ಯೋಹಾನ 6:5-14
ಯೋಹಾನ 6:5-14 KANJV-BSI
ಹೀಗಿರಲಾಗಿ ಯೇಸು ಕಣ್ಣೆತ್ತಿ ನೋಡಿದಾಗ ಬಹು ಜನರ ಗುಂಪು ತನ್ನ ಬಳಿಗೆ ಬರುವದನ್ನು ಕಂಡು - ಇವರ ಊಟಕ್ಕೆ ನಾವು ಎಲ್ಲಿಂದ ರೊಟ್ಟಿ ಕೊಂಡುತರೋಣ? ಎಂದು ಫಿಲಿಪ್ಪನನ್ನು ಕೇಳಿದನು. ತಾನು ಮಾಡಬೇಕೆಂದಿದ್ದದ್ದು ತನಗೆ ತಿಳಿದಿದ್ದರೂ ಅವನನ್ನು ಪರೀಕ್ಷಿಸುವದಕ್ಕೆ ಈ ಮಾತನ್ನು ಹೇಳಿದನು. ಅದಕ್ಕೆ ಫಿಲಿಪ್ಪನು - ಒಬ್ಬೊಬ್ಬನಿಗೆ ಸ್ವಲ್ಪ ಸ್ವಲ್ಪ ಸಿಕ್ಕಬೇಕಾದರೆ ಇನ್ನೂರು ಹಣದ ರೊಟ್ಟಿಯಾದರೂ ಸಾಲದು ಅಂದನು. ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ಪೇತ್ರನ ತಮ್ಮನಾದ ಅಂದ್ರೆಯನು ಆತನಿಗೆ - ಇಲ್ಲಿರುವ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಮೀನುಗಳೂ ಅವೆ; ಆದರೆ ಇಷ್ಟು ಜನರಿಗೆ ಅವು ಯಾತಕ್ಕಾದಾವು? ಎಂದು ಹೇಳಲಾಗಿ ಯೇಸು - ಆ ಜನರನ್ನು ಊಟಕ್ಕೆ ಕೂಡ್ರಿಸಿರಿ ಅಂದನು. ಆ ಸ್ಥಳದಲ್ಲಿ ಬಹಳ ಹುಲ್ಲು ಬೆಳೆದಿತ್ತು; ಜನರು ಕೂತುಕೊಂಡರು. ಗಂಡಸರ ಸಂಖ್ಯೆ ಹೆಚ್ಚುಕಡಿಮೆ ಐದು ಸಾವಿರವಿತ್ತು. ತರುವಾಯ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಕೂತುಕೊಂಡವರಿಗೆ ಹಂಚಿ ಕೊಟ್ಟನು; ಅದರಂತೆ ಮೀನುಗಳಲ್ಲಿಯೂ ಅವರಿಗೆ ಬೇಕಾದಷ್ಟು ಹಂಚಿಕೊಟ್ಟನು. ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ - ವಿುಕ್ಕತುಂಡುಗಳನ್ನು ಕೂಡಿಸಿರಿ; ಇದರಲ್ಲಿ ಯಾವದೂ ವ್ಯರ್ಥವಾಗಬಾರದು ಎಂದು ಹೇಳಿದನು. ಅವರು ಕೂಡಿಸಲಾಗಿ ಆ ಐದು ಜವೆಗೋದಿಯ ರೊಟ್ಟಿಗಳಲ್ಲಿ ಜನರು ತಿಂದು ವಿುಕ್ಕತುಂಡುಗಳಿಂದ ಹನ್ನೆರಡು ಪುಟ್ಟಿ ತುಂಬಿದವು. ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ - ಲೋಕಕ್ಕೆ ಬರಬೇಕಾದ ಪ್ರವಾದಿ ಈತನೇ ನಿಜ ಎಂದು ಹೇಳಿಕೊಂಡರು.