ಪೇತ್ರನು, “ಅನನೀಯನೇ, ನಿನ್ನ ಹೃದಯವನ್ನು ಆಳಲು ನೀನು ಸೈತಾನನಿಗೆ ಒಪ್ಪಿಸಿಕೊಟ್ಟದ್ದೇಕೆ? ನೀನು ಸುಳ್ಳು ಹೇಳಿ, ಪವಿತ್ರಾತ್ಮನನ್ನು ಮೋಸಪಡಿಸಲು ಪ್ರಯತ್ನಿಸಿದೆ. ನೀನು ನಿನ್ನ ಜಮೀನನ್ನು ಮಾರಿದೆ, ಆದರೆ ಬಂದ ಹಣದಲ್ಲಿ ಒಂದು ಭಾಗವನ್ನು ನೀನು ನಿನಗೋಸ್ಕರ ಇಟ್ಟುಕೊಂಡದ್ದೇಕೆ? ನೀನು ಜಮೀನನ್ನು ಮಾರುವುದಕ್ಕಿಂತ ಮೊದಲು ಅದು ನಿನ್ನದೇ ಆಗಿತ್ತು. ನೀನು ಮಾರಿದ ಮೇಲೆಯೂ ಬಂದ ಹಣ ನಿನ್ನದೇ ಆಗಿತ್ತು. ಈ ಕೆಟ್ಟಕಾರ್ಯವನ್ನು ಮಾಡಲು ನೀನು ಯಾಕೆ ಯೋಚಿಸಿಕೊಂಡೆ? ನೀನು ಸುಳ್ಳು ಹೇಳಿದ್ದು ದೇವರಿಗೆ, ಮನುಷ್ಯರಿಗಲ್ಲ!” ಎಂದು ಹೇಳಿದನು.
ಅನನೀಯನು ಇದನ್ನು ಕೇಳಿದ ಕೂಡಲೇ ಕೆಳಗೆ ಬಿದ್ದು ಸತ್ತುಹೋದನು. ಕೆಲವು ಯೌವನಸ್ಥರು ಬಂದು ಅವನ ದೇಹವನ್ನು ಬಟ್ಟೆಯಲ್ಲಿ ಸುತ್ತಿದರು. ಅವರು ಅದನ್ನು ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು. ಇದರ ಬಗ್ಗೆ ಕೇಳಿದ ಪ್ರತಿಯೊಬ್ಬರೂ ಭಯಭ್ರಾಂತರಾದರು.