಧಿಕಾರಿಗಳಿಗೂ, ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಬರೆದರು. ಆಯಾ ಸಂಸ್ಥಾನಗಳ ಬರಹದಲ್ಲಿಯೂ ಆಯಾ ಜನಾಂಗಗಳ ಭಾಷೆಯಲ್ಲಿಯೂ ಇದ್ದ ಆ ಪತ್ರಗಳು ಅರಸನಾದ ಅಹಷ್ವೇರೋಷನ ಹೆಸರಿನಲ್ಲೇ ಲಿಖಿತವಾಗಿದ್ದವು; ಅವುಗಳಿಗೆ ರಾಜಮುದ್ರೆಯನ್ನು ಹಾಕಲಾಗಿತ್ತು. 13ಪತ್ರಗಳು ಅಂಚೆಯವರ ಮುಖಾಂತರ ಎಲ್ಲಾ ರಾಜಸಂಸ್ಥಾನಗಳಿಗೆ ಕಳುಹಿಸಲ್ಪಟ್ಟವು. ಅವುಗಳಲ್ಲಿ, “ಒಂದೇ ದಿನದಲ್ಲಿ ಅಂದರೆ ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ ಹುಡುಗರು, ಹಿರಿಯರು, ಹೆಂಗಸರು, ಮಕ್ಕಳು ಎಂದು ನೋಡದೆ ಎಲ್ಲಾ ಯೆಹೂದ್ಯರನ್ನು ಕೊಲ್ಲಿರಿ, ಸಂಹರಿಸಿರಿ, ನಿರ್ನಾಮಗೊಳಿಸಿರಿ. ಅವರ ಸೊತ್ತನ್ನು ಸೂರೆಮಾಡಿರಿ” ಎಂದೂ ಬರೆದಿತ್ತು. 14ಅದು ಮಾತ್ರವಲ್ಲದೆ, “ಈ ಪತ್ರದ ಒಂದೊಂದು ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಹೊರಡಿಸಿ ಎಲ್ಲರೂ ಆ ದಿನದಲ್ಲಿ ಸಿದ್ಧರಾಗಿರುವ ಹಾಗೆ ಎಲ್ಲಾ ಜನರಿಗೆ ತಿಳಿಯುವಂತೆ ಪ್ರಕಟಿಸಬೇಕು” ಎಂದು ಬರೆಯಲಾಗಿತ್ತು. 15ಈ ನಿರ್ಣಯವು ಶೂಷನ್ ಅರಮನೆಯಲ್ಲಿ ಪ್ರಕಟವಾದ ಕೂಡಲೇ ಅಂಚೆಯವರು ರಾಜಾಜ್ಞೆಯ ಮೇರೆಗೆ ಶೀಘ್ರವಾಗಿ ಹೊರಟರು. ಅರಸನಾದರೋ ಹಾಮಾನನನೊಡನೆ ಮದ್ಯಪಾನ ಮಾಡುವುದಕ್ಕೆ ಕುಳಿತುಕೊಂಡನು. ಅತ್ತ ಶೂಷನ್ ಪಟ್ಟಣದಲ್ಲಿ ತಳಮಳ ಉಂಟಾಯಿತು.
Currently Selected:
ಎಸ್ತೇ 3: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.