ಮೊರ್ದಕೈಯು ಸಮೀಪದಲ್ಲಿಯೂ ದೂರದಲ್ಲಿಯೂ ಇದ್ದ ಅಹಷ್ವೇರೋಷನ ಎಲ್ಲಾ ಸಂಸ್ಥಾನಗಳ ಯೆಹೂದ್ಯರಿಗೆ ಪತ್ರಗಳ ಮುಖಾಂತರ ತಿಳಿಯಪಡಿಸಿದ ಸಂಗತಿಗಳು: ಪ್ರತಿವರ್ಷವೂ ಫಾಲ್ಗುಣಮಾಸದ ಹದಿನಾಲ್ಕನೆಯ ಮತ್ತು ಹದಿನೈದನೆಯ ದಿನಗಳನ್ನು ಉತ್ಸವದಿನಗಳನ್ನಾಗಿ ಆಚರಿಸುವುದು ಶಾಶ್ವತನಿಯಮ ಎಂದೆಣಿಸಬೇಕು. ಆ ದಿನಗಳಲ್ಲಿ ಯೆಹೂದ್ಯರಿಗೆ ಶತ್ರುಪೀಡೆ ತಪ್ಪಿ ವಿಶ್ರಾಂತಿ ಉಂಟಾಯಿತು. ಆ ತಿಂಗಳಿನಲ್ಲಿ ಸಂತಾಪವು ಪರಿಹಾರವಾಗಿ ಅವರಿಗೆ ಸಂತೋಷವುಂಟಾಯಿತು; ದುಃಖವು ಹೋಗಿ ಸುಖಕಾಲವು ಬಂದಿತು. ಆದುದರಿಂದ ಅವರು ಆ ದಿನಗಳಲ್ಲಿ ಉತ್ಸವಭೋಜನ ಮಾಡಿ ಒಬ್ಬರಿಗೊಬ್ಬರು ಭೋಜನ ಪದಾರ್ಥಗಳನ್ನು ವಿನಿಮಯ ಮಾಡಿಕೊಂಡು ಬಡವರಿಗೆ ದಾನಧರ್ಮ ಮಾಡಬೇಕು.