YouVersion Logo
Search Icon

ಆಮೋ 7

7
ಮಿಡತೆಯ ದರ್ಶನ
1ಕರ್ತನಾದ ಯೆಹೋವನು ಇದನ್ನು ನನಗೆ ತೋರಿಸಿದನು. ಹಿಂಗಾರು ಮಳೆಬಿದ್ದು ಪೈರು ಸೊಂಪಾಗುವುದಕ್ಕೆ ಆರಂಭವಾದಾಗ ಅಂದರೆ ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಯೆಹೋವನು ಮಿಡತೆಗಳನ್ನು ಉಂಟುಮಾಡಿದನು. 2ಅವು ದೇಶದ ಹುಲ್ಲನ್ನೆಲ್ಲಾ ತಿಂದುಬಿಟ್ಟ ಮೇಲೆ ನಾನು, “ಕರ್ತನಾದ ಯೆಹೋವನೇ, ಲಾಲಿಸು, ನನ್ನನ್ನು ಕ್ಷಮಿಸು. ಯಾಕೋಬ ಜನಾಂಗವು ಹೇಗೆ ಉಳಿಯುವುದು? ಏಕೆಂದರೆ ಅದು ಚಿಕ್ಕದಾದ ಜನಾಂಗ” ಎಂದು ವಿಜ್ಞಾಪಿಸಿಕೊಂಡೆನು. 3ಯೆಹೋವನು ಮನಮರುಗಿ, “ಈ ದರ್ಶನವು ನೆರವೇರುವುದಿಲ್ಲ” ಎಂದನು.
ಕ್ಷಾಮದ ದರ್ಶನ
4ಕರ್ತನಾದ ಯೆಹೋವನು ಇನ್ನೊಂದು ದರ್ಶನವನ್ನು ನನಗೆ ತೋರಿಸಿದನು. ಇಗೋ, ಕರ್ತನಾದ ಯೆಹೋವನು ತನ್ನ ಜನರನ್ನು ದಂಡಿಸುವುದಕ್ಕಾಗಿ ಅಗ್ನಿಯನ್ನು ಕರೆದನು. ಅದು ಮಹಾ ಸಾಗರವನ್ನು ನುಂಗಿ ದೇಶವನ್ನೂ ತಿಂದುಬಿಟ್ಟಿತು. 5ಆಗ ನಾನು, “ಕರ್ತನಾದ ಯೆಹೋವನೇ, ಲಾಲಿಸು. ಇದನ್ನು ನಿಲ್ಲಿಸಿಬಿಡು. ಯಾಕೋಬ ಜನಾಂಗ ಹೇಗೆ ಉಳಿಯುವುದು? ಏಕೆಂದರೆ ಅದು ಚಿಕ್ಕದಾದ ಜನಾಂಗವಾಗಿದೆ” ಎಂದು ಆಜ್ಞಾಪಿಸಲು 6ಕರ್ತನಾದ ಯೆಹೋವನು ಮನಮರುಗಿ, “ಈ ದರ್ಶನವು ನೆರವೇರುವುದಿಲ್ಲ” ಎಂದನು.
ನೂಲುಗುಂಡಿನ ದರ್ಶನ
7ಕರ್ತನು ಮತ್ತೊಂದು ದರ್ಶನವನ್ನು ನನಗೆ ತೋರಿಸಿದನು. ಇಗೋ, ಯೆಹೋವನು ನೂಲುಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದನು. ಆತನ ಕೈಯಲ್ಲಿ ನೂಲುಗುಂಡಿತ್ತು. 8ಯೆಹೋವನು ನನಗೆ, “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಲು ನಾನು, “ಒಂದು ನೂಲುಗುಂಡು” ಎಂದು ಉತ್ತರ ಕೊಟ್ಟೆನು. ಆಗ ಕರ್ತನು, “ಇಗೋ, ನನ್ನ ಜನರಾದ ಇಸ್ರಾಯೇಲಿನ ಮಧ್ಯದಲ್ಲಿ ನೂಲುಗುಂಡನ್ನು ಇಡುತ್ತೇನೆ. ಇನ್ನು ಅವರನ್ನು ಕಂಡುಕಾಣದಂತೆ ದಂಡಿಸುವೆನು.
9ಇಸಾಕನ ವಂಶದವರ ಪೂಜಾಸ್ಥಳಗಳು ಹಾಳಾಗುವವು,
ಇಸ್ರಾಯೇಲಿನ ಪವಿತ್ರಾಲಯಗಳು ಪಾಳುಬೀಳುವವು,
ಮತ್ತು ನಾನು ಕತ್ತಿ ಹಿಡಿದು ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು” ಅಂದನು.
ಆಮೋಸನು ಯಾಜಕನನ್ನು ಮುಖಾಮುಖಿಯಾಗಿ ಎದುರಿಸಿದ್ದು
