ಆದಿ 25
25
ಅಬ್ರಹಾಮನ ಎರಡನೆಯ ಹೆಂಡತಿಯಿಂದಾದ ಸಂತಾನವನ್ನು ಕುರಿತದ್ದು
1ಪೂರ್ವ 1:32-33
1ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬ ಹೆಂಡತಿಯನ್ನು ಮದುವೆ ಮಾಡಿಕೊಂಡನು. 2ಆಕೆ ಅವನಿಗೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು. 3ಯೊಕ್ಷಾನನು ಶೆಬಾ, ದೆದಾನ್ ಎಂಬಿವರನ್ನು ಪಡೆದನು. ಅಶ್ಮೂರ್ಯರೂ, ಲೆಟೂಶ್ಯರೂ, ಲೆಯುಮ್ಯರೂ ದೆದಾನನಿಂದ ಹುಟ್ಟಿದವರು. 4ಗೇಫಾ, ಗೇಫೆರ್, ಹನೋಕ್, ಅಬೀದಾ, ಎಲ್ದಾಯ ಎಂಬುವವರು ಮಿದ್ಯಾನನಿಂದ ಹುಟ್ಟಿದರು. ಇವರೆಲ್ಲರೂ ಕೆಟೂರಳ ಸಂತತಿಯವರು.
5ಅಬ್ರಹಾಮನು ತನಗಿದ್ದ ಆಸ್ತಿಯನ್ನೆಲ್ಲಾ ಇಸಾಕನಿಗೆ ಕೊಟ್ಟನು. 6ಅಬ್ರಹಾಮನು ತನ್ನ ಉಪಪತ್ನಿಯರ ಮಕ್ಕಳಿಗೆ ಕೆಲವು ಸೊತ್ತುಗಳನ್ನು ದಾನಮಾಡಿ ತಾನು ಇನ್ನೂ ಜೀವದಿಂದಿರುವಾಗಲೇ ಅವರನ್ನು ತನ್ನ ಮಗನಾದ ಇಸಾಕನ ಬಳಿಯಿಂದ ಪೂರ್ವ ದಿಕ್ಕಿನಲ್ಲಿರುವ ಕೆದೆಮ್ ದೇಶಕ್ಕೆ ಕಳುಹಿಸಿ ಬಿಟ್ಟನು.
ಅಬ್ರಹಾಮನ ಮರಣ ಮತ್ತು ಸಮಾಧಿ
7ಅಬ್ರಹಾಮನು ನೂರ ಎಪ್ಪತ್ತೈದು ವರ್ಷ ಬದುಕಿದನು. 8ಅಬ್ರಹಾಮನು ಪೂರ್ಣಾಯುಷ್ಯದಿಂದ ದಿನತುಂಬಿದ ಮುದುಕನಾಗಿ ಪ್ರಾಣ ಬಿಟ್ಟು ತನ್ನ ಪೂರ್ವಿಕರ ಬಳಿಗೆ ಸೇರಿದನು. 9ಅವನ ಮಕ್ಕಳಾದ ಇಸಾಕ್, ಇಷ್ಮಾಯೇಲರು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಭೂಮಿಯಲ್ಲಿರುವ ಮಕ್ಪೇಲದ ಗವಿಯಲ್ಲಿ ಅವನನ್ನು ಸಮಾಧಿಮಾಡಿದರು. ಅದು ಮಮ್ರೆಯ ತೋಪಿನ ಪೂರ್ವದಿಕ್ಕಿನಲ್ಲಿದೆ. 10ಅಬ್ರಹಾಮನು ಅದನ್ನು ಹಿತ್ತಿಯರಿಂದ ಕೊಂಡುಕೊಂಡಿದ್ದನು. ಅದರಲ್ಲಿ ಅಬ್ರಹಾಮನಿಗೂ, ಅವನ ಹೆಂಡತಿಯಾದ ಸಾರಳಿಗೂ ಸಮಾಧಿ ಆಯಿತು. 11ಅಬ್ರಹಾಮನು ತೀರಿಹೋದ ನಂತರ ದೇವರ ಅನುಗ್ರಹವು ಅವನ ಮಗನಾದ ಇಸಾಕನ ಮೇಲೂ ಉಂಟಾಯಿತು. ಇಸಾಕನು ಬೆರ್ ಲಹೈರೋಯಿಯ ಹತ್ತಿರ ವಾಸವಾಗಿದ್ದನು.
ಇಷ್ಮಾಯೇಲನ ವಂಶಸ್ಥರನ್ನು ಕುರಿತದ್ದು
12ಅಬ್ರಹಾಮನಿಗೆ ಸಾರಳ ಐಗುಪ್ತ ದಾಸಿಯಾದ ಹಾಗರಳಲ್ಲಿ ಹುಟ್ಟಿದ ಇಷ್ಮಾಯೇಲನ ವಂಶದ ಚರಿತ್ರೆ.
