ಆದಿ 12
12
ದೇವರು ಅಬ್ರಾಮನನ್ನು ಕರೆದದ್ದು
1ಯೆಹೋವನು ಅಬ್ರಾಮನಿಗೆ, “ನೀನು, ನಿನ್ನ ಸ್ವದೇಶವನ್ನೂ, #12:1 ಅಥವಾ ಜನ್ಮಸ್ಥಳದಿಂದ.ಬಂಧುಬಳಗವನ್ನೂ, ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. 2ನಾನು ನಿನ್ನನ್ನು ಮಹಾ ಜನಾಂಗವಾಗುವಂತೆ ಮಾಡಿ, ಆಶೀರ್ವದಿಸಿ, ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದದ ನಿಧಿಯಾಗುವಿ. 3ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು; ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವುದು” ಎಂದು ಹೇಳಿದನು.
4ಯೆಹೋವನು ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು. ಲೋಟನೂ ಅವನ ಸಂಗಡ ಹೋದನು. ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು. 5ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ, ತನ್ನ ತಮ್ಮನ ಮಗನಾದ ಲೋಟನನ್ನೂ, ತಾನೂ ಲೋಟನೂ ಹಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ, ದಾಸ ದಾಸಿಯರನ್ನೂ ತೆಗೆದುಕೊಂಡು ಕಾನಾನ್ ದೇಶಕ್ಕೆ ಬಂದನು.
6ಅಬ್ರಾಮನು ಆ ದೇಶದಲ್ಲಿ ಸಂಚರಿಸುತ್ತಾ ಶೆಕೆಮ್ ಸ್ಥಳದಲ್ಲಿರುವ ಮೋರೆ ಎಂಬ ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ದೇಶದಲ್ಲಿದ್ದರು. 7ಅಲ್ಲಿ ಯೆಹೋವನು ಅಬ್ರಾಮನಿಗೆ ದರ್ಶನದಲ್ಲಿ, “ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು” ಅಂದನು. ತನಗೆ ದರ್ಶನಕೊಟ್ಟ ಯೆಹೋವನಿಗೆ ಅಬ್ರಾಮನು ಯಜ್ಞವೇದಿಯನ್ನು ಕಟ್ಟಿಸಿದನು.
8ಅವನು ಅಲ್ಲಿಂದ ಹೊರಟು ಬೇತೇಲಿನ ಪೂರ್ವದಲ್ಲಿರುವ ಗುಡ್ಡಕ್ಕೆ ಬಂದು ತನ್ನ ಗುಡಾರವನ್ನು ಹಾಕಿ ಇಳಿದುಕೊಂಡನು. ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರುಗಳಿದ್ದವು. ಅಲ್ಲಿಯೂ ಅಬ್ರಾಮನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಆತನ ಹೆಸರಿನಲ್ಲಿ ಆರಾಧಿಸಿದನು. 9ತರುವಾಯ ಅಬ್ರಾಮನು ಅಲ್ಲಿಂದ ಹೊರಟು ಕಾನಾನ್ ದೇಶದ ದಕ್ಷಿಣ ಸೀಮೆಗೆ ಪ್ರಯಾಣ ಮಾಡುತ್ತಾ ಹೋದನು.