10ಆಗ ಬೇತೇಲಿನ ಯಾಜಕನಾದ ಅಮಚ್ಯನು, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ, “ಆಮೋಸನು ಇಸ್ರಾಯೇಲರ ಮಧ್ಯದಲ್ಲಿ ನಿನ್ನ ಮೇಲೆ ಒಳಸಂಚು ಮಾಡಿದ್ದಾನೆ. ದೇಶವು ಅವನ ವಿಪರೀತವಾದ ಮಾತುಗಳನ್ನು ತಾಳಲಾರದು” ಅಂದನು. 11ಅದಕ್ಕೆ ಆಮೋಸನು,
“ಯಾರೊಬ್ಬಾಮನು ಖಡ್ಗದಿಂದ ಹತನಾಗುವನು.
ಇಸ್ರಾಯೇಲರು ಖಂಡಿತವಾಗಿ ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವರು” ಎಂದು ಹೇಳಿಕಳುಹಿಸಿದನು.
12ಅನಂತರ ಅಮಚ್ಯನು ಆಮೋಸನಿಗೆ, “ಕಣಿ ಹೇಳುವವನೇ, ಯೆಹೂದ ದೇಶಕ್ಕೆ ಓಡಿಹೋಗು. ಅಲ್ಲಿಯೇ ರೊಟ್ಟಿತಿಂದು ಪ್ರವಾದಿಸು. 13ಆದರೆ ಬೇತೇಲಿನಲ್ಲಿ ಇನ್ನು ಪ್ರವಾದನೆ ಮಾಡಬೇಡ. ಇದು ರಾಜಕೀಯ ಪವಿತ್ರಾಲಯ, ಇದು ಅರಮನೆ#7:13 ಅರಮನೆ ದೇವಾಲಯ.” ಎಂದು ಹೇಳಿದನು.
14ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ, “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ಆದರೆ ನಾನು ಕುರುಬನು, ಅತ್ತಿಹಣ್ಣುಗಳನ್ನು ಕೂಡಿಸುವವನೂ#7:14 ಕೂಡಿಸುವವನೂ ನೋಡಿಕೊಳ್ಳುವವನು. ಆಗಿದ್ದೇನೆ. 15ಯೆಹೋವನು ನನ್ನನ್ನು ಮಂದೆ ಕಾಯುವವರಿಂದ ತಪ್ಪಿಸಿ, ‘ನೀನು ಹೋಗಿ ನನ್ನ ಜನರಾದ ಇಸ್ರಾಯೇಲರಿಗೆ ಪ್ರವಾದನೆ ಮಾಡು’ ಎಂದು ನನಗೆ ಅಪ್ಪಣೆ ಕೊಟ್ಟನು.
16“ಈಗ ಯೆಹೋವನ ವಾಕ್ಯವನ್ನು ಕೇಳು ‘ಇಸ್ರಾಯೇಲರಿಗೆ ವಿರುದ್ಧವಾಗಿ ಪ್ರವಾದನೆಮಾಡಬೇಡ. ಇಸಾಕನ ವಂಶಕ್ಕೆ ಖಂಡನೆಯಾಗಿ ಬಾಯಿ ಎತ್ತಬೇಡ’ ಎಂದು ನಿನಗೆ ಹೇಳಿದ ಕಾರಣ ಯೆಹೋವನು ಇಂತೆನ್ನುತ್ತಾನೆ,
17‘ನಿನ್ನ ಹೆಂಡತಿಯು ಈ ಪಟ್ಟಣದಲ್ಲಿ ಸೂಳೆಯಾಗುವಳು;
ನಿನ್ನ ಗಂಡು ಮತ್ತು ಹೆಣ್ಣು ಮಕ್ಕಳು ಖಡ್ಗದಿಂದ ಹತರಾಗುವರು;
ನಿನ್ನ ದೇಶವನ್ನು ಶತ್ರುಗಳು ನೂಲಿನಿಂದ ವಿಭಾಗಿಸಿಕೊಳ್ಳುವರು;
ನೀನಂತೂ ಅಜ್ಞಾತವಾದ#7:17 ಅಜ್ಞಾತವಾದ ಅಥವಾ ಅಪವಿತ್ರವಾದ ದೇಶದಲ್ಲಿ ಸಾಯುವಿ,
ಇಸ್ರಾಯೇಲರು ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವುದು ಖಂಡಿತ’” ಎಂಬುದಾಗಿ ಯೆಹೋವನು ಹೇಳಿದನು.

Currently Selected:

ಆಮೋ 7: IRVKan

Highlight

Share

Copy

None

Want to have your highlights saved across all your devices? Sign up or sign in