ಆಗ ಪೇತ್ರನು; “ಅನನೀಯನೇ, ನೀನು ಆ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸುವಂತೆ ಸೈತಾನನು ನಿನ್ನ ಹೃದಯದಲ್ಲಿ ಏಕೆ ತುಂಬಿಸಿಕೊಂಡಿ? ಆ ಆಸ್ತಿ ಮೊದಲು ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ, ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಏಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ” ಅಂದನು. ಈ ಮಾತುಗಳನ್ನು ಅನನೀಯನು ಕೇಳಿದ ತಕ್ಷಣವೇ ಬಿದ್ದು ಪ್ರಾಣಬಿಟ್ಟನು; ಕೇಳಿದವರೆಲ್ಲರಿಗೂ ಮಹಾ ಭಯ ಉಂಟಾಯಿತು.