ಬೆಟ್ಟಗಳ ಮೇಲಕ್ಕೆ ಹೋಗಿ ಮರವನ್ನು ತಂದು ನನಗೆ ಆಲಯವನ್ನು ಕಟ್ಟಿರಿ. ಆಗ ನಾನು ನನ್ನ ನಿವಾಸದಲ್ಲಿ ಸಂತೋಷಿಸುವೆನು. ಆಗ ನಾನು ಗೌರವಿಸಲ್ಪಡುವೆನು.” ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.
ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ದೊಡ್ಡ ಸುಗ್ಗಿಯನ್ನು ಎದುರು ನೋಡುತ್ತಿದ್ದೀರಿ. ಆದರೆ ನೀವು ಪೈರು ಕೊಯ್ಯಲು ಹೋಗುವಾಗ ಸ್ಪಲ್ಪವೇ ಕಾಳು ಇರುವುದು. ಅದನ್ನು ನೀವು ಮನೆಗೆ ತಂದಾಗ ನಾನು ಗಾಳಿಯನ್ನು ಕಳುಹಿಸಿ ಅವುಗಳನ್ನು ಹಾರಿಸಿಬಿಡುವೆನು. ಹೀಗೆಲ್ಲಾ ಯಾಕೆ ಆಗುತ್ತಿದೆ? ಯಾಕೆಂದರೆ, ನನ್ನ ಆಲಯವು ಇನ್ನೂ ಹಾಳುಬಿದ್ದಿದ್ದರೂ ನೀವೆಲ್ಲರೂ ನಿಮ್ಮ ನಿಮ್ಮ ಮನೆಗಳನ್ನು ನೋಡಿಕೊಳ್ಳುವುದಕ್ಕಾಗಿ ಓಡಿಹೋಗುತ್ತೀರಿ.