ಆದಿಕಾಂಡ 8

8
1ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಕಾಡುಮೃಗಗಳನ್ನೂ ಪಶುಗಳನ್ನೂ ನೆನಪಿಗೆ ತಂದುಕೊಂಡು, ಭೂಲೋಕದ ಮೇಲೆ ಗಾಳಿಬೀಸುವಂತೆ ಮಾಡಲಾಗಿ, ನೀರು ತಗ್ಗಿತು. 2ಮಾತ್ರವಲ್ಲದೆ ಸಾಗರದ ಸೆಲೆಗಳೂ, ಆಕಾಶದ ದ್ವಾರಗಳೂ ಮುಚ್ಚಿಹೋದವು. ಆಕಾಶದಿಂದ ಬೀಳುವ ಮಳೆ ನಿಂತುಹೋಯಿತು. 3ಹೀಗೆ ನೀರು ಭೂಮಿಯ ಮೇಲಿನಿಂದ ಕ್ರಮವಾಗಿ ಇಳಿಯಿತು. ನೀರು ನೂರೈವತ್ತು ದಿನಗಳ ಅಂತ್ಯದಲ್ಲಿ ಕಡಿಮೆಯಾಯಿತು. 4ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಬೆಟ್ಟಗಳ ಮೇಲೆ ನಿಂತಿತು. 5ಹತ್ತನೆಯ ತಿಂಗಳಿನವರೆಗೂ ನೀರು ಕಡಿಮೆಯಾಗುತ್ತಾ ಬಂತು, ಹತ್ತನೆಯ ತಿಂಗಳಿನ ಮೊದಲಿನ ದಿನದಲ್ಲಿ ಬೆಟ್ಟಗಳ ಶಿಖರಗಳು ಕಾಣಿಸಲಾರಂಭಿಸಿದವು.
6ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದನು. 7ಅವನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು, ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು. 8ಭೂಮುಖದ ಮೇಲೆ ಜಲವು ಕಡಿಮೆಯಾಯಿತೋ ಇಲ್ಲವೋ ಎಂದು ನೋಡುವಂತೆ, ಒಂದು ಪಾರಿವಾಳವನ್ನೂ ಹೊರಕ್ಕೆ ಕಳುಹಿಸಿದನು. 9ಆದರೆ ನೀರು ಭೂಮಿಯ ಮೇಲೆಲ್ಲಾ ಇರುವುದರಿಂದ ಪಾರಿವಾಳವು ಕಾಲಿಡುವುದಕ್ಕೂ ಸ್ಥಳವನ್ನು ಕಾಣದೆ, ಅವನ ಬಳಿಗೆ ನಾವೆಗೆ ಹಿಂದಿರುಗಿತು. ಅವನು ಕೈಚಾಚಿ ಅದನ್ನು ಹಿಡಿದು, ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು. 10ಅವನು ಇನ್ನೂ ಏಳು ದಿವಸ ತಡೆದು, ಪಾರಿವಾಳವನ್ನು ಪುನಃ ನಾವೆಯೊಳಗಿಂದ ಹೊರಕ್ಕೆ ಬಿಟ್ಟನು. 11ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರುಗಿ ಬರಲು, ಅದರ ಬಾಯಿಯಲ್ಲಿ ಓಲಿವ್ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದಿದೆಯೆಂದು ತಿಳಿದುಕೊಂಡನು. 12ಇನ್ನೂ ಏಳು ದಿನಗಳು ತಡೆದು, ಆ ಪಾರಿವಾಳವನ್ನು ಬಿಟ್ಟಾಗ, ಅದು ತಿರುಗಿ ಅವನ ಬಳಿಗೆ ಬರಲೇ ಇಲ್ಲ.
13ಆರುನೂರ ಒಂದನೆಯ ವರ್ಷದ, ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಮೇಲಿನ ಮುಚ್ಚಳವನ್ನು ತೆಗೆದು ನೋಡಲಾಗಿ, ನೆಲವು ಒಣಗಿತ್ತು. 14ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿಯು ಒಣಗಿತ್ತು.
15ಆಗ ದೇವರು ನೋಹನಿಗೆ, 16“ನೀನು, ನಿನ್ನ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ. 17ನಿನ್ನ ಬಳಿಯಲ್ಲಿರುವ ಪಕ್ಷಿ, ಪಶು, ಕ್ರಿಮಿ, ಮುಂತಾದ ಎಲ್ಲಾ ಜೀವಿಗಳನ್ನು ಹೊರಗೆ ತೆಗೆದುಕೊಂಡು ಬಾ. ಅವುಗಳಿಗೆ ಭೂಮಿಯ ಮೇಲೆ ಬಹು ಸಂತಾನವಾಗಲಿ, ಅವು ಅಭಿವೃದ್ಧಿಯಾಗಿ ಹೆಚ್ಚಲಿ,” ಎಂದು ಹೇಳಿದರು.
18ಹೀಗೆ ನೋಹನು, ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ಹೊರಗೆ ಬಂದನು. 19ಎಲ್ಲಾ ಮೃಗಗಳೂ ಎಲ್ಲಾ ಕ್ರಿಮಿಗಳೂ ಎಲ್ಲಾ ಪಕ್ಷಿಗಳೂ ಭೂಮಿಯಲ್ಲಿ ಹರಿದಾಡುವ ಎಲ್ಲವೂ ತಮ್ಮ ತಮ್ಮ ಜಾತಿಗನುಸಾರವಾಗಿ ನಾವೆಯೊಳಗಿಂದ ಹೊರಗೆ ಬಂದವು.
20ನೋಹನು ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಶುದ್ಧವಾದ ಪ್ರತಿ ಪಶುಗಳಿಂದಲೂ ಶುದ್ಧವಾದ ಪ್ರತಿ ಪಕ್ಷಿಗಳಿಂದಲೂ ಕೆಲವೊಂದನ್ನು ಆಯ್ದುಕೊಂಡು, ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು. 21ಅದರ ಸುವಾಸನೆಯು ಯೆಹೋವ ದೇವರಿಗೆ ಗಮಗಮಿಸಲು, ಅವರು ಹೃದಯದೊಳಗೆ, “ಮನುಷ್ಯನ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು, ಆದರೂ ನಾನು ಇನ್ನು ಮೇಲೆ ಮನುಷ್ಯರ ನಿಮಿತ್ತವಾಗಿ ಭೂಮಿಯನ್ನು ಶಪಿಸುವುದಿಲ್ಲ. ನಾನು ಎಲ್ಲಾ ಜೀವಿಗಳನ್ನೂ ಸಂಹರಿಸಿದಂತೆ ಇನ್ನು ಮೇಲೆ ಸಂಹರಿಸುವುದಿಲ್ಲ.
22“ಭೂಮಿಯು ಇರುವವರೆಗೆ
ಬಿತ್ತುವ ಕಾಲವೂ ಕೊಯ್ಯುವ ಕಾಲವೂ;
ತಂಪೂ ಸೆಕೆಯೂ;
ಬೇಸಿಗೆಯೂ ಹಿಮಕಾಲವೂ;
ಹಗಲೂ ರಾತ್ರಿಯೂ
ನಿಂತುಹೋಗುವುದಿಲ್ಲ.”

Currently Selected:

ಆದಿಕಾಂಡ 8: KSB

ማድመቅ

ያጋሩ

ኮፒ

None

ያደመቋቸው ምንባቦች በሁሉም መሣሪያዎችዎ ላይ እንዲቀመጡ ይፈልጋሉ? ይመዝገቡ ወይም ይግቡ