ಅಬ್ರಾಮನು ಮತ್ತು ಸಾರಳು ಐಗುಪ್ತ ದೇಶದಲ್ಲಿ
10ದಕ್ಷಿಣ ಕಾನಾನ್ ದೇಶದಲ್ಲಿ ಘೋರ ಕ್ಷಾಮವಿದ್ದುದರಿಂದ, ಅಬ್ರಾಮನು ಅಲ್ಲಿರದೆ, ಐಗುಪ್ತ ದೇಶದಲ್ಲಿ ಕೆಲವು ಕಾಲ ಇರಬೇಕೆಂದು ಆ ಬೆಟ್ಟದ ಸೀಮೆಯಿಂದ ಇಳಿದು ಹೋದನು. 11ಅವನು ಐಗುಪ್ತ ದೇಶದ ಹತ್ತಿರಕ್ಕೆ ಬಂದಾಗ ತನ್ನ ಹೆಂಡತಿಯಾದ ಸಾರಯಳಿಗೆ, “ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ; 12ಐಗುಪ್ತ ದೇಶದವರು ನಿನ್ನನ್ನು ಕಂಡು, ಈಕೆಯು ಇವನ ಹೆಂಡತಿ ಎಂದು ತಿಳಿದು ನನ್ನನ್ನು ಕೊಂದು ನಿನ್ನನ್ನು ಉಳಿಸಬಹುದು. 13ಆದಕಾರಣ ನೀನು ನನಗೆ ತಂಗಿಯಾಗಬೇಕೆಂದು ಅವರಿಗೆ ಹೇಳು; ಹೀಗೆ ಹೇಳಿದರೆ ನಿನ್ನ ನಿಮಿತ್ತ ನನಗೆ ಹಿತವಾಗುವುದು, ನಾನು ನಿನ್ನ ದೆಸೆಯಿಂದ ಸಾಯದೆ ಬದುಕುವೆನು” ಎಂದು ಹೇಳಿದನು.
14ಅಬ್ರಾಮನು ಐಗುಪ್ತ ದೇಶಕ್ಕೆ ಬಂದಾಗ ಐಗುಪ್ತರು ಅವನ ಸಂಗಡ ಇದ್ದ ಸ್ತ್ರೀಯನ್ನು ನೋಡಿ ಬಹು ಸುಂದರಿ ಎಂದು ಅಂದುಕೊಂಡರು. 15ಫರೋಹನ ರಾಜಕುಮಾರರು ಆಕೆಯನ್ನು ನೋಡಿ ಬಂದು, ಅವನ ಮುಂದೆ ಹೊಗಳಲಾಗಿ ಫರೋಹನು ಆ ಸ್ತ್ರೀಯನ್ನು ಅರಮನೆಗೆ ಕರೆಯಿಸಿ ಆಕೆಯ ನಿಮಿತ್ತ ಅಬ್ರಾಮನಿಗೆ ಉಪಕಾರ ಮಾಡಿದನು. 16ಆಗ ಅಬ್ರಾಮನಿಗೆ ಕುರಿ, ಎತ್ತು, ಗಂಡು, ಹೆಣ್ಣು ಕತ್ತೆಗಳು, ದಾಸದಾಸಿಯರು, ಒಂಟೆಗಳು, ದೊರಕಿದವು.
17ಆದರೆ ಯೆಹೋವನು ಫರೋಹನಿಗೂ ಅವನ ಮನೆಯವರಿಗೂ ಅಬ್ರಾಮನ ಹೆಂಡತಿಯಾದ ಸಾರಯಳ ನಿಮಿತ್ತ ಬಹಳ ಉಪದ್ರವಗಳಿಂದ ಬಾಧಿಸಿದನು. 18ಆಗ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ಏಕೆ ಹೀಗೆ ಮಾಡಿದೆ? ಆಕೆ ನಿನ್ನ ಹೆಂಡತಿಯೆಂದು ಏಕೆ ನನಗೆ ತಿಳಿಸಲಿಲ್ಲ? 19ತಂಗಿಯೆಂದು ಯಾಕೆ ಹೇಳಿದೆ? ಹೀಗೆ ಹೇಳಿದ್ದರಿಂದ ಆಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡೆನಲ್ಲಾ. ಇಗೋ ನಿನ್ನ ಹೆಂಡತಿ; ಕರೆದುಕೊಂಡು ಹೋಗು” ಎಂದು ಹೇಳಿ, 20ಫರೋಹನು ಅವನ ವಿಷಯವಾಗಿ ತನ್ನ ಸೇವಕರಿಗೆ ಅಪ್ಪಣೆಕೊಡಲು ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗೆ ಇದ್ದದ್ದೆಲ್ಲವನ್ನೂ ಒಟ್ಟಿಗೆ ಸೇರಿಸಿ ಕಳುಹಿಸಿ ಬಿಟ್ಟರು.
المحددات الحالية:
ಆದಿ 12: IRVKan
تمييز النص
شارك
نسخ
هل تريد حفظ أبرز أعمالك على جميع أجهزتك؟ قم بالتسجيل أو تسجيل الدخول
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.