ಇಸ್ರಾಯೇಲರು ಮೋಶೆ ಮತ್ತು ಆರೋನರಿಗೆ, “ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ನಮ್ಮನ್ನು ಈ ಮರುಭೂಮಿಗೆ ಕರೆದುಕೊಂಡು ಬಂದಿದ್ದೀರಿ. ನಾವು ಐಗುಪ್ತ ದೇಶದಲ್ಲಿದ್ದಾಗ ಮಾಂಸದ ಪಾತ್ರೆಗಳ ಬಳಿಯಲ್ಲಿ ಕುಳಿತುಕೊಂಡು ಹೊಟ್ಟೆತುಂಬಾ ರೊಟ್ಟಿಯನ್ನು ತಿನ್ನುತ್ತಿದ್ದಾಗ ಯೆಹೋವನ ಕೈಯಿಂದ ಸತ್ತು ಹೋಗಿದ್ದರೆ ಎಷ್ಟೋ ಒಳ್ಳೆಯದಾಗಿತ್ತು” ಎಂದರು. ಆಗ ಯೆಹೋವನು ಮೋಶೆಗೆ, “ನಾನು ಆಕಾಶದಿಂದ ನಿಮಗಾಗಿ ಆಹಾರವನ್ನು ಸುರಿಸುತ್ತೇನೆ. ಜನರು ಪ್ರತಿದಿನವೂ ಹೊರಗೆ ಹೋಗಿ ಆ ದಿನಕ್ಕೆ ಬೇಕಾಗುವಷ್ಟನ್ನು ಮಾತ್ರ ಕೂಡಿಸಿಕೊಳ್ಳಬೇಕು. ಇದರಿಂದ ಅವರು ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುತ್ತೇನೆ.