13ಇಷ್ಮಾಯೇಲನ ಮಕ್ಕಳಿಗೂ ಇವರಿಂದ ಹುಟ್ಟಿದ ಕುಲಗಳಿಗೂ ಇರುವ ಹೆಸರುಗಳು ಯಾವುದೆಂದರೆ: ಮೊದಲು ಹುಟ್ಟಿದವನು ನೆಬಾಯೋತ್, ಆ ಮೇಲೆ ಹುಟ್ಟಿದವರು ಕೇದಾರ್, ಅದ್ಬಯೇಲ್, ಮಿಬ್ಸಾಮ್, 14ಮಿಷ್ಮಾ, ದೂಮಾ, ಮಸ್ಸಾ, 15ಹದದ್, ತೇಮಾ, ಯಟೂರ್, ನಾಫೀಷ್, ಕೇದ್ಮಾ ಎಂಬುವವರೇ. 16ವಂಶ ಪಾರಂಪರೆಯಾಗಿ ಊರುಗಳಲ್ಲಿಯೂ, ಪಾಳೆಯಗಳಲ್ಲಿಯೂ ವಾಸಿಸುವ ಇಷ್ಮಾಯೇಲನ ಸಂತಾನದವರೂ ಇವರೇ ಆಗಿದ್ದಾರೆ. ಇವರ ಕುಲಗಳ ಸಂಖ್ಯೆಗಳಿಗನುಸಾರವಾಗಿ ಹನ್ನೆರಡು ಮಂದಿ ಅರಸರಿರುತ್ತಾರೆ.
17ಇಷ್ಮಾಯೇಲನು ನೂರಮೂವತ್ತೇಳು ವರ್ಷ ಬದುಕಿದನು. ನಂತರ ಅವನು ಪ್ರಾಣ ಬಿಟ್ಟು ತನ್ನ ಪೂರ್ವಿಕರ ಬಳಿಗೆ ಸೇರಿದನು. 18ಇಷ್ಮಾಯೇಲ್ಯರು ಹವೀಲದಿಂದ ಐಗುಪ್ತ ದೇಶದ ಮೂಡಲಲ್ಲಿರುವ ಅಶ್ಶೂರಿನ ದಾರಿಯಲ್ಲಿರುವ ಶೂರಿನ ತನಕ ವಾಸಮಾಡಿದರು. ಹೀಗೆ ಅವರು ತಮ್ಮ ಸಂಬಂಧಿಕರ #25:18 ಪೂರ್ವದಿಕ್ಕಿನಲ್ಲಿ ವಾಸಿಸಿದರು.ಎದುರಾಗಿ ವಾಸಿಸಿದರು.
ಇಸಾಕನಿಗೆ ಅವಳಿ ಮಕ್ಕಳು ಹುಟ್ಟಿದ್ದು
19ಅಬ್ರಹಾಮನ ಮಗನಾದ ಇಸಾಕನ ಚರಿತ್ರೆ. 20ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನು ನಲವತ್ತು ವರ್ಷದವನಾದಾಗ ಅರಾಮ್ಯನಾದ ಬೆತೂವೇಲನ ಮಗಳೂ ಅರಾಮ್ಯನಾದ ಲಾಬಾನನ ತಂಗಿಯೂ ಆಗಿದ್ದ ರೆಬೆಕ್ಕಳನ್ನು ಪದ್ದನ್ ಅರಾಮಿನಿಂದ ಕರೆದುತಂದು ಹೆಂಡತಿಯನ್ನಾಗಿ ಮಾಡಿಕೊಂಡನು.
21ಆಕೆ ಬಂಜೆಯಾಗಿರಲಾಗಿ ಇಸಾಕನು ಆಕೆಗೊಸ್ಕರ ಯೆಹೋವನನ್ನು ಬೇಡಿಕೊಂಡನು. ಯೆಹೋವನು ಅವನ ವಿಜ್ಞಾಪನೆಯನ್ನು ಲಾಲಿಸಿದ್ದರಿಂದ ರೆಬೆಕ್ಕಳು ಬಸುರಾದಳು. 22ಆಕೆಯ ಗರ್ಭದಲ್ಲಿ ಶಿಶುಗಳು ಒಂದನ್ನೊಂದು ನೂಕಾಡುತ್ತಿದ್ದಾಗ ಆಕೆಯು, “ಹೀಗಾದರೆ ನಾನು ಹೇಗೆ ಬದುಕಬೇಕು” ಎಂದು ಹೇಳಿ ಇದರ ವಿಷಯದಲ್ಲಿ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ಹೋದಳು.
23ಯೆಹೋವನು ಆಕೆಗೆ,
“ನಿನ್ನ ಗರ್ಭದಲ್ಲಿ ಎರಡು ಜನಾಂಗಗಳು ಇವೆ;
ಆ ಎರಡು ಜನಾಂಗಗಳು ಹುಟ್ಟಿನಿಂದಲೇ ಭಿನ್ನವಾಗಿರುವವು;
ಅವುಗಳಲ್ಲಿ ಒಂದು ಮತ್ತೊಂದಕ್ಕಿಂತ ಬಲಿಷ್ಠವಾಗುವುದು;
ಹಿರಿಯವನು ಕಿರಿಯವನಿಗೆ ಸೇವೆ ಮಾಡುವನು” ಎಂದು ಹೇಳಿದನು.
