ಯೋಹಾನ 2:1-11
ಯೋಹಾನ 2:1-11 KANJV-BSI
ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆ ಆಯಿತು; ಯೇಸುವಿನ ತಾಯಿ ಅಲ್ಲಿ ಇದ್ದಳು; ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದರು. ದ್ರಾಕ್ಷಾರಸವು ಸಾಲದೆ ಹೋಗಲಾಗಿ ಯೇಸುವಿನ ತಾಯಿ ಆತನಿಗೆ - ಅವರಲ್ಲಿ ದ್ರಾಕ್ಷಾರಸವಿಲ್ಲ ಎಂದು ಹೇಳಿದಳು. ಯೇಸು ಆಕೆಗೆ - ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯವು ಇನ್ನೂ ಬಂದಿಲ್ಲ ಎಂದು ಹೇಳಲು ಆತನ ತಾಯಿಯು ಕೆಲಸದವರಿಗೆ - ಆತನು ನಿಮಗೆ ಏನು ಹೇಳುವನೋ ಅದನ್ನು ಮಾಡಿರಿ ಅಂದಳು. ಯೆಹೂದ್ಯರ ಶುದ್ಧಾಚಾರದ ಪದ್ಧತಿಯ ಪ್ರಕಾರ ಎರಡು ಮೂರು ಕೊಳಗ ನೀರು ಹಿಡಿಯುವ ಆರು ಕಲ್ಲಿನ ಬಾನೆಗಳು ಅಲ್ಲಿ ಇಟ್ಟಿದ್ದವು. ಯೇಸು ಅವರಿಗೆ - ಆ ಬಾನೆಗಳಲ್ಲಿ ನೀರು ತುಂಬಿರಿ ಅನ್ನಲು ಅವುಗಳನ್ನು ಕಂಠದ ಮಟ್ಟಿಗೆ ತುಂಬಿದರು. ಆಗ ಅವರಿಗೆ - ಈಗ ಅದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಿದಾಗ ತಕ್ಕೊಂಡು ಹೋಗಿ ಕೊಟ್ಟರು. ಅದು ಎಲ್ಲಿಂದ ಬಂತೋ ನೀರನ್ನು ತೋಡಿದ ಕೆಲಸದವರಿಗೆ ತಿಳಿದಿತ್ತೇ ಹೊರತು ಔತಣದ ಪಾರುಪತ್ಯಗಾರನಿಗೆ ತಿಳಿಯದಿರಲಾಗಿ ಅವನು ಅಷ್ಟರೊಳಗೆ ದ್ರಾಕ್ಷಾರಸವಾದ ಆ ನೀರನ್ನು ರುಚಿನೋಡಿದಾಗ ಮದಲಿಂಗನನ್ನು ಕರೆದು - ಎಲ್ಲರು ಹಿರಿದಿನ ದ್ರಾಕ್ಷಾರಸವನ್ನು ಮೊದಲುಕೊಟ್ಟು ಅಮಲೇರಿದ ಮೇಲೆ ಕಿರಿದಿನ ದ್ರಾಕ್ಷಾರಸವನ್ನು ಕೊಡುತ್ತಾರೆ; ನೀನು ಹಿರಿದಿನ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿದ್ದೀ ಅಂದನು. ಯೇಸು ಈ ಮೊದಲನೆಯ ಸೂಚಕಕಾರ್ಯವನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನಲ್ಲಿ ನಂಬಿಕೆಯಿಟ್ಟರು.