ಪ್ರಸ 10
10
1ಸತ್ತ ನೊಣಗಳಿಂದ ಗಂಧದತೈಲವು ಕೊಳೆತು ನಾರುವುದು.
ಹಾಗೆಯೇ ಸ್ವಲ್ಪ ಹುಚ್ಚುತನವು ಜ್ಞಾನ ಮತ್ತು ಘನತೆಗಳನ್ನು ಕೆಡಿಸುತ್ತದೆ.
2ಜ್ಞಾನಿಯ ಬುದ್ಧಿಯು ಅವನ ಬಲಗಡೆಯಿರುವುದು.
ಅಜ್ಞಾನಿಯ ಬುದ್ಧಿಯು ಅವನ ಎಡಗಡೆಯಿರುವುದು.
3ಇದಲ್ಲದೆ ಹುಚ್ಚನು ಬುದ್ಧಿತಪ್ಪಿ ತಿರುಗುವ
ದಾರಿಯಲ್ಲಿ ತನ್ನ ಹುಚ್ಚುತನವನ್ನು
ಎಲ್ಲರಿಗೆ ಪ್ರಕಟಮಾಡುವನು.
4ದೊರೆಯು ನಿನ್ನ ಮೇಲೆ ಸಿಟ್ಟುಗೊಂಡರೆ ಉದ್ಯೋಗವನ್ನು ಬಿಡಬೇಡ.
ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ.#10:4 ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ ಅಥವಾ ನೀನು ಶಾಂತನಾಗಿರುವಾಗ ದೊಡ್ಡ ದೋಷಗಳು ಕ್ಷಮಿಸಲ್ಪಡುತ್ತವೆ ಅಥವಾ ನಿನ್ನ ದೋಷಗಳನ್ನು ಅವನಿಗೆ ಒಪ್ಪಿಸಿಕೊಡು.
5ಲೋಕದಲ್ಲಿ ಒಂದು ಸಂಕಟವನ್ನು ಕಂಡಿದ್ದೇನೆ.
ಅದು ಆಳುವವನ ಸಮ್ಮುಖದಿಂದ ಹೊರಟುಬರುವ ಹಾಗೆಯೇ ತೋರುತ್ತದೆ.
6ಮೂಢರಿಗೆ ಮಹಾ ಪದವಿ ದೊರೆಯುವುದು.
ಘನವಂತರೂ ಹೀನಸ್ಥಿತಿಯಲ್ಲಿರುವರು.
7ಆಳುಗಳು ಕುದುರೆ ಸವಾರಿ ಮಾಡುವುದನ್ನೂ,
ಪ್ರಭುಗಳು ಆಳುಗಳಂತೆ ನೆಲದ ಮೇಲೆ ನಡೆಯುವುದನ್ನೂ ನೋಡಿದ್ದೇನೆ.
8ಗುಂಡಿಯನ್ನು ತೋಡುವವನು
ತಾನೇ ಅದರಲ್ಲಿ ಬೀಳುವನು, ಗೋಡೆಯನ್ನು ಒಡೆಯುವವನಿಗೆ,
ಹಾವು ಕಚ್ಚುವುದು.
9ಯಾವನು ಕಲ್ಲುಗಳನ್ನು ಕೀಳುವನೋ
ಅವನಿಗೆ ಹಾನಿ ಆಗುವುದು.
ಮರವನ್ನು ಕಡೆಯುವವನಿಗೆ
ಅಪಾಯವಿದೆ.
10ಮೊಂಡು ಕೊಡಲಿಯ ಬಾಯಿಯನ್ನು ಮಸೆಯದಿದ್ದರೆ ಅವನು ಹೆಚ್ಚು ಬಲವನ್ನು ಪ್ರಯೋಗಿಸಬೇಕು. ಕಾರ್ಯಸಿದ್ಧಿಗೆ ಜ್ಞಾನವೇ ಸಾಧನ.
11ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ,
ಹಾವಾಡಿಗನಿಗೆ ಯಾವ ಪ್ರಯೋಜನವೂ ಇಲ್ಲ.
12ಜ್ಞಾನಿಯ ಮಾತು ಹಿತ.
ಅಜ್ಞಾನಿಯ ಬಾಯಿ ತನ್ನನ್ನೇ ನುಂಗಿಬಿಡುವುದು.
13ಅಜ್ಞಾನಿಯ ಮಾತುಗಳು ಆರಂಭದಲ್ಲಿ ಬುದ್ಧಿಹೀನತೆ,
ಅಂತ್ಯದಲ್ಲಿ ಅಪಾಯದ ಮರಳುತನ.
14ಮನುಷ್ಯನು ಮುಂದೆ ಆಗುವುದನ್ನು ತಿಳಿಯನು.
ತಾನು ಕಾಲವಾದ ಮೇಲೆ ಹೀಗೆಯೇ ಆಗುವುದೆಂದು ಅವನು ಯಾರಿಂದ ತಿಳಿದುಕೊಂಡಾನು?
ಅಜ್ಞಾನಿಯ ಮಾತುಗಳೋ ಬಹಳ.
15ಪಟ್ಟಣದ ದಾರಿ ತಿಳಿಯದವನಿಗೆ ಮೂಢರು ತಿಳಿಸಲು,
ಪಡುವ ಪ್ರಯಾಸದಿಂದ ಆಯಾಸವೇ.
16ದೇಶದ ಅರಸನು ಯುವಕನಾಗಿದ್ದರೆ,#10:16 ಯುವಕನಾಗಿದ್ದರೆ, ಅಥವಾ ಸೇವಕನಾಗಿದ್ದರೆ.
ಪ್ರಭುಗಳು ಹೊತ್ತಾರೆ ಔತಣಕ್ಕೆ ಕುಳಿತುಕೊಂಡರೆ ನಿನಗೆ ದೌರ್ಭಾಗ್ಯವೇ!
17ದೇಶದ ಅರಸನು ಕುಲೀನನಾಗಿದ್ದರೆ,
ಪ್ರಭುಗಳು ಅಮಲಿಗಾಗಿ ಅಲ್ಲ,
ಆದರೆ ಶಕ್ತಿಗಾಗಿ ಸಕಾಲದಲ್ಲಿ ಊಟಕ್ಕೆ ಕುಳಿತರೆ
ನಿನಗೆ ಭಾಗ್ಯವೇ!
18ಸೋಮಾರಿತನದಿಂದ ತೊಲೆಗಳು ಬೊಗ್ಗುವವು.
ಜೋಲುಗೈಯಿಂದ ಮನೆ ಸೋರುವುದು.
19ನಗುವಿಗಾಗಿ ಔತಣವು,
ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು,
ಧನವು ಎಲ್ಲವನ್ನೂ ಒದಗಿಸಿಕೊಡುವುದು.
20ಮನಸ್ಸಿನಲ್ಲಿಯೂ ಅರಸನನ್ನು ದೂಷಿಸದಿರು.
ಮಲಗುವ ಕೋಣೆಯಲ್ಲಿಯೂ ಧನಿಕನನ್ನು ಬಯ್ಯದಿರು.
ಆಕಾಶದ ಹಕ್ಕಿಯು ಆ ಶಬ್ದವನ್ನು ಮುಟ್ಟಿಸುವವು;
ಪಕ್ಷಿಯು ಆ ವಿಷಯವನ್ನು ತಿಳಿಸುವುದು.
Currently Selected:
ಪ್ರಸ 10: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.