24ಆಕೆ ದಿನತುಂಬಿದಾಗ ಅವಳಿ ಮಕ್ಕಳನ್ನು ಹೆತ್ತಳು. 25ಮೊದಲು ಹುಟ್ಟಿದ್ದು ಕೆಂಪಾಗಿಯೂ ಮೈಮೇಲೆಲ್ಲಾ ಕೂದಲಿನ ವಸ್ತ್ರದಂತೆ ರೋಮವುಳ್ಳದ್ದಾಗಿಯೂ ಇತ್ತು. ಅದಕ್ಕೆ “#25:25 ಮೈತುಂಬಾ ರೋಮವುಳ್ಳವನು.ಏಸಾವ” ಎಂದು ಹೆಸರಿಟ್ಟರು. 26ಎರಡನೆಯ ಶಿಶುವು ಏಸಾವನ ಹಿಮ್ಮಡಿಯನ್ನು ಕೈಯಿಂದ ಹಿಡಿದುಕೊಂಡು ಹುಟ್ಟಿದ್ದರಿಂದ ಅದಕ್ಕೆ “ಯಾಕೋಬ” ಎಂದು ಹೆಸರಿಟ್ಟರು. ಇವರಿಬ್ಬರು ಹುಟ್ಟಿದಾಗ ಇಸಾಕನು ಅರುವತ್ತು ವರ್ಷದವನಾಗಿದ್ದನು.
ಏಸಾವನು ಚೊಚ್ಚಲತನದ ಹಕ್ಕನ್ನು ಮಾರಿಬಿಟ್ಟದ್ದು
27ಆ ಹುಡುಗರಿಬ್ಬರೂ ಬೆಳೆದಾಗ ಅವರಲ್ಲಿ ಏಸಾವನು ಬೇಟೆಯಾಡುವುದರಲ್ಲಿ ನಿಪುಣನಾಗಿದ್ದನು; ಅವನು ಅರಣ್ಯವಾಸಿ. ಯಾಕೋಬನು ಸಾಧು ಮನುಷ್ಯನಾಗಿ ಗುಡಾರಗಳಲ್ಲೇ ವಾಸಿಸುತ್ತಿದ್ದನು. 28ಬೇಟೆಯ ಮಾಂಸವು ಇಸಾಕನಿಗೆ ಇಷ್ಟವಾದುದರಿಂದ ಅವನು ಏಸಾವನನ್ನು ಪ್ರೀತಿಸಿದನು; ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.
29ಒಂದು ದಿನ ಯಾಕೋಬನು ಅಡಿಗೆ ಮಾಡುತ್ತಿರುವಾಗ ಏಸಾವನು ಕಾಡಿನಿಂದ ದಣಿದು ಬಂದು ಅವನಿಗೆ, “ನಾನು ಬಹಳ ದಣಿದು ಬಂದಿದ್ದೇನೆ; 30ಆ ಕೆಂಪಾದ ರುಚಿ ಪದಾರ್ಥವನ್ನು ಈಗಲೇ ತಿನ್ನುವುದಕ್ಕೆ ಕೊಡು” ಎಂದು ಕೇಳಿದನು. ಈ ಸಂಗತಿಯಿಂದ ಏಸಾವನಿಗೆ “ಎದೋಮ್” ಎಂದು ಹೆಸರಾಯಿತು.
31ಯಾಕೋಬನು ಅವನಿಗೆ, “ನೀನು ಮೊದಲು ನಿನ್ನ ಚೊಚ್ಚಲತನದ ಹಕ್ಕನ್ನು ನನಗೆ ಮಾರಿ ಬಿಡು” ಅನ್ನಲು.
32ಏಸಾವನು, “ಆಗಲಿ” ನನ್ನಂಥ ಸಾಯುವವನಿಗೆ ಚೊಚ್ಚಲತನದಿಂದ ಪ್ರಯೋಜನವೇನು ಅಂದನು.
33ಆಗ ಯಾಕೋಬನು ಮೊದಲು ಪ್ರಮಾಣಮಾಡು ಅಂದಾಗ ಏಸಾವನು ಪ್ರಮಾಣಮಾಡಿ ಅವನಿಗೆ ತನ್ನ ಚೊಚ್ಚಲತನದ ಹಕ್ಕನ್ನು ಕೊಟ್ಟುಬಿಟ್ಟನು.
34ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿ ಗುಗ್ಗರಿಯ ಪಲ್ಯವನ್ನು ಕೊಟ್ಟನು. ಏಸಾವನು ತಿಂದು ಕುಡಿದು ಎದ್ದು ಹೋದನು. ಹೀಗೆ ಅವನು ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿ ಬಿಟ್ಟನು.
المحددات الحالية:
ಆದಿ 25: IRVKan
تمييز النص
شارك
نسخ
![None](/_next/image?url=https%3A%2F%2Fimageproxy.youversionapi.com%2F58%2Fhttps%3A%2F%2Fweb-assets.youversion.com%2Fapp-icons%2Far.png&w=128&q=75)
هل تريد حفظ أبرز أعمالك على جميع أجهزتك؟ قم بالتسجيل أو تسجيل الدخول
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.